ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದಕ್ಕೆ ಪಿಡಿಓ ಮತ್ತು ಗ್ರಾಮ ಪಂಚಾಯತಿ ಸದಸ್ಯರನ್ನು ದೇವಸ್ಥಾನದಲ್ಲಿ ಕೂಡಿಹಾಕಿದ ಗ್ರಾಮಸ್ಥರು
ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದಕ್ಕೆ ಜಿಲ್ಲೆ ಹುಮ್ನಾಬಾದ್ ತಾಲೂಕಿನ ನಿಂಬೂರು ಗ್ರಾಮದ ಜನರು ಪಿಡಿಓ ಮತ್ತು ಗ್ರಾಮ ಪಂಚಾಯತಿ ಸದಸ್ಯರನ್ನು ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಕೂಡಿ ಹಾಕಿದ್ದಾರೆ.
ಬೀದರ್: ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದಕ್ಕೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ನಿಂಬೂರು ಗ್ರಾಮದ ಜನರು ಪಿಡಿಓ (PDO) ಮತ್ತು ಗ್ರಾಮ ಪಂಚಾಯತಿ (Gram Panchayat) ಸದಸ್ಯರನ್ನು ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಕೂಡಿ ಹಾಕಿದ್ದಾರೆ. ಸೀತಾಳಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಂಬೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದ್ದು, ಕುಡಿಯುವ ನೀರು ಕೊಡುವಂತೆ ತಿಂಗಳಿಂದ ಪಂಚಾಯತ್ ಪಿಡಿಓ ಸದಸ್ಯರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಫಂಧಿಸದ ಪಿಡಿಓ ಮತ್ತು ಸದಸ್ಯರನ್ನ ದೇವಸ್ಥಾನದಲ್ಲಿ ಕೂಡಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಪಿಡಿಓ ಮತ್ತು ಗ್ರಾಮಪಂಚಾಯತ್ ಸದಸ್ಯರು ಒಂದೆರಡು ದಿನದಲ್ಲಿ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಕೊಡುವ ಭರವಸೆ ಕೊಟ್ಟ ಬಳಿಕ ದೇವಸ್ಥಾನ ಬೀಗ ತೆಗೆದು ಪಂಚಾಯತ್ ಪಿಡಿಓ ಸದಸ್ಯರನ್ನು ಗ್ರಾಮಸ್ಥರು ಬಿಟ್ಟು ಕಳುಹಿಸಿದ್ದಾರೆ.
ಗ್ರಾಮಸ್ಥರು ಕುಡಿಯುವ ನೀರಿಗಾಗಿ ಬೋರ್ವೆಲ್ಗಳನ್ನು ನೆಚ್ಚಿಕೊಂಡಿದ್ದಾರೆ. ಆದರೆ ಸದ್ಯ ಬೋರವೆಲ್ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಬಂದರು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಇನ್ನು ಕೆಲವು ಬೋರ್ವೆಲ್ಗಳು ಹಾಳಾಗಿವೆ. ಈ ಸಂಬಂಧ ಮಹಿಳೆಯರು ಕಿಲೋಮಿಟರ್ಗಟ್ಟಲೆ ಹೊಲಗಳಿಗೆ ಹೋಗಿ ನೀರು ತರಬೇಕಾಗುತ್ತದೆ. ಇದರಿಂದ ಮಹಿಳೆಯರು ಹೈರಾಣಾಗಿದ್ದಾರೆ. ಇನ್ನು ಕೆಟ್ಟು ಹೋದ ಬೋರವೆಲ್ಗಳನ್ನು ರಿಪೇರಿ ಮಾಡಿಸಿ ಎಂದು ಗ್ರಾಮ ಪಂಚಾಯಿತಿ ಪಿಡಿಓಗೆ ಹೇಳಿದರು ಸ್ಪಂದಿಸಿರಲಿಲ್ಲ. ಹೀಗಾಗಿ ಕೋಪಗೊಂಡ ಗ್ರಾಮಸ್ಥರು ಪಿಡಿಓ ಮತ್ತು ಗ್ರಾಮ ಪಂಚಾಯಿತಿ ಸದಸ್ಯರನ್ನು ಕೂಡಿ ಹಾಕಿದ್ದಾರೆ.