VIDEO: ಚಹಲ್ ಚಮತ್ಕಾರ: 3 ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
IPL 2025 PBKS vs KKR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 31ನೇ ಪಂದ್ಯವು ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 111 ರನ್ಗಳಿಸಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 95 ರನ್ಗಳಿಗೆ ಆಲೌಟ್ ಆಗಿ 16 ರನ್ಗಳಿಂದ ಸೋಲೊಪ್ಪಿಕೊಂಡಿದೆ.
IPL 2025: ಮುಲ್ಲನ್ಪುರ್ನ ಎಂವೈಎಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುಜ್ವೇಂದ್ರ ಚಹಲ್ (Yuzvendra chahal). ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್ಗಳಲ್ಲಿ 111 ರನ್ಗಳಿಸಿ ಆಲೌಟ್ ಆಯಿತು.
ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 7 ಓವರ್ಗಳ ಮುಕ್ತಾಯದ ವೇಳೆ 2 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿತು. ಈ ಹಂತದಲ್ಲಿ ದಾಳಿಗಿಳಿದ ಯುಜ್ವೇಂದ್ರ ಚಹಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅದು ಸಹ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನು ಪಡೆಯುವ ಮೂಲಕ.
8ನೇ ಓವರ್ನ 4ನೇ ಎಸೆತದಲ್ಲಿ ಅಜಿಂಕ್ಯ ರಹಾನೆ (17) ಎಲ್ಬಿಡ್ಲ್ಯೂ ಮಾಡಿ ಚಹಲ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಅಮೂಲ್ಯ ಯಶಸ್ಸು ತಂದುಕೊಟ್ಟರು. ಆ ಬಳಿಕ 9ನೇ ಓವರ್ನಲ್ಲಿ ದಾಳಿಗಿಳಿದ ಚಹಲ್ ಮೊದಲ ಎಸೆತದಲ್ಲಿ ಅಂಗ್ಕ್ರಿಶ್ ರಘುವಂಶಿಗೆ (37) ಪೆವಿಲಿಯನ್ ಹಾದಿ ತೋರಿಸಿದರು.
ಇನ್ನು 12ನೇ ಓವರ್ನ 3ನೇ ಎಸೆತದಲ್ಲಿ ರಿಂಕು ಸಿಂಗ್ ಅವರನ್ನು ಸ್ಟಂಪ್ ಔಟ್ ಮಾಡುವಲ್ಲಿ ಚಹಲ್ ಯಶಸ್ವಿಯಾದರು. ಮರು ಎಸೆದಲ್ಲೇ ರಮಣ್ದೀಪ್ ಸಿಂಗ್ (0) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಯುಜ್ವೇಂದ್ರ ಚಹಲ್ ಮೂರು ಓವರ್ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಬ್ಯಾಕ್ ಟು ಬ್ಯಾಕ್ ನಾಲ್ಕು ವಿಕೆಟ್ ಸಿಗುತ್ತಿದ್ದಂತೆ ರಣ ಉತ್ಸಾಹದೊಂದಿಗೆ ಕಾಣಿಸಿಕೊಂಡ ಪಂಜಾಬ್ ಕಿಂಗ್ಸ್ ಆಟಗಾರರು ಕೆಕೆಆರ್ ವಿರುದ್ಧ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಕೆಕೆಆರ್ ತಂಡವನ್ನು 15.1 ಓವರ್ಗಳಲ್ಲಿ 95 ರನ್ಗಳಿಗೆ ಆಲೌಟ್ ಮಾಡಿ ಪಂಜಾಬ್ ಕಿಂಗ್ಸ್ 16 ರನ್ಗಳ ರೋಚಕ ಜಯ ಸಾಧಿಸಿತು.
ಇನ್ನು ಈ ಪಂದ್ಯದಲ್ಲಿ ಒಟ್ಟು 4 ಓವರ್ಗಳನ್ನು ಎಸೆದ ಯುಜ್ವೇಂದ್ರ ಚಹಲ್ 28 ರನ್ ನೀಡಿ 4 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.