ನ್ಯೂಯಾರ್ಕ್ನ ಮ್ಯಾನ್ಹಟನ್ನಲ್ಲಿದ್ದ ಗಾಂಧಿ ಪ್ರತಿಮೆ ಧ್ವಂಸ; ಇದೊಂದು ತುಚ್ಛ ಕೃತ್ಯವೆಂದ ಭಾರತೀಯ ರಾಯಭಾರಿ ಕಚೇರಿ
ಕಳೆದ ತಿಂಗಳು ಯುಎಸ್ನ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ಕೂಡ ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಕಾಲಿನ ಭಾಗ ಮತ್ತು ಮುಖವನ್ನು ಧ್ವಂಸ ಮಾಡಿದ್ದರು.
ನ್ಯೂಯಾರ್ಕ್ ಸಿಟಿಯ ಮ್ಯಾನ್ಹಟನ್ ಬಳಿಯ ಯೂನಿಯನ್ ಸ್ಕ್ವಾರ್ನಲ್ಲಿದ್ದ 8 ಅಡಿ ಎತ್ತರದ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಇದನ್ನು ಯುಎಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದ್ದು, ತುಚ್ಛ ಕಾರ್ಯ ಎಂದು ಹೇಳಿದೆ. ಹಾಗೇ, ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸದಿಂದಾಗಿ ಭಾರತೀಯರು ಮತ್ತು ಅಮೆರಿಕದಲ್ಲಿರುವ ಭಾರತೀಯರಿಗೆ ನೋವಾಗಿದೆ ಮತ್ತು ಇದೊಂದು ಶಾಕಿಂಗ್ ಘಟನೆ ಎಂದು ಹೇಳಿದೆ.
ಶನಿವಾರ ಬೆಳಗ್ಗೆ (ಯುಎಸ್ ಕಾಲಮಾನದ ಪ್ರಕಾರ) ಈ ಘಟನೆ ನಡೆದಿದೆ. ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿದ್ದು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ನ್ಯೂಯಾರ್ಕ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಈ ಹೇಯಕೃತ್ಯದ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದೂ ಹೇಳಿದೆ. ಅಂದಹಾಗೇ, ಈ 8 ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು, ಗಾಂಧಿ ಸ್ಮಾರಕ ಅಂತರಾಷ್ಟ್ರೀಯ ಪ್ರತಿಷ್ಠಾನ 1986ರ ಅಕ್ಟೋಬರ್ 2ರಂದು, ಮಹಾತ್ಮ ಗಾಂಧಿಯವರ 117ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ನೀಡಿತ್ತು. ಅಂದಿನ ಸಮಾರಂಭದಲ್ಲಿ ಅಮೆರಿಕದ ನಾಗರಿಕ ಹಕ್ಕುಗಳ ಪರ ಹೋರಾಟಗಾರ ಬೇಯಾರ್ಡ್ ರಸ್ಟಿನ್ ಭಾಷಣವನ್ನೂ ಮಾಡಿದ್ದರು.
On Mahatma Gandhi statue in New York City being defaced:@MEAIndia @IndianEmbassyUS @DrSJaishankar @NYCMayor @NYPDPC @globalnyc pic.twitter.com/Sr0Q2RQIWn
— India in New York (@IndiainNewYork) February 5, 2022
ಕಳೆದ ತಿಂಗಳು ಯುಎಸ್ನ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ಕೂಡ ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಕಾಲಿನ ಭಾಗ ಮತ್ತು ಮುಖವನ್ನು ಧ್ವಂಸ ಮಾಡಿದ್ದರು. ಅದು ಆರು ಅಡಿ ಎತ್ತರದ, 294 ಕೆಜಿ ತೂಕದ ಕಂಚಿನ ಪ್ರತಿಮೆಯಾಗಿತ್ತು. ಈ ಪ್ರತಿಮೆಯನ್ನು ಭಾರತ ಸರ್ಕಾರ ಡೇವಿಸ್ ನಗರಕ್ಕೆ ನೀಡಿತ್ತು. ಇದನ್ನು ಸ್ಥಾಪಿಸುವಾಗ ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಅದೆಲ್ಲದರ ಮಧ್ಯೆಯೂ ನಗರ ಆಡಳಿತ ಯಶಸ್ವಿಯಾಗಿ ಗಾಂಧಿ ಪ್ರತಿಮೆ ಸ್ಥಾಪನೆ ಮಾಡಿತ್ತು.
ಇದನ್ನೂ ಓದಿ: ಮಕ್ಕಳ ಅತಿಯಾದ ಮೊಬೈಲ್ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ
Published On - 1:24 pm, Sun, 6 February 22