ಪಿಒಕೆಯಲ್ಲಿ ರಕ್ತಪಾತ; ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಈದ್ಗಾ ಮೈದಾನದಲ್ಲಿ ಇಂದು ಸಾವಿರಾರು ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆಯು ಎಕೆ-47 ರೈಫಲ್‌ಗಳಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 37ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಹಾಯಧನದ ದರದಲ್ಲಿ ಗೋಧಿ ಹಿಟ್ಟು, ಅಕ್ಕಿ, ವಿದ್ಯುತ್ ಮತ್ತು ಮೂಲಭೂತ ಹಕ್ಕುಗಳನ್ನು ಒತ್ತಾಯಿಸಿ ಸಾಮಾನ್ಯ ನಾಗರಿಕರು ಹಮ್ಮಿಕೊಂಡಿದ್ದ ಈ ಪ್ರತಿಭಟನೆ ಆರಂಭದಲ್ಲಿ ಶಾಂತಿಯುತವಾಗಿಯೇ ಇತ್ತು.

ಪಿಒಕೆಯಲ್ಲಿ ರಕ್ತಪಾತ; ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು
Protest In Pok

Updated on: Jun 11, 2026 | 7:36 PM

ಮುಜಾಫರಾಬಾದ್, ಜೂನ್ 11: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಅತಿಯಾದ ಹಣದುಬ್ಬರ, ಹಿಂಸಾತ್ಮಕ ದಬ್ಬಾಳಿಕೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಸ್ಥಳೀಯ ನಾಗರಿಕರು ದೀರ್ಘಕಾಲದಿಂದ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಈ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನಿ ಸೇನೆಯು ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಇದರಿಂದ ಇಡೀ ಪ್ರದೇಶ ರಣರಂಗವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಿಂದ 16 ಜನರು ಸಾವನ್ನಪ್ಪಿದ್ದಾರೆ ಮತ್ತು 37ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಿಒಕೆಯಲ್ಲಿನ ಸ್ಥಳೀಯ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ಕೆಲವು ಪ್ರಮುಖ ಕಾರಣಗಳಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರು. ತಮಗೆ ಸಿಗಬೇಕಾದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದ್ದರೂ, ಸ್ಥಳೀಯರಿಗೆ ಅತಿಯಾದ ವಿದ್ಯುತ್ ಬಿಲ್ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಲಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇಡೀ ಪ್ರದೇಶವನ್ನು ಪಾಕಿಸ್ತಾನಿ ಮಿಲಿಟರಿ ತನ್ನ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು ಸ್ಥಳೀಯರ ಧ್ವನಿಯನ್ನು ಹತ್ತಿಕ್ಕುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ಸ್ಥಳೀಯ ಹಕ್ಕುಗಳ ಒಕ್ಕೂಟದ ನೇರ ನಾಯಕತ್ವದಲ್ಲಿ ಸಾವಿರಾರು ನಿರಸ್ತ್ರ ನಾಗರಿಕರು, ಮಹಿಳೆಯರು ಮತ್ತು ಯುವಕರು ಮುಜಾಫರಾಬಾದ್ ಕಡೆಗೆ ಬೃಹತ್ ಮೆರವಣಿಗೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಮೊದಲು ಅಶ್ರುವಾಯು ಮತ್ತು ಲಾಠಿ ಚಾರ್ಜ್ ಮಾಡಿದ ಪಾಕಿಸ್ತಾನಿ ಅರೆಸೇನಾ ಪಡೆ ಮತ್ತು ಸೇನೆಯು, ನಂತರ ನೇರವಾಗಿ ಪ್ರತಿಭಟನಾಕಾರರ ಮೇಲೆ ಗುಂಡಿನ ಮಳೆಗರೆದಿದೆ.

ಈ ಪ್ರದೇಶದಲ್ಲಿ ಪಾಕಿಸ್ತಾನದ ನಿರಂತರ ಆಕ್ರಮಣ ಮತ್ತು ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಲು ಸುಮಾರು 60,000 ದಿಂದ 70,000 ಕ್ಕೂ ಹೆಚ್ಚು ಜನರು ರಾವಲಕೋಟ್‌ನಲ್ಲಿ ಜಮಾಯಿಸಿದ್ದರು. ಕಳೆದ ಮಂಗಳವಾರ ಪಿಒಕೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಮೃತಪಟ್ಟ 30 ಜನರಿಗೆ ನ್ಯಾಯ ಒದಗಿಸಬೇಕು ಹಾಗೂ ಗಾಯಗೊಂಡ 200 ಕ್ಕೂ ಹೆಚ್ಚು ಜನರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಇದನ್ನೂ ಓದಿ: ಪಿಒಕೆಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ; ಅಧಿಕಾರಿಗಳು ಸೇರಿದಂತೆ ಎಲ್ಲ ಸೈನಿಕರೂ ಸಜೀವದಹನ

ಸೇನೆಯ ಬರ್ಬರ ದಾಳಿಗೆ ಸಿಲುಕಿ 16 ನಿಶಸ್ತ್ರ ನಾಗರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 37ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಈ ಭೀಕರ ಹತ್ಯಾಕಾಂಡದ ನಂತರ ಇಡೀ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಈ ಘಟನೆಯ ಭೀಕರ ದೃಶ್ಯಗಳು ಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪಾಕಿಸ್ತಾನ ಸರ್ಕಾರವು ಇಡೀ ಪಿಒಕೆ ವಲಯದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಪ್ರಮುಖ ನಗರಗಳಲ್ಲಿ ಕಠಿಣ ಕರ್ಫ್ಯೂ ಹೇರಲಾಗಿದ್ದರೂ, ಆಕ್ರೋಶಗೊಂಡಿರುವ ಸಾರ್ವಜನಿಕರು ಮಿಲಿಟರಿ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us