ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ ‘ಟಾಲರೆನ್ಸ್​ ಪ್ರಶಸ್ತಿ’ಯ ಗರಿ

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ 'ಟಾಲರೆನ್ಸ್ ಪ್ರಶಸ್ತಿ 2026' ಲಭಿಸಿದೆ. ಜಾಗತಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವ ಮಂದಿರದ ಕೊಡುಗೆಗೆ ಈ ಗೌರವ ಸಂದಿದೆ. ಬ್ರಹ್ಮವಿಹಾರಿ ಸ್ವಾಮೀಜಿ ಕುಟುಂಬ ಮೌಲ್ಯ ಮತ್ತು ನೈತಿಕತೆಗಳ ಕುರಿತು ಸಂದೇಶ ನೀಡಿದರು. ಈ ಗೌರವ ಭಾರತೀಯ ಸಂಸ್ಕೃತಿ ಮತ್ತು ಮಾನವೀಯ ಸಹೋದರತ್ವಕ್ಕೆ ದೊರೆತ ವಿಜಯವಾಗಿದೆ.

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ ‘ಟಾಲರೆನ್ಸ್​ ಪ್ರಶಸ್ತಿ’ಯ ಗರಿ
ಪ್ರಶಸ್ತಿ

Updated on: Jun 04, 2026 | 12:55 PM

ಅಬುಧಾಬಿ, ಜೂನ್ 04: ಯುಎಇ (UAE) ರಾಜಧಾನಿ ಅಬುಧಾಬಿಯಲ್ಲಿರುವ ಪ್ರಸಿದ್ಧ ಬಿಎಪಿಎಸ್ (BAPS) ಹಿಂದೂ ಮಂದಿರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ ಟಾಲರೆನ್ಸ್​ ಪ್ರಶಸ್ತಿ 2026” (Tolerance Award 2026) ಒಲಿದು ಬಂದಿದೆ. ಜಾಗತಿಕವಾಗಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಮಂದಿರ ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚೆಗೆ ನಡೆದ ‘ಥರ್ಡ್​ ಇಂಟರ್​ನ್ಯಾಷನಲ್ ಡೈಲಾಗ್ ಆಫ್ ಸಿಲಿಲೈಸೇಷನ್ ಆ್ಯಂಡ್ ಟಾಲರೆನ್ಸ್​ ಕಾನ್ಫರೆನ್ಸ್​(IDCT 2026)ನಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಅಬುಧಾಬಿಯ ಈ ಹಿಂದೂ ಮಂದಿರವು ಕೇವಲ ಒಂದು ಪ್ರಾರ್ಥನಾ ಮಂದಿರವಾಗಿ ಉಳಿಯದೆ, ಗಲ್ಫ್ ರಾಷ್ಟ್ರಗಳಲ್ಲಿ ಜಾಗತಿಕ ಏಕತೆಯ ಸಂಕೇತವಾಗಿ ಹೊರಹೊಮ್ಮಿದೆ.

ಮಂದಿರವು ಆಯೋಜಿಸುವ ‘ಫೆಸ್ಟಿವಲ್ ಆಫ್ ಹಾರ್ಮೋನಿ’, ‘ಓಮ್ಸಿಯಾತ್’ ನಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಧರ್ಮ ಮತ್ತು ಸಂಸ್ಕೃತಿಯ ಜನರನ್ನು ಒಟ್ಟಿಗೆ ತರುತ್ತಿವೆ. ಸಂಕಷ್ಟದ ಸಮಯದಲ್ಲಿ ಮತ್ತು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಂದಿರವು ಹಮ್ಮಿಕೊಳ್ಳುವ ಜನಪದ ಕಾರುಣ್ಯದ ಸೇವೆಗಳು ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ.

ಮತ್ತಷ್ಟು ಓದಿ: Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಮಂದಿರದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬ್ರಹ್ಮವಿಹಾರಿ ಸ್ವಾಮೀಜಿ ಅವರು ಭವಿಷ್ಯದ ಕುಟುಂಬ, ಧರ್ಮ ಮತ್ತು ತಂತ್ರಜ್ಞಾನದ ಕುರಿತು ಅತ್ಯಂತ ಪ್ರಬುದ್ಧವಾದ ಸಂದೇಶ ನೀಡಿದರು.

ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಮನುಷ್ಯ ತನ್ನ ನೈತಿಕ ಮೌಲ್ಯಗಳು ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. ಪ್ರತಿ ಕುಟುಂಬವೂ ದಿನದ ಕೆಲವು ಸಮಯವನ್ನು ಮೊಬೈಲ್, ಇಂಟರ್ನೆಟ್‌ನಂತಹ ಡಿಜಿಟಲ್ ಆಕರ್ಷಣೆಗಳಿಂದ ದೂರವಿಟ್ಟು, ಒಟ್ಟಿಗೆ ಕುಳಿತು ಪ್ರಾರ್ಥನೆ ಮತ್ತು ಪರಸ್ಪರ ಪ್ರೀತಿಯ ಸಂಭಾಷಣೆಯಲ್ಲಿ ಕಳೆಯಬೇಕು (ಘರ್ ಸಭಾ). ನಮಗೆ ಕೇವಲ ತಂತ್ರಜ್ಞಾನ ತುಂಬಿದ ಕುಟುಂಬಗಳಿಗಿಂತ, ಸಂಸ್ಕಾರ ಮತ್ತು ಮೌಲ್ಯಗಳು ತುಂಬಿದ ಕುಟುಂಬಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಮಹಂತ್ ಸ್ವಾಮಿ ಮಹಾರಾಜ್ ಅವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಎಪಿಎಸ್ ಮಂದಿರಕ್ಕೆ ಸಿಕ್ಕಿರುವ ಈ ಗೌರವವು, ವಿಶ್ವ ಶಾಂತಿ, ಕರುಣೆ ಮತ್ತು ಮಾನವೀಯ ಸಹೋದರತ್ವವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಭಾರತೀಯ ಸಂಸ್ಕೃತಿಗೆ ಸಿಕ್ಕ ಮತ್ತೊಂದು ಜಯವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us