‘ದೇಹಗಳು ಛಿದ್ರಗೊಂಡು ಗಾಳಿಯಲ್ಲಿ ಹಾರಾಡುತ್ತಿದ್ದವು’: ಕಾಬೂಲ್ ಸ್ಫೋಟದ ಭೀಕರ ಅನುಭವ ತೆರೆದಿಟ್ಟ ಪ್ರತ್ಯಕ್ಷದರ್ಶಿ
Kabul Blast: ಕಾಬೂಲ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು, ತಾವು ಎದುರಿಸಿದ ಭೀಕರ ಘಟನಾವಳಿಗಳನ್ನು ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಬೆಳವಣಿಗೆ ತಂಡದ ಮಾಜಿ ಉದ್ಯೋಗಿಯಾದ ಆ ವ್ಯಕ್ತಿಗೆ ಆ ದಿನ ಬೇಗನೇ ಪ್ರಾರಂಭವಾಗಿತ್ತು. ಅಮೇರಿಕಾದ ವೀಸಾ ಹೊಂದಿದ್ದ ಅವರು, ಕಾಬೂಲ್ನ ವಿಮಾನ ನಿಲ್ದಾಣಕ್ಕೆ ಬೇಗನೇ ತೆರಳಿ, ಅದರ ಗೇಟುಗಳು ತೆರೆಯುವುದನ್ನೇ ಕಾಯುತ್ತಿದ್ದರು. ಅಲ್ಲಿದ್ದ ಸಾವಿರಾರು ಜನರ ಬಯಕೆಯೂ ಒಂದೆ, ಗೇಟು ತೆರೆದ ತಕ್ಷಣ ಒಳಗೆ ತೆರಳಿ, ಯಾವುದಾದರೊಂದು ವಿಮಾನದಲ್ಲಿ ಜಾಗ ಹಿಡಿದು ಪಾರಾಗಬೇಕು ಎಂಬುದು. ಏರ್ಲಿಫ್ಟ್ ಕೊನೆಯ ಹಂತದಲ್ಲಿದ್ದ ಕಾರಣ, ಎಲ್ಲರಿಗೂ ಆತಂಕ ಇದ್ದೇ ಇತ್ತು. ಅವರು ಸುಮಾರು ಹತ್ತು ಗಂಟೆ ಕಾಲ ‘ಅಬ್ಬೇ ಗೇಟ್’ ಬಳಿಯೇ ಕಾದಿದ್ದರು. ಸಂಜೆ 5ರ ಸುಮಾರಿಗೆ ಭೀಕರವಾದ ಸ್ಫೋಟವಾಯಿತು.
ಘಟನೆಯ ಮುಂದಿನ ಸಂದರ್ಭಗಳನ್ನು ಅವರ ಮಾತುಗಳಲ್ಲೇ ಕೇಳಿ. ‘‘ಸ್ಫೋಟಗೊಂಡಾಗ ಭೂಮಿಯಿಂದ ಯಾರೋ ನನ್ನ ಕಾಲನ್ನು ಎಳೆದಂತ ಭೀಕರ ಅನುಭವವಾಯಿತು. ಆ ಶಬ್ಧಕ್ಕೆ ನನ್ನ ಕಿವಿಯ ತಮಟೆಗಳು ಸಿಡಿದಂತೆ ಅನ್ನಿಸಿ, ಶ್ರವಣದ ಶಕ್ತಿಯನ್ನೇ ಕಳೆದುಕೊಂಡಿದ್ದೆ. ಸುಂಟರಗಾಳಿಯಲ್ಲಿ ಸಿಕ್ಕಿದ ಪ್ಲಾಸ್ಟಿಕ್ ಬ್ಯಾಗ್ಗಳಂತೆ ಮನುಷ್ಯರ ದೇಹಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಘಟನಾ ಸ್ಥಳದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಡೀ ಜೀವಿತಾವಧಿಯಲ್ಲಿ ನೋಡಬಾರದ ಕೆಟ್ಟ ಘಟನೆಯೊಂದಕ್ಕೆ ನಾನು ನನ್ನ ಕಣ್ಣಾರೆ ಸಾಕ್ಷಿಯಾದೆ ಎಂದು ಆ ವ್ಯಕ್ತಿ ಕಣ್ಣೀರು