AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳೊಂದಿಗೆ ಕಾಬೂಲ್​ನಲ್ಲಿ ತಾಲಿಬಾನ್ ಪರೇಡ್; ಅಫ್ಘಾನ್ ಸೇನೆಯ ಶಕ್ತಿ ಪ್ರದರ್ಶನ

ಅಮೆರಿಕ ನಿರ್ಮಿತ M117 ಶಸ್ತ್ರಸಜ್ಜಿತ ಭದ್ರತಾ ವಾಹನಗಳು, MI-17 ಹೆಲಿಕಾಪ್ಟರ್‌ಗಳು ಓವರ್‌ಹೆಡ್‌ನಲ್ಲಿ ಗಸ್ತು ತಿರುಗುವ ಮೂಲಕ ಅಫ್ಘಾನಿಸ್ತಾನ ಸರ್ಕಾರದ ತಾಲಿಬಾನಿಗರು ಕಾಬೂಲ್ ರಸ್ತೆಯ ಮೇಲೆ ಮೆರವಣಿಗೆ ನಡೆಸಿದರು.

ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳೊಂದಿಗೆ ಕಾಬೂಲ್​ನಲ್ಲಿ ತಾಲಿಬಾನ್ ಪರೇಡ್; ಅಫ್ಘಾನ್ ಸೇನೆಯ ಶಕ್ತಿ ಪ್ರದರ್ಶನ
ತಾಲಿಬಾನ್ (ಸಾಂದರ್ಭಿಕ ಚಿತ್ರ)
TV9 Web
| Updated By: ಸುಷ್ಮಾ ಚಕ್ರೆ|

Updated on:Nov 15, 2021 | 9:24 AM

Share

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬಂದ ತಾಲಿಬಾನ್ ನೇತೃತ್ವದ ಸರ್ಕಾರ ಅಫ್ಘಾನ್​ನಲ್ಲಿ ಬೀಡುಬಿಟ್ಟಿದ್ದ ಅಮೆರಿಕ ಸೇನಾಪಡೆಗೆ ಅಫ್ಘಾನ್​ ಬಿಟ್ಟು ಹೋಗಲು ಗಡುವನ್ನು ನೀಡಿತ್ತು. ಆ ಗಡುವು ಮೀರುವುದರೊಳಗೆ ಅಮೆರಿಕ ಸೇನಾ ಪಡೆ ತಮ್ಮ ನೆಲಕ್ಕೆ ವಾಪಾಸ್ ತೆರಳಿತ್ತು. ಈ ವೇಳೆ ಅಮೆರಿಕ ಸೇನೆಯ ಯುದ್ಧ ವಿಮಾನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಾಬೂಲ್​ನಲ್ಲಿ ಬಿಟ್ಟು ಹೋಗಿದ್ದ ಅಮೆರಿಕ ಸೈನಿಕರು ಅವುಗಳಲ್ಲಿ ಹಲವನ್ನು ಮತ್ತೆ ಉಪಯೋಗಿಸಲು ಬಾರದಂತೆ ಧ್ವಂಸ ಮಾಡಿ ಹೋಗಿದ್ದರು. ಕಾಬೂಲ್​ನಲ್ಲಿ ವಶಪಡಿಸಿಕೊಂಡ ಅಮೆರಿಕನ್ ನಿರ್ಮಿತ ಶಸ್ತ್ರಸಜ್ಜಿತ ವಾಹನಗಳು ಮತ್ತು ರಷ್ಯಾದ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಭಾನುವಾರ ಮಿಲಿಟರಿ ಮೆರವಣಿಗೆ ನಡೆಸಿರುವ ತಾಲಿಬಾನ್ ವಿಶ್ವಕ್ಕೆ ತಮ್ಮ ಶಕ್ತಿ ಪ್ರದರ್ಶನ ಮಾಡಿವೆ.

ತಾಲಿಬಾನ್ ಎರಡು ದಶಕಗಳ ಕಾಲ ದಂಗೆಕೋರ ಹೋರಾಟಗಾರರಾಗಿ ಕಾರ್ಯ ನಿರ್ವಹಿಸಿತ್ತು. ಆದರೆ, ಪಾಶ್ಚಿಮಾತ್ಯ ಬೆಂಬಲಿತ ಅಫ್ಘಾನ್ ಸರ್ಕಾರ ಆಗಸ್ಟ್‌ನಲ್ಲಿ ಪತನಗೊಂಡಾಗ ಅಮೆರಿಕ ಬಿಟ್ಟುಹೋದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ದೊಡ್ಡ ಸಂಗ್ರಹವನ್ನು ಪೆರೇಡ್ ಮೂಲಕ ಪ್ರದರ್ಶನ ಮಾಡಿರುವ ತಾಲಿಬಾನ್ ತಮ್ಮ ಸರ್ಕಾರದ ಸೇನಾ ಸಾಮರ್ಥ್ಯವನ್ನು ವಿಶ್ವದೆದುರು ತೆರೆದಿಟ್ಟಿದೆ.ಈ ಪರೇಡ್ 250 ಹೊಸದಾಗಿ ತರಬೇತಿ ಪಡೆದ ಸೈನಿಕರ ಪದವಿಗೆ ಸಂಬಂಧಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಾಜ್ಮಿ ಹೇಳಿದ್ದಾರೆ.

