ಅಫ್ಘಾನಿಸ್ತಾನದ ನೂತನ ಪ್ರಧಾನಿ, ಸಚಿವರೆಲ್ಲರೂ ವಿಶ್ವಸಂಸ್ಥೆ ಈ ಹಿಂದೆ ಘೋಷಿಸಿದ ಜಾಗತಿಕ ಭಯೋತ್ಪಾದಕರು

ಅಫ್ಘಾನಿಸ್ತಾನದ ನೂತನ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್, ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, ಒಳಾಡಳಿತ ಸಚಿವ ಸಿರಾಜುದ್ದೀನ್ ಹಕ್ಕಾನಿಯನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಈ ಹಿಂದೆಯೇ ಜಾಗತಿಕ ಭಯೋತ್ಪಾದಕರು ಎಂದು ಘೋಷಣೆ ಮಾಡಿತ್ತು.

ಅಫ್ಘಾನಿಸ್ತಾನದ ನೂತನ ಪ್ರಧಾನಿ, ಸಚಿವರೆಲ್ಲರೂ ವಿಶ್ವಸಂಸ್ಥೆ ಈ ಹಿಂದೆ ಘೋಷಿಸಿದ ಜಾಗತಿಕ ಭಯೋತ್ಪಾದಕರು
ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್
TV9kannada Web Team

| Edited By: Skanda

Sep 08, 2021 | 1:17 PM

ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್​ ಉಗ್ರರು ಕೊನೆಗೂ ತಮ್ಮದೇ ಸ್ವಂತ ಸರ್ಕಾರ ರಚನೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಈಗ ಅಫ್ಘಾನಿಸ್ತಾನದಲ್ಲಿ ಪ್ರಧಾನಿ ಪಟ್ಟಕ್ಕೆ ಏರಿದವರಿಂದ ಹಿಡಿದು ಸಚಿವ ಸಂಪುಟದಲ್ಲಿರುವ ಬಹುತೇಕ ಎಲ್ಲರೂ ವಿಶ್ವ ಸಂಸ್ಥೆಯ ಘೋಷಿತ ಭಯೋತ್ಪಾದಕರಾಗಿದ್ದಾರೆ. ಅಂದರೆ ಈ ಹಿಂದೆ ವಿಶ್ವ ಸಂಸ್ಥೆ ಯಾರನ್ನೆಲ್ಲಾ ಭಯೋತ್ಪಾದಕರು ಎಂದು ಘೋಷಣೆ ಮಾಡಿತ್ತೋ ಅವರೇ ಈಗ ಸರ್ಕಾರ ರಚನೆ ಮಾಡಿದ್ದಾರೆ.

ಅಫ್ಘಾನಿಸ್ತಾನದ ನೂತನ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್, ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, ಒಳಾಡಳಿತ ಸಚಿವ ಸಿರಾಜುದ್ದೀನ್ ಹಕ್ಕಾನಿಯನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಈ ಹಿಂದೆಯೇ ಜಾಗತಿಕ ಭಯೋತ್ಪಾದಕರು ಎಂದು ಘೋಷಣೆ ಮಾಡಿತ್ತು. ಅಲ್ಲದೇ ಇವರುಗಳನ್ನು 1988 ರ ನಿರ್ಬಂಧ ಪಟ್ಟಿಗೆ ಸೇರಿಸಿತ್ತು. ಆದರೆ ಇದೀಗ ಘೋಷಿತ ಭಯೋತ್ಪಾದಕರ ಜತೆಗೇನೇ ವಿಶ್ವ ಸಂಸ್ಥೆ, ಅಮೆರಿಕಾ ರಾಜತಾಂತ್ರಿಕ ವ್ಯವಹಾರಗಳನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಅಫ್ಘಾನಿಸ್ತಾನದಲ್ಲಿ ಏನೇನಾಗುತ್ತಿದೆ? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban Government) ನೇತೃತ್ವದ ನೂತನ ಸರ್ಕಾರ ಕಳೆದ ವಾರವೇ ಜಾರಿಗೆ ಬರಬೇಕಾಗಿತ್ತು. ಆದರೆ, ಎರಡೆರಡು ಬಾರಿ ಸರ್ಕಾರದ ಸಂಪುಟದ ಘೋಷಣೆಯನ್ನು ಮುಂದೂಡಿದ್ದ ತಾಲಿಬಾನ್ ಕೊನೆಗೂ ಅಫ್ಘಾನಿಸ್ತಾನದ ನೂತನ ಪ್ರಧಾನಮಂತ್ರಿಯ (Afghanistan Prime Minister) ಹೆಸರನ್ನು ಘೋಷಣೆ ಮಾಡಿದೆ. ತಾಲಿಬಾನ್ ಸಂಘಟನೆಯ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ತಾಲಿಬಾನ್ ಸರ್ಕಾರದ ಪ್ರಧಾನಿಯಾಗಿ ಅಧಿಕಾರಕ್ಕೇರುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್ (Mullah Muhammad Hassan Akhund) ಅವರನ್ನು ಅಫ್ಘಾನ್ ಪ್ರಧಾನಿಯೆಂದು ಘೋಷಿಸಲಾಗಿದೆ. ಮುಲ್ಲಾ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಈ ಮೊದಲು ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸೇರಿದಂತೆ ಅಫ್ಘಾನಿಸ್ತಾನದ ಅಧ್ಯಕ್ಷ/ ಪ್ರಧಾನಮಂತ್ರಿ ಸ್ಥಾನಕ್ಕೆ ತಾಲಿಬಾನ್​ನ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ಮೊಹಮ್ಮದ್ ಹಸನ್ ಅಕುಂದ್ ಅವರನ್ನು ಅಫ್ಘಾನ್​ ನೂತನ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ.

