Video: ಬೆಂಕಿ ಹೊತ್ತಿ ಉರಿಯುತ್ತಿದ್ದ ಎತ್ತರದ ಕಟ್ಟಡದ ಕಿಟಕಿಯಿಂದ ಪಾರಾದ ಇಬ್ಬರು; ಭಯಾನಕ ದೃಶ್ಯ ನೋಡಿ ನೆಟ್ಟಿಗರು ಕಂಗಾಲು
ಇವರಿಬ್ಬರ ಸಾಹಸದ ವಿಡಿಯೋ ಮಾತ್ರ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೋವನ್ನು ಮೊದಲು ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಎಂಬ ಟ್ವಿಟರ್ ಅಕೌಂಟ್ ಬಳಕೆದಾರರು ಶೇರ್ ಮಾಡಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿರುವ ಕಟ್ಟಡದ ಎರಡು ಕಿಟಕಿಗಳಲ್ಲಿ ಇಬ್ಬರು ಪುಟ್ಟ ಮಕ್ಕಳು ಜೋತಾಡುತ್ತಿರುವ ವಿಡಿಯೋವೊಂದು ಆನ್ಲೈನ್ನಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ . ಈ ಘಟನೆ ನಡೆದದ್ದು ನ್ಯೂಯಾರ್ಕ್ನ ಪೂರ್ವ ಗ್ರಾಮದಲ್ಲಿ. ಅದೊಂದು ದೊಡ್ಡ ಕಟ್ಟಡ. ಬೆಂಕಿ ಬಿದ್ದು ಉರಿಯುತ್ತಿದೆ. ಕಪ್ಪು ಹೊಗೆ ಏಳುತ್ತಿದೆ. ಈ ಮಧ್ಯೆ 13 ವರ್ಷದ ಮತ್ತು 18 ವರ್ಷದ ಇಬ್ಬರು ಕಿಟಕಿ ಮೂಲಕ ಪಾರಾಗಲು ಯತ್ನಿಸುತ್ತಿದ್ದಾರೆ. ಈ ದೃಶ್ಯ ನೋಡಿದರೆ ಎಂಥವರಿಗಾದರೂ ಮೈ ಜುಂ ಎನ್ನುತ್ತದೆ. ಕಿಟಕಿಯಿಂದ ಒಳಗೆ ಹೋದರೆ ಬೆಂಕಿಯಲ್ಲಿ ಬೇಯುತ್ತಾರೆ, ಕೆಳಗೆ ಹಾರಿದರೂ ಜೀವ ಹೋಗುತ್ತದೆ ಎಂಬ ಪರಿಸ್ಥಿತಿ ಅವರದ್ದು. ಆದರೆ ಕೊನೆಯಲ್ಲಿ ಅವರಿಬ್ಬರೂ ತುಂಬ ನಾಜೂಕಾಗಿ, ಚಾಕಚಕ್ಯತೆಯಿಂದ ಪಾರಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ಮೊದಲು ಒಬ್ಬಾತ ಕಿಟಕಿಯಿಂದ ಹೊರಗೆ ನೇತಾಡುವುದನ್ನು ಕಾಣಬಹುದು. ನಂತರ ನಿಧಾನಕ್ಕೆ ಪಕ್ಕಕ್ಕೆ ಸರಿಯುತ್ತ ಹೋಗಿ, ಅಲ್ಲಿರುವ ದೊಡ್ಡ ಕಂಬವನ್ನು ಹಿಡಿದುಕೊಳ್ಳುತ್ತಾನೆ. ಅಷ್ಟರಲ್ಲಿ ಇನ್ನೊಬ್ಬಾತನೂ ಕಿಟಕಿಯಿಂದ ಹೊರಬಂದು ಆ ಕಂಬವನ್ನು ಹಿಡಿದುಕೊಳ್ಳುತ್ತಾನೆ. ಇಬ್ಬರೂ ಕೂಡ ಅಗ್ನಿಶಾಮಕ ದಳ, ರಕ್ಷಣಾ ಸಿಬ್ಬಂದಿಗೆ ಕಾಯದೆ ತಾವೇ ಕಂಬದ ಮೂಲಕ ಕೆಳಗೆ ಇಳಿದು ಬೆಂಕಿಯಿಂದ ಪಾರಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅಷ್ಟರಲ್ಲಿ ಬೆಂಕಿಯೂ ಕೂಡ ನಿಧಾನವಾಗಿ ಇಡೀ ಕಟ್ಟಡವನ್ನು ಆವರಿಸುತ್ತಿರುತ್ತದೆ. ಈ ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಇವರಿಬ್ಬರ ಸಾಹಸದ ವಿಡಿಯೋ ಮಾತ್ರ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೋವನ್ನು ಮೊದಲು ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಎಂಬ ಟ್ವಿಟರ್ ಅಕೌಂಟ್ ಬಳಕೆದಾರರು ಶೇರ್ ಮಾಡಿದ್ದಾರೆ. ವಿಡಿಯೋಕ್ಕೆ 4 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದ್ದು, ಹಲವರು ತಾವೂ ರೀಪೋಸ್ಟ್ ಮಾಡಿಕೊಂಡಿದ್ದಾರೆ. ಒಟ್ಟಾರೆ ಈ ಬೆಂಕಿ ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಿಡಿಯೋ ನೋಡಿದ ಜನರು ಆ ಇಬ್ಬರನ್ನೂ ಹೊಗಳಿದ್ದಾರೆ. ಹಾಗೇ, ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
Yesterday morning 2 teens—a 13 and 18-yr-old— escaped a burning building in East Village, NYC. In the video you can see the first teen hanging from the window then stand up and hold on to a pole and help the second person. (1/2)
— GoodNewsCorrespondent (@GoodNewsCorres1) December 17, 2021
ಇದನ್ನೂ ಓದಿ: ಭಕ್ತಿಗೀತೆಗೆ ಅವಮಾನ ಮಾಡಿದ ದೇವಿಶ್ರೀ ಪ್ರಸಾದ್; ‘ಪುಷ್ಪ’ ಸಂಗೀತ ನಿರ್ದೇಶಕನ ಮೇಲೆ ಬಿತ್ತು ಕೇಸ್
Published On - 9:21 am, Mon, 20 December 21