ಕಲಬುರಗಿ: ಕೆಲದಿನಗಳ ಹಿಂದೆ ದಲಿತರ (Dalits) ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಒಬ್ಬ ಸ್ವಾಮೀಜಿ ನಡುವೆ ವಾಗ್ವಾದ (argument) ನಡೆದಿತ್ತು. ಕುಮಾರಸ್ವಾಮಿ ಅವರು ದಲಿತರನ್ನು ತಮ್ಮ ಮನೆಯಲ್ಲಿ ಬಿಟ್ಟುಕೊಳ್ಳುತ್ತಾರಾ? ಅಂತ ಸವಾಲು ಹಾಕಿದ್ದರು ಮತ್ತು ಹೆಚ್ ಡಿ ಕೆ ಸದರಿ ಸ್ವಾಮೀಜಿಯವರಿಗೆ ಎರಡು ದಿನಗಳ ಮಟ್ಟಿಗೆ ತಮ್ಮ ಮನೆಯಲ್ಲಿ ಅತಿಥಿಯಾಗಿರಲು ಆಮಂತ್ರಿಸಿ, ತಮ್ಮ ಮನೆಗೆ ಯಾರೆಲ್ಲ ಬರುತ್ತಾರೆ ಅಂತ ವೀಕ್ಷಿಸಲು ಹೇಳಿದ್ದರು. ಸಹಾಯ ಕೇಳಿಕೊಂಡು ಬರುವ ಯಾರೊಬ್ಬರಿಗೂ ಅವರ ಜಾತಿ ಬಗ್ಗೆ ವಿಚಾರಿಸಿ ತಾವು ನೆರವು ನೀಡುವುದಿಲ್ಲ ಅಂತ ಅವರು ಹೇಳಿದ್ದರು. ಅವರು ಆಡಿದ ಮಾತುಗಳಿಂದ ಬಕಳಷ್ಟು ಸ್ವಾಮೀಜಿಗಳು ಅಸಮಾಧಾನಗೊಂಡಿದ್ದಾರೆ.
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಲಬುರಗಿಯಲ್ಲಿ ಕುಮಾರಸ್ವಾಮಿ ಅವರಿಗೆ ಮತ್ತೊಂದು ಬಗೆಯ ಸವಾಲು ಹಾಕಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಅಷ್ಟೆಲ್ಲ ಕಾಳಜಿ ಮತ್ತಯ ಪ್ರೀತಿ ಇರುವ ಕುಮಾರಸ್ವಾಮಿ ಒಂದು ವೇಳೆ ಜೆಡಿ(ಎಸ್) ಪಕ್ಷ ಅಧಿಕಾರಕ್ಕೆ ಬಂದರೆ ಒಬ್ಬ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮತ್ತು ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರಾ? ಅಂತ ಪ್ರಶ್ನಿಸಿದ್ದಾರೆ.
ಅವರ ಮನೆಗೆ ದಲಿತರು ಹೋಗವುದು ನಿಜವಿರಬಹುದು, ಆದರೆ ನಿಮ್ಮ ಮನೆಯ ದೇವರಕೋಣೆಯಲ್ಲಿ ದಲಿತರನ್ನು ಬರಮಾಡಿಕೊಳ್ಳುತ್ತೀರಾ, ಅಲ್ಲಿ ಅವರಿಗೆ ಪ್ರವೇಶವಿದೆಯೇ ಎಂದು ಕೇಳಿದ ಪ್ರಶ್ನೆಗೆ ಅವರಿಂದ ಉತ್ತರವಿಲ್ಲ ಎಂದು ಸಿದ್ದಲಿಂಗ ಸ್ವಾಮೀಜಿ ಅವರು ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಂದ ಮಠಮಾನ್ಯಗಳಿಗೆ ಮತ್ತು ಮಠಾಧೀಶರಿಗೆ ಅವಮಾನವಾಗುತ್ತಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ತುಮಕೂರು: ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಮುಖಂಡರಿಂದ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