IPL 2025: ಆರ್‌ಸಿಬಿಗೆ ವಿಲನ್ ಆದ ಮೊಹಮ್ಮದ್ ಸಿರಾಜ್; ವಿಡಿಯೋ ನೋಡಿ
Mohammed Siraj's Revenge: ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಆರ್ಸಿಬಿ ತವರಿನ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಕಳಪೆ ಪ್ರದರ್ಶನ ನೀಡಿದೆ. ಮಾಜಿ ಆಟಗಾರ ಮೊಹಮ್ಮದ್ ಸಿರಾಜ್ ಅವರು ದೇವದತ್ ಪಡಿಕ್ಕಲ್ ಮತ್ತು ಫಿಲ್ ಸಾಲ್ಟ್ ಅವರನ್ನು ಔಟ್ ಮಾಡಿ ಆರ್‌ಸಿಬಿಗೆ ದೊಡ್ಡ ಹೊಡೆತ ನೀಡಿದರು. ಸಿರಾಜ್‌ರ ಈ ಪ್ರದರ್ಶನ ಆರ್‌ಸಿಬಿಗೆ ಆಘಾತವನ್ನುಂಟುಮಾಡಿದೆ.
ತವರಿನ ಹೊರಗೆ ಆಡಿದ ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದ್ದ ಆರ್ಸಿಬಿ, ಇದೀಗ ತವರಿನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದೆ. ಆದರೆ ತವರಿನಲ್ಲಿ ಆಡುತ್ತಿರುವ ಮೊದಲ ಪಂದ್ಯದಲ್ಲೇ ರೆಡ್ ಆರ್ಮಿ ಮುಗ್ಗರಿಸಿದಂತಿದೆ. ಗುಜರಾತ್ ಟೈಟನ್ಸ್ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಮೂರನೇ ಪಂದ್ಯವನ್ನು ಆಡುತ್ತಿರುವ ಆರ್ಸಿಬಿ, ಗುಜರಾತ್ ಬೌಲರ್ಗಳ ದಾಳಿಗೆ ತತ್ತರಿಸಿ ಹೋಗಿದೆ. ಅದರಲ್ಲೂ ಮಾಜಿ ಆರ್ಸಿಬಿ ಆಟಗಾರ ಮೊಹಮ್ಮದ್ ಸಿರಾಜ್ ಆರ್‌ಸಿಬಿಗೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ನೀಡಿ ತನ್ನನ್ನು ತಂಡದಿಂದ ಕೈಬಿಟ್ಟ ಫ್ರಾಂಚೈಸಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ತಾನು ಬೌಲಿಂಗ್ ಮಾಡಿದ ಎರಡನೇ ಓವರ್ನಲ್ಲೇ ಆರ್‌ಸಿಬಿಗೆ ಆಘಾತ ನೀಡಿದ ಮೊಹಮ್ಮದ್ ಸಿರಾಜ್, ಕನ್ನಡಿಗ ದೇವದತ್ ಪಡಿಕ್ಕಲ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಸಿರಾಜ್ ಓವರ್ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಪಡಿಕ್ಕಲ್ ನಂತರದ ಎಸೆತದವನ್ನು ಸಹ ಬೌಂಡರಿಗಟ್ಟುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಆರ್‌ಸಿಬಿಗೆ ಇನ್ನೊಂದು ಶಾಕ್ ನೀಡಿದ ಸಿರಾಜ್, ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ರನ್ನು ಬೌಲ್ಡ್ ಮಾಡಿದರು.
ಈ ಓವರ್ನಲ್ಲೂ ಸಹ ಸಿರಾಜ್ ಎಸೆತಕ್ಕೆ ಔಟಾಗುವುದಕ್ಕೂ ಮುನ್ನ ಭರ್ಜರಿ ಸಿಕ್ಸರ್ ಸಿಡಿಸಿದ ಫಿಲ್ ಸಾಲ್ಟ್ ನಂತರದ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು. ವಾಸ್ತವವಾಗಿ ಸಿರಾಜ್ ಓವರ್ನ ಮೊದಲ ಎಸೆತದಲ್ಲೇ ಸಾಲ್ಟ್ ವಿಕೆಟ್ ಪಡೆಯುವುದರಲ್ಲಿದ್ದರು. ಆದರೆ ವಿಕೆಟ್ ಕೀಪರ್ ಜೋಸ್ ಬಟ್ಲರ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದರು. ಆದರೆ ಈ ಜೀವದಾನವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಾಲ್ಟ್ ಎಡವಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