ಅಫ್ಘಾನಿಸ್ತಾನದ ನೂತನ ಸರ್ಕಾರದಲ್ಲಿ ತಾಲಿಬಾನ್ ನಾಯಕರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ. ಹಸನ್ ಅಕುಂದ್ ಅಫ್ಘಾನಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಲಿದ್ದು, ಮುಲ್ಲಾ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಮಂತ್ರಿಯಾಗಲಿದ್ದಾರೆ. ಅಬಾಸ್ ಸ್ಟಾನಿಕ್​ಜೈ ವಿದೇಶಾಂಗ ಖಾತೆಯ ಉಪ ಸಚಿವರಾಗಲಿದ್ದಾರೆ. ಅಮೀರ್ ಖಾನ್ ಮುತಾಖಿ ಅಫ್ಘಾನ್​ನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ. ಸಿರಾಜುದ್ದೀನ್ ಹಕ್ಕಾನಿ ಅವರನ್ನು ಒಳಾಡಳಿತ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಮುಲ್ಲಾ ಯಾಕೂಬ್ ರಕ್ಷಣಾ ಸಚಿವರಾಗಲಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡು ಸುಮಾರು 2 ವಾರಗಳಾಗಿವೆ. ಇದಾದ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಆ. 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ನೂತನ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್​ ಸಂಘಟನೆಯ ಪ್ರಮುಖ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗಲಿವೆ. ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಶೇಖ್ ಹೈಬತುಲ್ಲಾ ಅಖುಂಡಜಾದ, ಮುಲ್ಲಾ ಮುಹಮ್ಮದ್ ಒಮರ್ ಅವರ ಮಗನಾದ ಮೌಲವಿ ಮುಹಮ್ಮದ್ ಯಾಕೂಬ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗುವುದು. ಈ ಮೊದಲು ಮುಲ್ಲಾ ಹಿಬತುಲ್ಲಾ ಅಖುಂಡಜಾದ ಅವರನ್ನೇ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಬಳಿಕ ಮುಲ್ಲಾ ಬರಾದಾರ್ ಹೆಸರು ಕೇಳಿಬಂದಿತ್ತು. ಇದೀಗ ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್ ಅವರನ್ನು ಪ್ರಧಾನಿಯಾಗಿ ಘೋಷಿಸಲಾಗಿದೆ. ಅಫ್ಘಾನ್ ಸರ್ಕಾರ ಈಗಾಗಲೇ ವಿವಿಧ ರಾಜ್ಯಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ; ಮೊಹಮ್ಮದ್ ಹಸನ್ ಅಕುಂದ್ ನೂತನ ಪ್ರಧಾನ ಮಂತ್ರಿ 

ಅಫ್ಘಾನ್​​ನಲ್ಲೀಗ ತಾಲಿಬಾನಿಗಳದ್ದೇ ಕಾರುಬಾರು; ಇತ್ತ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

(New Prime Ministers and ministers in Afghanistan were the Global terrorists announced by The United Nations)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada