ರಾಯಚೂರು: ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳನ್ನು ತಿಪ್ಪೆ ರಾಶಿಗೆ ಎಸೆದ ಸಿಬ್ಬಂದಿ!
ರಾಯಚೂರಿನ ಬಸವೇಶ್ವರ ವೃತ್ತದ ಬಳಿ ಬಡ ರೋಗಿಗಳಿಗೆ ತಲುಪಬೇಕಿದ್ದ ಆರೋಗ್ಯ ಇಲಾಖೆಯ ಔಷಧಗಳು ತಿಪ್ಪೆಗೆ ಸೇರಿವೆ. ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಬಳಸುವ ಈ ಔಷಧಿಗಳು ಸೆಪ್ಟೆಂಬರ್ನಲ್ಲಿ ಅವಧಿ ಮುಗಿದಿವೆ. ಈ ವರ್ಷದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ಮತ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ರಾಯಚೂರು, ಅಕ್ಟೋಬರ್ 14: ರಾಯಚೂರಿನ ಬಸವೇಶ್ವರ ವೃತ್ತದ ಬಳಿ ಆರೋಗ್ಯ ಇಲಾಖೆಗೆ ಸೇರಿದ ಸಾವಿರಾರು ರೂಪಾಯಿ ಮೌಲ್ಯದ ಔಷಧಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಬಳಸುವ ಈ ಔಷಧಗಳು ಬಡ ರೋಗಿಗಳಿಗೆ ತಲುಪಬೇಕಿತ್ತು. ಆದರೆ, ಅವು ಬಳಕೆಗೆ ಬಾರದೆ ತಿಪ್ಪೆಗೆ ಎಸೆಯಲಾಗಿದೆ. ಇದು ರಾಯಚೂರಿನಲ್ಲಿ ಇಂತಹ ಎರಡನೇ ಘಟನೆಯಾಗಿದೆ. ಈ ಹಿಂದೆಯೂ ಫೆಬ್ರವರಿಯಲ್ಲಿ ಎಲ್ಬಿಎಸ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆಗಲೂ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು, ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿ ತಿಳಿದುಬಂದಿಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರಿಯಾದ ಔಷಧಗಳು ಸಿಗದೆ ರೋಗಿಗಳು ಖಾಸಗಿ ಮೆಡಿಕಲ್ ಶಾಪ್ಗಳಿಗೆ ಹೋಗಬೇಕಾದ ಪರಿಸ್ಥಿತಿ ಇರುವಾಗ, ಇಲಾಖೆಯ ಔಷಧಗಳು ಹೀಗೆ ಪೋಲಾಗುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲಾಖೆಯ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