ಹಾಕಿದ್ದಾರೆ. ಪ್ರಸ್ತುತ ತಾಲಿಬಾನ್ ಆಳ್ವಿಕೆ ಇರುವುದರಿಂದ, ಹಿಂದಿನ ಸರ್ಕಾರದ ಭಾಗವಾಗಿದ್ದ ವ್ಯಕ್ತಿಗಳು ತಮ್ಮ ಗುರುತನ್ನು ಎಲ್ಲೂ ಹೇಳಿಕೊಳ್ಳುತ್ತಿಲ್ಲವಾದ್ದರಿಂದ ಸ್ಫೋಟಕ್ಕೆ ಸಾಕ್ಷಿಯಾದ ವ್ಯಕ್ತಿ ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಈ ಹಿಂದೆಯೂ ಹಲವಾರು ಬಾರಿ ರಕ್ತಸಿಕ್ತ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಆದರೆ ಕಳೆದ 20 ವರ್ಷಗಳ ಕೆಳಗೆ ತಾಲಿಬಾನಿಗಳು ಆಳ್ವಿಕೆ ಕೊನೆಗೊಂಡ ನಂತರ ಹಲವಾರು ಬಾರಿ ಸ್ಫೋಟಗಳು ನಡೆದಿವೆ. ಪ್ರಸ್ತುತ ನಡೆದಿರುವ ಘಟನೆ ಅವುಗಳಿಗಿಂತ ತೀವ್ರವಾಗಿದ್ದು ಎಲ್ಲರನ್ನೂ ಅಕ್ಷರಶಃ ಬೆಚ್ಚಿಬೀಳಿಸಿದೆ. ಅಲ್ಲಿನ ಸ್ಥಳೀಯರ ಪ್ರಕಾರ, ಇಂತಹ ಸ್ಫೋಟಗಳು ನಡೆದಾಗ ಪೊಲೀಸರು ಹಾಗೂ ಸಿಬ್ಬಂದಿಗಳು ಆಗಮಿಸಿ ಘಟನಾ ಸ್ಥಳವನ್ನು ಸೀಲಿಂಗ್ ಮಾಡಿ, ಗಾಯಾಳುಗಳನ್ನು ಹಾಗೂ ಮೃತ ದೇಹಗಳನ್ನು ಸಾಗಿಸುತ್ತಿದ್ದರು. ಆದರೆ ನಿನ್ನೆ ನಡೆದ ಸ್ಫೋಟದ ನಂತರ, ಗಾಯಾಳುಗಳು ಅಲ್ಲಲ್ಲೇ ಬಿದ್ದು, ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. ಮೃತ ದೇಹಗಳೂ ಅಲ್ಲಲ್ಲೇ ಇತ್ತು. ಇದನ್ನೆಲ್ಲಾ ನಿರ್ವಹಿಸಲು ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದಿದ್ದಾರೆ. ಈ ಮೂಲಕ ಅತ್ಯಂತ ಆಪತ್ತಿನ ಸಂದರ್ಭದಲ್ಲೂ ಒದಗಿಬರುವ ಯಾವ ವ್ಯವಸ್ಥೆಗಳು ರಾಷ್ಟ್ರದ ರಾಜಧಾನಿಯಲ್ಲಿ ಪ್ರಸ್ತುತ ಲಭ್ಯವಿಲ್ಲ ಎಂದು ಅವರು ದುಃಖ ತೋಡಿಕೊಂಡಿದ್ದಾರೆ.
ಇದನ್ನೂ ಓದಿ:
Taliban vs ISIS-K: ತಾಲಿಬಾನ್ನಿಂದ ಹೊರ ಬಂದವರೇ ಐಸಿಸ್-ಕೆ ಸ್ಥಾಪಕ ಸದಸ್ಯರು; ಉಗ್ರರಿಗೆ ಉಗ್ರರೇ ಶತ್ರು
(Kabul blast survivor narrates the blast situation)
Published On - 11:56 am, Fri, 27 August 21