ಪಿಒಕೆಯಲ್ಲಿ ತೀವ್ರಗೊಂಡ ಹಿಂಸಾಚಾರ; ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ 6 ಜನ ಬಲಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಹಿಟ್ಟಿನ ಮೇಲಿನ ಸಬ್ಸಿಡಿ ಕಡಿತ ಮತ್ತು ಅತಿಯಾದ ವಿದ್ಯುತ್ ದರವನ್ನು ವಿರೋಧಿಸಿ ನಡೆಯುತ್ತಿದ್ದ ನಾಗರಿಕರ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. 

ಪಿಒಕೆಯಲ್ಲಿ ತೀವ್ರಗೊಂಡ ಹಿಂಸಾಚಾರ; ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ 6 ಜನ ಬಲಿ
Pok Protest
Image Credit source: x

Updated on: Jul 14, 2026 | 7:42 PM

ಮುಜಾಫರಾಬಾದ್, ಜುಲೈ 14: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ದಿನೇದಿನೇ ಹೆಚ್ಚುತ್ತಿರುವ ಜನಾಕ್ರೋಶವನ್ನು ಹತ್ತಿಕ್ಕಲು ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಭೀಕರ ದಾಳಿಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ರಾವಲಕೋಟ್‌ ನಗರದ ಹೊಸ ಬಸ್ ಟರ್ಮಿನಲ್ ಬಳಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ನಾಗರಿಕರ ನಡುವೆ ತೀವ್ರ ಘರ್ಷಣೆ ನಡೆದಿದೆ. ಈ ವೇಳೆ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಗೆ 6 ಜನ ಬಲಿಯಾಗಿದ್ದಾರೆ.

ಮುಜಾಫರಾಬಾದ್ ಸೇರಿದಂತೆ ಪಿಒಕೆಯ ಹಲವು ಪ್ರಮುಖ ನಗರಗಳಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಬೃಹತ್ ರ‍್ಯಾಲಿ ಹಮ್ಮಿಕೊಂಡಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಮೊದಲು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದವು. ಆಕ್ರೋಶಗೊಂಡ ಜನ ಕಲ್ಲು ತೂರಾಟ ನಡೆಸಿದಾಗ, ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನೇರ ಗುಂಡಿನ ದಾಳಿ ಆರಂಭಿಸಿದವು.

 

ಈ ಘರ್ಷಣೆಯಲ್ಲಿ ಸಾವನ್ನಪ್ಪಿದವರ ಪೈಕಿ ಜಹೀದ್ ಮುಘಲ್, ಜಾಫರ್ ಮುಘಲ್, ಅರ್ಸಲಾನ್ ಅಕ್ಬರ್ ಮತ್ತು ರಾವಲಕೋಟ್‌ನ ಮಟಿಯಾಲ್ ಮೀರಾ ಬಸ್ ಟರ್ಮಿನಲ್ ಬಳಿ ಮೃತಪಟ್ಟ ವಾಜಿದ್ ಹಯಾತ್ ಅವರನ್ನು ಗುರುತಿಸಲಾಗಿದೆ.

ಇದನ್ನೂ ಓದಿ: 38 ಬೇಡಿಕೆ, 48 ಗಂಟೆಯ ಗಡುವು; ಪಿಒಕೆಯಲ್ಲಿ ಮತ್ತೆ ಸಂಘರ್ಷದ ಭೀತಿ

ವೈಟ್ ಹೌಸ್ ಮುಂಭಾಗ ಪ್ರತಿಭಟನೆ:

ಈ ರಕ್ತಪಾತ ನಡೆಯುವ ಕೇವಲ ಒಂದು ದಿನದ ಮುಂಚೆ, ಅಮೆರಿಕದಲ್ಲಿ ವಾಸಿಸುತ್ತಿರುವ ಪಿಒಕೆ (PoK) ಮೂಲದ ನೂರಾರು ನಾಗರಿಕರು ವಾಷಿಂಗ್ಟನ್‌ನ ಶ್ವೇತಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಪಿಒಕೆಯಲ್ಲಿ ಮಾನವೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ನಾಗರಿಕ ಪ್ರದೇಶಗಳಿಂದ ಪಾಕ್ ಮಿಲಿಟರಿಯನ್ನು ತಕ್ಷಣ ಹಿಂಪಡೆಯಬೇಕು ಮತ್ತು ನಿಶ್ಯಸ್ತ್ರ ನಾಗರಿಕರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಭಾರತಕ್ಕೆ ಮನವಿ:

