ಕಸದ ಗುಂಡಿಯಲ್ಲಿ 2 ದಿನದ ಮಗು ಪತ್ತೆ, ಪೋಷಕರಿಗಾಗಿ ಬೆಳಗಾವಿ ಪೊಲೀಸರ ಹುಡುಕಾಟ
ವಾಕಿಂಗ್ ಮಾಡುತ್ತಿದ್ದವರು ಮಗು ಅಳುವುದನ್ನ ಕೇಳಿ ಬಾಸ್ಕೆಟ್ ತೆಗೆದು ನೋಡಿದಾಗ ಹಸುಗೂಸು ಇರೋದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬೆಳಗಾವಿ: ಎರಡು ದಿನದ ಹಸುಗೂಸನ್ನು ಬಾಸ್ಕೆಟ್ನಲ್ಲಿ ಹಾಕಿ ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟು ಹೋದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಕೆಎಲ್‌ಇ ಸ್ಕೂಲ್ ಬಳಿ ನಡೆದಿದೆ. ಕೇವಲ 2 ದಿನದ ಹಸುಗೂಸನ್ನು ಗುಂಡಿಯಲ್ಲಿ ಬಿಸಾಡಿ ಹೋಗಿದ್ದಾರೆ. ಸದ್ಯ ರಸ್ತೆ ಪಕ್ಕದ ಗುಂಡಿಯಲ್ಲಿದ್ದ ಮಗುವನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ನಗರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಕಿಂಗ್ ಮಾಡುತ್ತಿದ್ದವರು ಮಗು ಅಳುವುದನ್ನ ಕೇಳಿ ಬಾಸ್ಕೆಟ್ ತೆಗೆದು ನೋಡಿದಾಗ ಹಸುಗೂಸು ಇರೋದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು 108ಗೆ ಕರೆ ಮಾಡಿ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಜತೆಗೆ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದು ಎರಡು ದಿನದ ಮಗು ಅಂತಾ ಗೊತ್ತಾಗಿದೆ. ಸದ್ಯ ಮಗು ಆರೋಗ್ಯವಾಗಿದೆ. ಇತ್ತ ನಿಪ್ಪಾಣಿ ಪೊಲೀಸರು ಕೇಸ್ ದಾಖಲಿಸಿಕೊಂಡು ಮಗು ಯಾರದ್ದು ಮತ್ತು ಯಾವ ಕಾರಣಕ್ಕೆ ಮಗುವನ್ನ ಬಿಟ್ಟು ಹೋಗಿದ್ದಾರೆ ಅನ್ನೋದನ್ನ ತನಿಖೆ ಮಾಡ್ತಿದ್ದಾರೆ.