Recycling Awareness: ಮರುಬಳಕೆ ಕುರಿತು ಜಾಗೃತಿ ಮೂಡಿಸಲು ಮುಂಬೈನ ಇಬ್ಬರು ಯುವಕರು ಪ್ಲಾಸ್ಟಿಕ್ ಬಾಟಲಿಗಳಿಂದ ಮೀನಿನ ಬೃಹತ್ ಆಕೃತಿ ರಚಿಸಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 29, 2023 | 7:56 AM

ಬೃಹತ್ ಗಾತ್ರದ ಮೀನಿನ ಆಕೃತಿ ರಚಿಸಲು ಯುವಕರು ಹಳೆ ಸಾಮಾನು ಖರೀದಿಸುವ ವ್ಯಾಪಾರಿಗಳಿಂದ, ಮನೆಗಳಿಂದ, ರೆಸ್ಟುರಾಂಟ್ ಗಳಿಂದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. 15 X 9 ಅಳತೆಯ ಮೀನಾಕೃತಿಯನ್ನು ವಿಶ್ವ ಮರುಬಳಕೆ ದಿನವಾದ ಮಾರ್ಚ್ 18 ರಂದು ರಚಿಸಲಾಗಿದೆ.

ಮುಂಬೈ: ಮಹಾನಗರದ ಬೇ ವಿವ್ ಮರೀನಾ ಗಾರ್ಡನ್ (Bay View Marina Garden) ನಲ್ಲಿ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳಿಂದ ರೂಪಿಸಲಾಗಿರುವ ಮೀನಿನ ಒಂದು ಬೃಹತ್ ಆಕೃತಿ ನಿವಾಸಿಗಳಿಗೆ ಸೆಲ್ಫೀ ಪಾಯಿಂಟ್ (selfie point) ಆಗಿ ಪರಿಣಮಿಸಿದ್ದು ಅಲ್ಲಿಗೆ ಭೇಟಿ ನೀಡಿದವರೆಲ್ಲ ಮುಗಿಬಿದ್ದು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ನಾಗರಿಕರಲ್ಲಿ ಮರುಬಳಕೆಯ (recycling), ಬಗ್ಗೆ ಜಾಗೃತಿ ಮೂಡಿಸಲು 6,000 ಕ್ಕೂ ಹೆಚ್ಚು ಪೆಟ್ ಬಾಟಲಿಗಳನ್ನು ಉಪಯೋಗಿಸಿ ಮೀನಿನ ಆಕೃತಿಯನ್ನು ರಚಿಸಲಾಗಿದೆ.

ಹವಾಮಾನ ವೈಪರೀತ್ಯ, ಪ್ಲಾಸ್ಟಿಕ್ ಮಾಲಿನ್ಯ, ಜಾಗತಿಕ ತಾಪಮಾನ ಮೊದಲಾದ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮತ್ತು ಕಾಳಜಿ ಹೆಚ್ಚಿಸಲು ಚೇಂಜ್ ಈಸ್ ಅಸ್ ಹೆಸರಿನ ಅಭಿಯಾನದ ಮೂಲಕ ಯುವಕರಿಬ್ಬರು ಪ್ರಯತ್ನಶೀಲರಾಗಿದ್ದಾರೆ.

ಇದನ್ನೂ ಓದಿ: ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ವಾಗ್ದಾಳಿ

‘ಪೆಟ್ ಬಾಟಲಿಗಳಿಂದ ಈ ಬೃಹತ್ ಮೀನಿನ ಅಕೃತಿ ರಚಿಸುವ ಉದ್ದೇಶ ಜನರಲ್ಲಿ ಮರುಬಳಕೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಬಹಳ ಜಾಗ್ರತೆಯಿಂದ ಮಾಡಬೇಕು ಮತ್ತು ಅದನ್ನು ಬಳಸುವವರಿಗೆ ಅದು ಎಲ್ಲಿಂದ ಬರುತ್ತದೆ ಎಲ್ಲಿಗೆ ಹೋಗುತ್ತದೆ ಎಂಬ ಅರಿವಿರಬೇಕು. ಈ ರಚನೆ ಹಿಂದಿರುವ ಉದ್ದೇಶ ಅದೇ. ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಅವಶ್ಯಕತೆಯಿದೆ,’ ಎಂದು ‘ಚೇಂಜ್ ಈಸ್ ಅಸ್’ ಸಮುದಾಯದ ಸಂಸ್ಥಾಪಕ ಶುಭ್ ಮೆಹ್ತಾ ಹೇಳುತ್ತಾರೆ.

