‘ಪಿಎಚ್ಡಿ, ಸ್ನಾತಕೋತ್ತರ ಪದವಿಗಳಿಗೆಲ್ಲ ಅಫ್ಘಾನ್ನಲ್ಲಿ ಇನ್ನು ಬೆಲೆಯಿಲ್ಲ..ನಾವೆಲ್ಲ ಅದನ್ನು ಕಲಿಯದೆ ಸಾಧನೆ ಮಾಡಿದ್ದೇವೆ‘- ತಾಲಿಬಾನ್ ಶಿಕ್ಷಣ ಸಚಿವ
ಆಧುನಿಕ ಶಿಕ್ಷಣ ನೀತಿ ಅಳವಡಿಸಿಕೊಳ್ಳಲಾಗುವುದು. ಇಲ್ಲಿನ ವಿಧ್ವಾಂಸರು, ಪ್ರತಿಭಾವಂತರು, ಶಿಕ್ಷಣವಂತರಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸಲಾಗುವುದು ಎಂದು ತಾಲಿಬಾನ್ ಸರ್ಕಾರ ಹೇಳಿತ್ತು.
ಅಫ್ಘಾನಿಸ್ತಾನದಲ್ಲಿ ಇದೀಗ ತಾಲಿಬಾನಿಗಳ ಮಧ್ಯಂತರ ಸರ್ಕಾರ ರಚನೆಯಾಗಿದೆ. ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್ ಪ್ರಧಾನಿ ಹುದ್ದೆಗೆ ಏರಿಲಿದ್ದಾರೆ. ವಿವಿಧ ಇಲಾಖೆಗಳ ಸಚಿವರ ಹೆಸರೂ ಘೋಷಣೆಯಾಗಿದೆ. ಹಾಗೇ, ಹೊಸ ಸರ್ಕಾರ ತನ್ನ ಒಂದೊಂದೇ ಹೊಸ ನೀತಿಗಳನ್ನು ಪ್ರಕಟಗೊಳಿಸುತ್ತಿದೆ. ಈ ಮಧ್ಯೆ ಅಫ್ಘಾನಿಸ್ತಾನದ ನೂತನ ಶಿಕ್ಷಣ ಸಚಿವ ಒಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಇನ್ಮುಂದೆ ಅಫ್ಘಾನಿಸ್ತಾನದಲ್ಲಿ ಪಿಎಚ್ಡಿ (PhD) ಸೇರಿ ಯಾವುದೇ ರೀತಿಯ ಮಾಸ್ಟರ್ ಡಿಗ್ರಿ (ಸ್ನಾತಕೋತ್ತರ ಪದವಿ)ಗಳಿಗೆ ಬೆಲೆಯಿಲ್ಲ ಎಂದುಬಿಟ್ಟಿದ್ದಾರೆ.
ತಾಲಿಬಾನಿಗಳ ಷರಿಯಾ ಕಟ್ಟಳೆಯಲ್ಲಿ ಶಿಕ್ಷಣ ನೀತಿ ಮೊದಲೇ ವಿಚಿತ್ರ. ಅಲ್ಲಿ ಹುಡುಗರು-ಹುಡುಗಿಯರು ಒಟ್ಟಾಗಿ ವಿದ್ಯಾಭ್ಯಾಸ ಮಾಡುವಂತಿಲ್ಲ. ಅದಾಗಲೇ ಅಲ್ಲಿ ನಿಯಮ ಜಾರಿಯಾಗಿದ್ದು, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ನಡುವೆ ಪರದೆಯನ್ನು ಹಾಕಿ ಉಪನ್ಯಾಸ ಮಾಡುತ್ತಿರುವ ಫೋಟೋಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದೀಗ ಅಫ್ಘಾನಿಸ್ತಾನದ ನೂತನ ಶಿಕ್ಷಣ ಸಚಿವರಾಗಿರುವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್ ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿ, ಇದೀಗ ತಾಲಿಬಾನ್ ಸರ್ಕಾರ ಬಂದಿದೆ. ತಾಲಿಬಾನಿಗಳಲ್ಲಿ ಇದೀಘ ಪ್ರಧಾನಿ ಹುದ್ದೆಗೆ ಏರುತ್ತಿರುವ ಮುಲ್ಲಾರಿಂದ ಹಿಡಿದು ಯಾರೂ ಯಾವುದೇ ಪದವಿ ಪಡೆದವರಲ್ಲ. ಆದರೂ ಸಾಧನೆ ಮಾಡಿದ್ದಾರೆ. ಈ ಕಾಲದಲ್ಲಿ ಯಾವುದೇ ಸ್ನಾತಕೋತ್ತರ ಪದವಿಗಳಾಗಲಿ, ಪಿಎಚ್ಡಿಯಾಗಲೀ ಅಗತ್ಯವಿಲ್ಲ. ಅದಕ್ಕೆಲ್ಲ ಬೆಲೆಯೂ ಇಲ್ಲ. ತಾಲಿಬಾನ್ ಸರ್ಕಾರ ಅಧಿಕೃತವಾಗಿ ರಚನೆಯಾಗುವುದೊಂದೇ ಬಾಕಿ ಇದೆ. ಅದಾದ ಕೂಡಲೇ ಹಲವು ಬದಲಾವಣೆಗಳು ಆಗಲಿವೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ತುಂಬ ಬದಲಾವಣೆ ಆಗಲಿದೆ. ಶಾಲಾ-ಕಾಲೇಜುಗಳಲ್ಲಿ ಹುಡುಗರು-ಹುಡುಗಿಯರ ಮಧ್ಯೆ ಪರದೆ ಹಾಕಲಾಗುವುದು..ಹೆಣ್ಣು ಮಕ್ಕಳಿಗೆ ವಯಸ್ಸಾದ ಪುರುಷರು ಅಥವಾ ಮಹಿಳಾ ಶಿಕ್ಷಕಿಯರು ಮಾತ್ರ ಕಲಿಸಬಹುದು ಎಂದೂ ತಿಳಿಸಿದ್ದಾರೆ.
ಸರ್ಕಾರ ರಚನೆಗೂ ಮೊದಲು ತಾಲಿಬಾನ್ ಶಿಕ್ಷಣ ಕ್ಷೇತ್ರಕ್ಕೆ ತೊಡಕು ಉಂಟು ಮಾಡುವುದಿಲ್ಲ ಎಂದು ಹೇಳಿತ್ತು. ಆಧುನಿಕ ಶಿಕ್ಷಣ ನೀತಿ ಅಳವಡಿಸಿಕೊಳ್ಳಲಾಗುವುದು. ಇಲ್ಲಿನ ವಿಧ್ವಾಂಸರು, ಪ್ರತಿಭಾವಂತರು, ಶಿಕ್ಷಣವಂತರಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವುದಾಗಿಯೂ ತನ್ನ ಹೊಸ ನೀತಿಯಲ್ಲಿ ಉಲ್ಲೇಖಿಸಿದೆ. ಇಸ್ಲಾಮಿಕ ಮತ್ತು ಷರಿಯಾ ಕಾನೂನಿನ ಪ್ರಕಾರಕ್ಕೆ ಶಿಕ್ಷಣಕ್ಕೆ ಸೂಕ್ತ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದೆ. ಆದರೆ ಈಗ ನೋಡಿದರೆ ಸ್ನಾತಕೋತ್ತರ ಪದವಿಗಳೇ ಬೇಡ ಎನ್ನುತ್ತಿದ್ದಾರೆ ಹೊಸ ಶಿಕ್ಷಣ ಸಚಿವರು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರದ ಚುಕ್ಕಾಣಿ ಹಿಡಿಯಲಿರುವ ಪ್ರಮುಖ ನಾಯಕರು ಯಾರೆಲ್ಲ?
ಮಳೆಗೆ ನಾಯಿಕೊಡೆಗಳು ಹುಟ್ಟಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೆ ಕಾಂಡೋಮ್ ಪತ್ತೆ!