ಪಿಒಕೆಯಲ್ಲಿ ಸುಮಾರು 40 ಲಕ್ಷ ಜನರನ್ನು ಇಂಟರ್ನೆಟ್ ಸ್ಥಗಿತಗೊಳಿಸುವ ಮೂಲಕ ಜಗತ್ತಿನ ಸಂಪರ್ಕದಿಂದ ದೂರ ಇಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಮಗೆ ಸಹಾಯ ಮಾಡಲು ಮತ್ತು ಮಾನವೀಯ ನೆರವು ನೀಡಲು ಮುಂದೆ ಬರುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ. ಮಾನವೀಯ ನೆರವು ತಲುಪಿಸಲು ಪೂಂಚ್ ಮತ್ತು ದೋಡಾ ಸೆಕ್ಟರ್‌ಗಳ ಮೂಲಕ ‘ಲೈನ್ ಆಫ್ ಕಂಟ್ರೋಲ್’ (LoC) ಅನ್ನು ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದರಿಂದ ಪಾಕಿಸ್ತಾನ ಇನ್ನಷ್ಟು ಕೋಪಗೊಂಡಿದೆ.

ಇದನ್ನೂ ಓದಿ: ನಾವು ಪಾಕಿಸ್ತಾನಕ್ಕೆ ಸೇರಿದವರಲ್ಲ; ಇಸ್ಲಾಮಾಬಾದ್ ವಿರುದ್ಧ ಪಿಒಕೆ ಜನರ ಪ್ರತಿಭಟನೆ

ಪಿಒಕೆಯಲ್ಲಿ ಕೇವಲ ಮಿಲಿಟರಿ ದೌರ್ಜನ್ಯವಷ್ಟೇ ಅಲ್ಲದೆ, ಆಹಾರದ ತೀವ್ರ ಬಿಕ್ಕಟ್ಟು ಕೂಡ ಜನರನ್ನು ಕಂಗಾಲು ಮಾಡಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಇಲ್ಲಿನ ಶೇ. 66ರಷ್ಟು ಜನಸಂಖ್ಯೆಯು ಕೃಷಿ ಮತ್ತು ಜಾನುವಾರುಗಳನ್ನು ನಂಬಿ ಬದುಕುತ್ತಿದ್ದರೂ, ಶೇ. 57ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿವೆ. ಕಣಿವೆಯ ಪರ್ವತ ಪ್ರದೇಶಗಳಲ್ಲಿ ಈ ಸಮಸ್ಯೆ ಭೀಕರವಾಗಿದ್ದು, ಸುಮಾರು ಶೇ. 90ರಷ್ಟು ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ. 5 ವರ್ಷದೊಳಗಿನ ಶೇ. 39ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಕುಂಠಿತ ಬೆಳವಣಿಗೆಗೆ ಒಳಗಾಗಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತ ಆಕ್ರೋಶ:

ಪಿಒಕೆಯಲ್ಲಿ ನಡೆಯುತ್ತಿರುವ ಘರ್ಷಣೆ ಮತ್ತು ಪಾಕಿಸ್ತಾನದ ದಮನಕಾರಿ ನೀತಿಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತೀವ್ರವಾಗಿ ಖಂಡಿಸಿದೆ. ಇದು ಪಾಕಿಸ್ತಾನ ನಡೆಸುತ್ತಿರುವ ದಶಕಗಳ ಕಾಲದ ವ್ಯವಸ್ಥಿತ ಶೋಷಣೆಯ ಪ್ರತಿಫಲ ಎಂದು ಭಾರತ ಹೇಳಿದೆ. ಜನರ ಅಹವಾಲುಗಳನ್ನು ಆಲಿಸುವ ಬದಲು ಪಾಕಿಸ್ತಾನ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಮೇಲೂ ತೀವ್ರ ಪೊಲೀಸ್ ದೌರ್ಜನ್ಯ ಎಸಗುತ್ತಿದೆ. ಆಹಾರ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಪೂರೈಕೆಯನ್ನು ತಡೆದು, ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಳಿಸಿದೆ. ನಿಶ್ಯಸ್ತ್ರ ನಾಗರಿಕರ ಮೇಲೆ ಪ್ರಾಣಾಂತಿಕ ದಾಳಿ ನಡೆಸುತ್ತಿದ್ದು, ಇದು ಅತ್ಯಂತ ದುರದೃಷ್ಟಕರ ಎಂದು ಭಾರತ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us