‘ಪರಿಸರ, ಪಶುಪಕ್ಷಿಗಳು ಮತ್ತು ಒಟ್ಟಾರೆಯಾಗಿ ಹೇಳುವುದಾದರೆ ನಾವು ವಾಸ ಮಾಡುತ್ತಿರುವ ಭೂಮಿಯ ಕಡೆ ನಾವು ಹೆಚ್ಚು ಕಾಳಜಿ ತೋರುವ ಅವಶ್ಯಕತೆಯಿದೆ. ಒಂದು ಮೂಲಭೂತ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅದೇನೆಂದರೆ ಭೂಮಿಗೆ ನಮ್ಮ ಅವಶ್ಯಕತೆಯಿಲ್ಲ, ಆದರೆ ನಮಗೆ ಭೂಮಿಯ ಅವಶ್ಯಕತೆಯಿದೆ. ನಾವು ಇದೇ ಭೂಮಿಯ ನಿವಾಸಿಗಳಾಗಿರುವುದರಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಗೌರವಿಸುವ ಬಾಧ್ಯತೆ ನಮ್ಮ ಮೇಲಿದೆ. ಮತ್ತೊಂದು ಮುಖ್ಯ ವಿಷಯವೆಂದರೆ, ಪರಿಸರವನ್ನು ಸ್ವಚ್ಛವಾಗಿಡುವ ಕರ್ತವ್ಯ ಸರ್ಕಾರದ್ದು, ನಾವ್ಯಾಕೆ ತಲೆಕೆಡಿಸಿಕೊಳ್ಳೋಣ ಎಂಬ ಭಾವನೆ ನಮ್ಮಲ್ಲಿ ಬರಬಾರದು. ನಾವು ಈ ನಗರದ ಮತ್ತು ದೇಶದ ನಿವಾಸಿಗಳಾಗಿದ್ದೇವೆ. ಹಾಗಾಗಿ ಪರಿಸರವನ್ನು ರಕ್ಷಸುವುದು, ಅದನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯವೂ ಆಗಿದೆ,’ ಎಂದು ಚೇಂಜ್ ಈಸ್ ಅಸ್ ಸಮುದಾಯದ ಸಹ-ಸಂಸ್ಥಾಪಕ ಅಕ್ಷತ್ ಶಾ ಹೇಳುತ್ತಾರೆ.

ಇದನ್ನೂ ಓದಿ:  Supreme Court: 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಬೃಹತ್ ಗಾತ್ರದ ಮೀನಿನ ಆಕೃತಿ ರಚಿಸಲು ಯುವಕರು ಹಳೆ ಸಾಮಾನು ಖರೀದಿಸುವ ವ್ಯಾಪಾರಿಗಳಿಂದ, ಮನೆಗಳಿಂದ, ರೆಸ್ಟುರಾಂಟ್ ಗಳಿಂದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. 15 X 9 ಅಳತೆಯ ಮೀನಾಕೃತಿಯನ್ನು ವಿಶ್ವ ಮರುಬಳಕೆ ದಿನವಾದ ಮಾರ್ಚ್ 18 ರಂದು ರಚಿಸಲಾಗಿದೆ.

ಏಪ್ರಿಲ್ ಒಂದನೇ ತಾರೀಖಿನವರೆಗೆ ಜನ ಮೀನಾಕೃತಿಯನ್ನು ವೀಕ್ಷಿಸಬಹುದು, ಅವತ್ತು ಅದನ್ನು ತೆಗೆದುಬಿಡಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