ಆಫ್ಘನ್ ಜನ ತಾಲಿಬಾನಿಗಳನ್ನು ಶಪಿಸಬೇಕೋ ಅಥವಾ ಕೇವಲ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸಿದ ತಮ್ಮ ನಾಯಕರನ್ನೋ?

ಆಫ್ಘನ್ ಜನ ತಾಲಿಬಾನಿಗಳನ್ನು ಶಪಿಸಬೇಕೋ ಅಥವಾ ಕೇವಲ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸಿದ ತಮ್ಮ ನಾಯಕರನ್ನೋ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2021 | 7:48 PM

2001 ರಿಂದ 2021 ರ ವರೆಗೆ ಈ ದೇಶವನ್ನಾಳಿದ ನಾಯಕರಿಗೆ ದೇಶದ ಅಭಿವೃದ್ಧಿ, ಸಂಪನ್ಮೂಲಗಳ ಸದ್ಬಳಕೆ, ಯಾರು ಸ್ನೇಹಿತರು ಶತ್ರುಗಳು ಯಾರು ಸ್ನೇಹಿತರು ಮೊದಲಾದ ಮೂಲಭೂತ ಸಂಗತಿಗಳು ತಲೆಗೆ ಹೊಳೆಯಲಿಲ್ಲ

ಅಫಘಾನಿಸ್ತಾನದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೊರಗಡೆಯಿಂದ ಅದಕ್ಕೆ ಸಹಾಯ ಲಭ್ಯವಾಗದು. ಪಂಜಶೀರ್ ನಾಯಕ ಅಹ್ಮದ್ ಮಸ್ಸೂದ್ ಮೇಲೆ ನಿರೀಕ್ಷೆಯನ್ನಿಟ್ಟುಕೊಂಡು ಪರಿಸ್ಥಿತಿ ಬದಲಾಗಬಹುದು ಅಂತ ಅಫಘಾನಿಸ್ತಾನನದ ಜನ ಭಾವಿಸಿದ್ದಾರೆ. ಮಸ್ಸೂದ್ ಮತ್ತು ಪಂಜಶೀರ್ ಜನ ಪರಾಕ್ರಮಿಗಳು ನಿಜ ಆದರೆ, ತಾಲಿಬಾನಿ ಸೇನೆಯ ಬಲ ಜಾಸ್ತಿ ಮತ್ತು ಅವರಲ್ಲಿ ಅತ್ಯಾಧುನಿಕ ಆಯುಧಗಳಿವೆ. ಒಂದು ವೇಳೆ, ಪಂಜಶೀರ್ ಸಹ ತಾಲಿಬಾನಿಗಳ ವಶವಾದರೆ, ಅಫಘಾನಿಸ್ತಾನವನ್ನು ಉಗ್ರರ ಪ್ರತಾಪದಿಂದ ತಪ್ಪಿಸುವುದು ಅಸಾಧ್ಯವಾಗಿಬಿಡುತ್ತದೆ.

ನಾವಿಲ್ಲಿ ಒಂದು ಮಹತ್ತರವಾದ ಸಂಗತಿಯನ್ನು ಗಮನಿಸಬೇಕಿದೆ. ಕೇವಲ ತಾಲಿಬಾನಿಗಳಿಂದಾಗಿ ಅಪಘಾನಿಸ್ತಾನ ಸದ್ಯದ ಸ್ಥಿತಿ ತಲುಪಿಲ್ಲ. 2001 ರಿಂದ 2021 ರ ವರೆಗೆ ಈ ದೇಶವನ್ನಾಳಿದ ನಾಯಕರಿಗೆ ದೇಶದ ಅಭಿವೃದ್ಧಿ, ಸಂಪನ್ಮೂಲಗಳ ಸದ್ಬಳಕೆ, ಯಾರು ಸ್ನೇಹಿತರು ಶತ್ರುಗಳು ಯಾರು ಸ್ನೇಹಿತರು ಮೊದಲಾದ ಮೂಲಭೂತ ಸಂಗತಿಗಳು ತಲೆಗೆ ಹೊಳೆಯಲಿಲ್ಲ. ಎರಡು ದಶಕಗಳ ಕಾಲ ಅಮೇರಿಕ ಮತ್ತು ನ್ಯಾಟೊ ಸೇನೆಗಳು ದೇಶದಲ್ಲಿ ಬೀಡುಬಿಟ್ಟಿದ್ದರೂ ಅವರ ಸಹಾಯದಿಂದ ತಾಲಿಬಾನಿಗಳ ಹೆಡೆಮುರಿ ಕಟ್ಟಿ ಸದೆಬಡಿಯುವ ಪ್ರಯತ್ನ ಆ ನಾಯಕರಿಂದ ಆಗಲಿಲ್ಲ. ತಾಲಿಬಾನಿಗಳ ವಿಚಾರದಲ್ಲಿ ಮೌನ ತಳೆದು ಅವರು ಪ್ರಬಲರಾಗುವುದಕ್ಕೆ ಆಸ್ಪದ ಮಾಡಿಕೊಟ್ಟರು. ವಿದೇಶಿ ಸೇನೆಗಳು ವಾಪಸ್ಸು ಹೋದ ನಂತರ ತಾಲಿಬಾನ್ ಪುಂಡಾಟ ಮುಂದುವರೆಸುತ್ತದೆ ಎಂಬ ಜ್ಞಾನವೂ ಅವರಿಗೆ ಇಲ್ಲದೆ ಹೋಗಿದ್ದು ಅಕ್ಷಮ್ಯ.