ಈ ಪರೇಡ್​ನಲ್ಲಿ ಅಮೆರಿಕ ನಿರ್ಮಿತ M117 ಶಸ್ತ್ರಸಜ್ಜಿತ ಭದ್ರತಾ ವಾಹನಗಳು, MI-17 ಹೆಲಿಕಾಪ್ಟರ್‌ಗಳು ಓವರ್‌ಹೆಡ್‌ನಲ್ಲಿ ಗಸ್ತು ತಿರುಗುವ ಮೂಲಕ ಅಫ್ಘಾನಿಸ್ತಾನ ಸರ್ಕಾರದ ತಾಲಿಬಾನಿಗರು ಕಾಬೂಲ್ ರಸ್ತೆಯ ಮೇಲೆ ಮೆರವಣಿಗೆ ನಡೆಸಿದರು. ಅನೇಕ ಸೈನಿಕರು ಅಮೇರಿಕನ್ ನಿರ್ಮಿತ-M4 ಅಸಾಲ್ಟ್ ರೈಫಲ್​ಗಳನ್ನು ಹೊತ್ತು ಹೆಜ್ಜೆ ಹಾಕಿದರು. ತಾಲಿಬಾನ್ ಪಡೆಗಳು ಈಗ ಬಳಸುತ್ತಿರುವ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ತಾಲಿಬಾನ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವ ಅಫ್ಘಾನ್ ರಾಷ್ಟ್ರೀಯ ಪಡೆಯನ್ನು ನಿರ್ಮಿಸುವ ಪ್ರಯತ್ನದಲ್ಲಿ ಕಾಬೂಲ್‌ನಲ್ಲಿನ ಅಮೇರಿಕನ್ ಬೆಂಬಲಿತ ಸರ್ಕಾರಕ್ಕೆ ವಾಷಿಂಗ್ಟನ್‌ನಿಂದ ಸರಬರಾಜು ಮಾಡಲ್ಪಟ್ಟಿದ್ದಾಗಿದೆ.

ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರದಲ್ಲಿದ್ದ ಸೇನೆಯ ಪೈಲಟ್‌ಗಳು, ಮೆಕ್ಯಾನಿಕ್ಸ್ ಮತ್ತು ಇತರ ಪರಿಣಿತರನ್ನು ತಾಲಿಬಾನ್ ನೇತೃತ್ವದ ಹೊಸ ಸೇನಾ ಪಡೆಗೆ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. ಹಾಗೇ, ತಾಲಿಬಾನ್ ಸರ್ಕಾರದ ಮಿಲಿಟರಿ ಸಿಬ್ಬಂದಿ ಈ ಹಿಂದೆ ಧರಿಸುತ್ತಿದ್ದ ಸಾಂಪ್ರದಾಯಿಕ ಅಫ್ಘಾನ್ ಉಡುಪುಗಳ ಬದಲಿಗೆ ಸಾಂಪ್ರದಾಯಿಕ ಮಿಲಿಟರಿ ಸಮವಸ್ತ್ರವನ್ನು ಧರಿಸಲು ಪ್ರಾರಂಭಿಸಲಾಗಿದೆ. ಅಫ್ಘಾನಿಸ್ತಾನವನ್ನು ತೊರೆದು ತಾಯ್ನಾಡಿಗೆ ಹೋಗುವಾಗ ಅಮೆರಿಕದ ಸೇನಾ ಸಿಬ್ಬಂದಿ ಸುಮಾರು 70 ಏರ್​ಕ್ರಾಫ್ಟ್, 15ಕ್ಕೂ ಹೆಚ್ಚು ಶಸ್ತ್ರಸಜ್ಜಿತ ವಾಹನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಿ ಹೋಗಿದ್ದರು. ಇದರಿಂದ ಅವುಗಳನ್ನು ತಾಲಿಬಾನಿಗರಿಗೆ ಮತ್ತೆ ಉಪಯೋಗಿಸಲು ಸಾಧ್ಯವಾಗದು. ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆದರೆ ತಮಗೆ ಅವರ ಸೇನೆ ಬಳಸುತ್ತಿದ್ದ ಯುದ್ಧ ವಿಮಾನ, ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ತಾಲಿಬಾನ್ ಉಗ್ರರಿಗೆ ಅಮೆರಿಕ ಸೇನಾ ಸಿಬ್ಬಂದಿ ಚಳ್ಳೆ ಹಣ್ಣು ತಿನ್ನಿಸಿ ತಮ್ಮ ದೇಶಕ್ಕೆ ತೆರಳಿದ್ದರು.

ಇದನ್ನೂ ಓದಿ: ಅಫ್ಘಾನ್​​ನಲ್ಲಿ ಮತ್ತೆ ಸ್ಫೋಟ; ಮಿನಿ ಬಸ್​​ನಲ್ಲಿ ನಡೆದ ಅವಘಡದಲ್ಲಿ ಒಬ್ಬ ಬಲಿ, ಐವರಿಗೆ ಗಾಯ

ಅಫ್ಘಾನಿಸ್ತಾನದಲ್ಲಿ ಶೇ.75ರಷ್ಟು ಹುಡುಗಿಯರು ಮರಳಿ ಶಾಲೆಗೆ; ಶಿಕ್ಷಣ ಕಸಿಯುವುದಿಲ್ಲವೆಂದ ತಾಲಿಬಾನ್ ಹಂಗಾಮಿ ಸಚಿವ !

Published On - 9:22 am, Mon, 15 November 21