ತಾಲಿಬಾನ್ ಉಗ್ರರು ನನ್ನ ಕೊಂದರೂ ದೇವರ ಸೇವೆಯೆಂದು ಭಾವಿಸುವೆ; ಅಫ್ಘಾನ್ ತೊರೆಯಲೊಪ್ಪದ ಹಿಂದೂ ಅರ್ಚಕ
Afghanistan Crisis: ನಾನು ನನ್ನ ಕೊನೆಯ ಉಸಿರಿರುವರೆಗೂ ರತನ್ ನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತೇನೆ. ಒಂದುವೇಳೆ ತಾಲಿಬಾನ್ ಉಗ್ರರು ನನ್ನನ್ನು ಕೊಂದರೆ ಅದು ಕೂಡ ದೇವರಿಗೆ ನಾನು ನೀಡುವ ಸೇವೆಯೆಂದು ಭಾವಿಸುತ್ತೇನೆ ಎಂದು ಕಾಬೂಲ್ನ ರತನ್ ನಾಥ್ ದೇವಸ್ಥಾನದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಹೇಳಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಲಕ್ಷಾಂತರ ಜನರು ಅಫ್ಘಾನ್ ತೊರೆದು ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ತಾಲಿಬಾನ್ ಉಗ್ರರು ತಮ್ಮನ್ನು ಕೊಲ್ಲಬಹುದು ಎಂಬ ಭೀತಿ ಅಲ್ಲಿ ಆವರಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೇರಿರುವ ಜನಸಂದಣಿಯನ್ನು ನಿಯಂತ್ರಿಸಲಾಗದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನೇ ಸ್ಥಗಿತಗೊಳಿಸಲಾಗಿದೆ. ಅಫ್ಘಾನ್ನಲ್ಲಿ ವಾಸವಾಗಿರುವ ಹಿಂದೂ, ಸಿಖ್ ಸಮುದಾಯದವರಿಗೆ ಜೀವಭಯ ಎದುರಾಗಿದೆ. ಆದರೆ, ಕೆಲವರು ಮಾತ್ರ ಏನೇ ಆದರೂ ಆ ಹಣೆಬರಹವನ್ನು ಇಲ್ಲಿಯೇ ಅನುಭವಿಸುತ್ತೇವೆ, ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅವರಲ್ಲಿ ಕಾಬೂಲ್ನ ರತನ್ ನಾಥ್ ದೇವಸ್ಥಾನದ ಪ್ರಧಾನ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಕೂಡ ಒಬ್ಬರು.
ರಾಜೇಶ್ ಕುಮಾರ್ ಅವರ ಜೊತೆಗಿದ್ದ ಬಹುತೇಕ ಹಿಂದೂಗಳು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಅವರು ರಾಜೇಶ್ ಕುಮಾರ್ ಅವರನ್ನು ಭಾರತಕ್ಕೆ ವಾಪಾಸ್ ಕರೆಸಿಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ನಾನು ನನ್ನ ಕೊನೆಯ ಉಸಿರಿರುವರೆಗೂ ರತನ್ ನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತೇನೆ. ಒಂದುವೇಳೆ ತಾಲಿಬಾನ್ ಉಗ್ರರು ನನ್ನನ್ನು ಕೊಂದರೆ ಅದು ಕೂಡ ದೇವರಿಗೆ ನಾನು ನೀಡುವ ಸೇವೆಯೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಪಂಡಿತ್ ರಾಜೇಶ್ ಕುಮಾರ್ ಅವರ ಪೂರ್ವಜರು ಕೂಡ ಇದೇ ದೇವಾಲಯದಲ್ಲಿ ಅರ್ಚಕರಾಗಿದ್ದರು. ವಂಶಪಾರಂಪರ್ಯವಾಗಿ ಬಂದಿರುವ ಈ ಸಂಪ್ರದಾಯವನ್ನು ಅರ್ಧಕ್ಕೆ ನಿಲ್ಲಿಸಿ ನನ್ನ ಜೀವ ಉಳಿಸಿಕೊಳ್ಳಲು ದೇಶ ಬಿಟ್ಟು ಪಲಾಯನ ಮಾಡುವುದಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ ಈ ಹಿಂದೂ ದೇವಾಲಯದ ಬಾಗಿಲು ಹಾಕುವುದಿಲ್ಲ ಎಂದು ಪಂಡಿತ್ ರಾಜೇಶ್ ಕುಮಾರ್ ತಮ್ಮ ನಿಲುವನ್ನು ತಿಳಿಸಿದ್ದಾರೆ.
Pandit Rajesh Kumar, the priest of Rattan Nath Temple in Kabul:
“Some Hindus have urged me to leave Kabul & offered to arrange for my travel and stay.
But my ancestors served this Mandir for hundreds of years. I will not abandon it. If Taliban kiIIs me, I consider it my Seva”
— Bharadwaj (@BharadwajSpeaks) August 15, 2021
ಅಫ್ಘಾನ್ನಲ್ಲಿದ್ದ ಭಾರತದ ರಾಯಭಾರ ಕಚೇರಿಯ ಹಲವು ಅಧಿಕಾರಿಗಳನ್ನು ಈಗಾಗಲೇ ಏರ್ಲಿಫ್ಟ್ ಮಾಡಲಾಗಿದೆ. ಇನ್ನೂ 120ಕ್ಕೂ ಹೆಚ್ಚು ಭಾರತೀಯರು ಅಫ್ಘಾನ್ನಲ್ಲಿ ಸಿಲುಕಿದ್ದಾರೆ. ಅಫ್ಘಾನ್ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆತರುವ ಸಲುವಾಗಿ ಭಾರತದ ವಿದೇಶಾಂಗ ಸಚಿವಾಲಯದಿಂದ ವಿಶೇಷ ಸಹಾಯವಾಣಿ ತೆರೆಯಲಾಗಿದೆ.
ಭಾರತದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 919717785379 ಸಹಾಯವಾಣಿ ತೆರೆಯಲಾಗಿದೆ. ಹಾಗೇ, MEAHelpdeskIndia@gmail.com ಇಮೇಲ್ ಹೆಲ್ಪ್ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಬಯಸುವ ಅಫ್ಘಾನ್ನಲ್ಲಿರುವ ಭಾರತೀಯರು ಭಾರತವನ್ನು ಸಂಪರ್ಕಿಸಬಹುದು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಮ್ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದೊಳಗೆ ನುಗ್ಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಅಫ್ಘಾನ್ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಏರ್ಲಿಫ್ಟ್ ಮೂಲಕ ವಾಪಾಸ್ ಕರೆಸಿಕೊಂಡಿದೆ. ಹಾಗೇ, ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ ಸಮುದಾಯದ ಜನರ ಜೊತೆ ನಿಕಟ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅವರನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: Afghanistan Plane Crash: ಉಜಬೆಕಿಸ್ತಾನದಲ್ಲಿ ಅಫ್ಘಾನಿಸ್ತಾನದ ಮಿಲಿಟರಿ ವಿಮಾನ ಪತನ
MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ
(Afghanistan Crisis: if Taliban Kill Me i Consider it My Seva Says Last Hindu Priest in Afghanistan Refuses to Leave)