ಬೇರೆ ರಾಷ್ಟ್ರಗಳಂತೆ ನಾವೂ ಮುಂದುವರಿಯಬೇಕು ನಮ್ಮ ಮುಂದಿನ ಪೀಳಿಗೆ ಯುದ್ಧ, ಹಿಂಸೆ, ದೊಂಬಿ ಮೊದಲಾದವುಗಳನ್ನು ನೋಡುವಂತಾಗಬಾರದು, ಅವರು ನೆಮ್ಮದಿಯ ಬದುಕು ನಡೆಸುವ ಪರಿಸ್ಥಿತಿ ನಿರ್ಮಾಣ ಮಾಡಬೇಕು ಅಂತ ಯೋಚಿಸದಿರುವುದನ್ನು ಅವರು ನಂಬಿಕೊಂಡಿರುವ ದೇವರು ಸಹ ಕ್ಷಮಿಸಲಾರ. ಈಗ ನೋಡಿ ಏನಾಗಿದೆ. ಚಿಕ್ಕ ಚಿಕ್ಕ ಮಕ್ಕಳು ಯಾವುದೋ ಬಯಲು ಪ್ರದೇಶದಲ್ಲಿ ಹಗಲಿನ ಬಿಸಿಲಲ್ಲಿ ಬೆಂದು ಮತ್ತು ರಾತ್ರಿಯ ಚಳಿಯಲ್ಲಿ ನಡುಗುತ್ತಾ ದಿನಗಳೆಯುವ ದಾರುಣ ಬದುಕು ನಡೆಸುತ್ತಿದ್ದಾರೆ.

ಆಫ್ಘನ್ ನಾಯಕರಲ್ಲಿನ ಇಚ್ಛಾಶಕ್ತಿಯ ಕೊರತೆ, ದೂರದೃಷ್ಟಿಯ ಅಭಾವ, ಸ್ವಾರ್ಥ, ಲಂಚಗುಳಿತನಳಿಂದಾಗಿ ಅಲ್ಲಿನ ಜನರು ತಾಲಿಬಾನಿಗಳಿಗಿಂತ ಹೆಚ್ಚು ಈ ನಾಯಕರನ್ನೇ ಶಪಿಸುತ್ತಿದ್ದಾರೆ. ತನ್ನ ಜೀವಕ್ಕೆ ಕುತ್ತು ಬಂದೀತು ಅಂತ ದೇಶದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ, ಸೂಟ್ಕೇಸ್ಗಳಲ್ಲಿ ಆಫ್ಘನ್ ಜನರ ಹಣ ತುಂಬಿಕೊಂಡು ಯುಎಈಗೆ ಪಲಾಯನಗೈದಿದ್ದಾರೆ.

ಇಂಥ ನಾಯಕರಿಂದ ದೇಶವನ್ನು, ದೇಶದ ನಾಗರಿಕರನ್ನು ರಕ್ಷಿಸುವ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ, ಅಪರಾಧ.

ಇದನ್ನೂ ಓದಿ:  ನಟಿಯ ಜತೆ ಮನ ಬಂದಂತೆ ಡ್ಯಾನ್ಸ್​ ಮಾಡಿ ಕಾಲಿಗೆ ನಮಸ್ಕರಿಸಿದ ಆರ್​ಜಿವಿ; ವಿಡಿಯೋ ವೈರಲ್