ಅಮೆರಿಕವೆಸಗಿರುವ ಪ್ರಮಾದಕ್ಕೆ 6 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 10 ಜನ ಆಹುತಿಯಾಗಿದ್ದಾರೆ
ಈ ಕುಟುಂಬವು ಅಮೇರಿಕಾಗೆ ವಲಸೆ ಹೋಗಲು ನಿರ್ಧರಿಸಿ ದೇಶ ತೊರೆಯುವ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ದಾಳಿ ನಡೆದಾಗ ಅವರೆಲ್ಲ ವಿಮಾನ ನಿಲ್ದಾಣದಿಂದ ಬರಬೇಕಿದ್ದ ಕರೆಯ ನಿರೀಕ್ಷಣೆಯಲ್ಲಿದ್ದರು.
ಪ್ರಾಯಶ: ಇಂಥ ಅನಾಹುತಗಳಿಗೆ ಇನ್ನು ಕೊನೆಯಿಲ್ಲ. ರವಿವಾರದಂದು ಅಮೆರಿಕ ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿ ನಡೆಸಿದ ಡ್ರೋಣ್ ದಾಳಿಯೊಂದು ಭೀಕರ ದುರಂತದಲ್ಲಿ ಪರ್ಯಾವಸನಗೊಂಡಿದೆ. ಈ ದಾಳಿಯಲ್ಲಿ ಆರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಸತ್ತಿದ್ದಾರೆ. ಡ್ರೋಣ್ ದಾಳಿಯಲ್ಲಿ ಅವರ ಮನೆಯ ಬಳಿ ಪಾರ್ಕ್ ಆಗಿದ್ದ ಕಾರೊಂದು ಸ್ಫೋಟಿಸಿದಾಗ ಈ ದುರ್ಘಟನೆ ನಡೆದಿದೆ. ಅಫ್ಘಾನಿಸ್ತಾನದ ಐಸಿಸ್ ಗುಂಪಿಗೆ ಸೇರಿದ ಕನಿಷ್ಠ ಒಬ್ಬ ಉಗ್ರಗಾಮಿಯನ್ನು ಹೊತ್ತಿದ್ದ ಕಾರನ್ನು ತಾನು ಟಾರ್ಗೆಟ್ ಮಾಡಿದ್ದೆ ಎಂದು ಅಮೇರಿಕದ ಸೇನೆ ಹೇಳಿದೆ.
ಸ್ಫೋಟಕ್ಕೆ ಬಲಿಯಾದ ಆರು ಮಕ್ಕಳಲ್ಲಿ ಎಲ್ಲರಿಗಿಂತ ಚಿಕ್ಕವಳು 2 ವರ್ಷ ವಯಸ್ಸಿನ ಸುಮಯಾ ಆಗಿದ್ದರೆ ಎಲ್ಲರಿಗಿಂತ ದೊಡ್ಡವನು 12 ವರ್ಷದ ಫರ್ಜಾದ್ ಆಗಿದ್ದಾನೆ. ಈ ಕುಟುಂಬದ ಸಂಬಂಧಿಕರು ಅಮೇರಿಕನ್ ಸೇನೆಗೆ ಹಿಡಿಶಾಪ ಹಾಕುತ್ತಿದ್ದಾರೆ.
‘ಅವರು ಮಾಡಿದ್ದು ಘೋರ ಅಪರಾಧ, ಒಂದು ತಪ್ಪು ಮಾಹಿತಿಯನ್ನು ಆಧರಿಸಿ ಅವರು ದಾಳಿ ನಡೆಸಿದ್ದಾರೆ, ಅವರ ಮೂರ್ಖತನಕ್ಕೆ ನಮ್ಮ ಕುಟುಂಬ ಬಲಿಯಾಗಿದೆ. ನಮ್ಮ ಅಮಾಯಕ ಮಕ್ಕಳು ಯಾವ ತಪ್ಪು ಮಾಡಿದ್ದರು? ಅವರ ದೇಹಗಳು ಗುರುತು ಸಹ ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿವೆ,’ ಎಂದು ಕುಟುಂಬದ ಸಂಬಂಧಿಯಾಗಿರುವ ರಾಮಿನ್ ಯೂಸುಫಿ ಬಿಬಿಸಿ ಚ್ಯಾನೆಲ್ ವರದಿಗಾರನೊಂದಿಗೆ ಮಾತಾಡುವಾಗ ರೋದಿಸುತ್ತಾ ಹೇಳಿದ್ದಾರೆ.
‘ಈ ದಾಳಿಯಲ್ಲಿ ಸತ್ತ ಎರಡು ವರ್ಷದ ಸುಮಯಾ ನನ್ನ ಮಗಳಾಗಿದ್ದಳು,’ ಎಂದು ಎಮಲ್ ಅಹ್ಮದಿ ಹೆಸರಿನ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
ಅಹ್ಮದಿ ಹೇಳಿರುವಂತೆ, ಅವರ ಕುಟುಂಬ ಅಮೇರಿಕಾಗೆ ವಲಸೆ ಹೋಗಲು ನಿರ್ಧರಿಸಿ ದೇಶ ತೊರೆಯುವ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ದಾಳಿ ನಡೆದಾಗ ಅವರೆಲ್ಲ ವಿಮಾನ ನಿಲ್ದಾಣದಿಂದ ಬರಬೇಕಿದ್ದ ಕರೆಯ ನಿರೀಕ್ಷಣೆಯಲ್ಲಿದ್ದರು. ಸತ್ತವರಲ್ಲಿ ಅಹ್ಮದ್ ನಾಸೆರ್ ಹೆಸರಿಬ ವ್ಯಕ್ತಿ ಸೇರಿದ್ದು ಅವರು ಅಮೇರಿಕದ ಪಡೆಗಳಿಗೆ ಭಾಷಾಂತರಕಾನಾಗಿ ಕೆಲಸ ಮಾಡಿದ್ದರು. ಸತ್ತವರಲ್ಲಿ ಕೆಲವರು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಕೆಲಸ ಮಾಡಿದ್ದರು ಮತ್ತು ಅಮೆರಿಕಾಗೆ ತೆರಳುವ ವೀಸಾಗಳನ್ನು ಹೊಂದಿದ್ದರು.
‘ಅಮೇರಿಕನ್ನರು ಬಹು ದೊಡ್ಡ ಪ್ರಮಾದವೆಸಗಿದ್ದಾರೆ,’ ಎಂದು ಅಹ್ಮದಿ ಹೇಳಿದ್ದಾರೆ
ಇದನ್ನೂ ಓದಿ: ಮದುವೆ ಮಂಟಪದಲ್ಲಿ ಗುಟ್ಕಾ ಅಗಿಯುತ್ತಿದ್ದ ವರನನ್ನು ನೋಡಿ ಕೆನ್ನೆಗೆ ಬಾರಿಸಿದ ವಧು; ವಿಡಿಯೋ ವೈರಲ್