ಗುಡಿಸಲೆದುರು ಫೋಟೋಶೂಟ್ ಮಾಡಿಸಿಕೊಳ್ಳುವವರಿಗೆ ಬಡವರ ಕುರಿತ ಭಾಷಣ ನೀರಸವಾಗೇ ಇರುತ್ತದೆ; ರಾಹುಲ್ ಗಾಂಧಿಗೆ ಮೋದಿ ಚಾಟಿ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಾ ಪ್ರಧಾನಿ ನರೇಂದ್ರ ಮೋದಿ "ತಮ್ಮ ಮನರಂಜನೆಗಾಗಿ ಬಡವರ ಗುಡಿಸಲುಗಳಲ್ಲಿ ಫೋಟೋಶೂಟ್ ಮಾಡಿಸುವ ನಾಯಕರಿಗೆ ಸಂಸತ್ತಿನಲ್ಲಿ ಬಡವರ ಕುರಿತ ಚರ್ಚೆ ಬೇಸರ ತರಿಸುವುದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಹೇಳಿದರು. ರಾಹುಲ್ ಗಾಂಧಿಯಂತಹ ನಾಯಕರು ನಿರಂತರವಾಗಿ ಸೋಲನ್ನು ಎದುರಿಸಿದ ನಂತರ ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.
ನವದೆಹಲಿ: ಲೋಕಸಭಾ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂಸತ್ ಭಾಷಣ ನೀರಸವಾಗಿತ್ತು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ತಮ್ಮ ಮನೋರಂಜನೆಗಾಗಿ ಬಡವರ ಗುಡಿಸಲಿನೆದುರು ಹೋಗಿ ಫೋಟೋಶೂಟ್ ಮಾಡಿಸಿಕೊಳ್ಳುವವರಿಗೆ ಸಂಸತ್ನಲ್ಲಿ ಬಡವರ ಕುರಿತಾದ ಚರ್ಚೆ, ಆ ಕುರಿತಾದ ಭಾಷಣ ನೀರಸ ಅಥವಾ ಬೋರಿಂಗ್ ಆಗಿಯೇ ಇರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಧಾನಿ ಮೋದಿ. ಹಿಂದಿನ ಒಬ್ಬ ಪ್ರಧಾನಿಯನ್ನು ‘ಮಿಸ್ಟರ್ ಕ್ಲೀನ್’ ಎಂದು ಕರೆಯುವ ಫ್ಯಾಷನ್ ಇದೆ. ಆದರೆ ದೆಹಲಿಯಿಂದ 1 ರೂಪಾಯಿ ಕಳುಹಿಸಿದರೆ ಜನರಿಗೆ ಕೇವಲ 15 ಪೈಸೆ ಮಾತ್ರ ಸಿಗುತ್ತದೆ ಎಂದು ಅವರೇ ಒಪ್ಪಿಕೊಂಡಿದ್ದರು ಎಂದಿರುವ ಪ್ರಧಾನಿ ಮೋದಿ ಸರ್ಕಾರಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜೀವ್ ಗಾಂಧಿಯವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ಪಂಚಾಯತ್ ಮಟ್ಟದಿಂದ ಕೇಂದ್ರ ಮಟ್ಟದವರೆಗೆ ಅದೇ ಕಾಂಗ್ರೆಸ್ ಪಕ್ಷವಿತ್ತು ಎಂದು ಮೋದಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