ನಮಗೆ ತೊಂದರೆಯಾಗುತ್ತಿದೆ, ಆಕ್ರಮಣವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ: ಪಾಕಿಸ್ತಾನಕ್ಕೆ ಖಡಕ್​ ಎಚ್ಚರಿಕೆ ನೀಡಿದ ತಾಲಿಬಾನ್​

ನಮಗೆ ತೊಂದರೆಯಾಗುತ್ತಿದೆ, ಆಕ್ರಮಣವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ: ಪಾಕಿಸ್ತಾನಕ್ಕೆ ಖಡಕ್​ ಎಚ್ಚರಿಕೆ ನೀಡಿದ ತಾಲಿಬಾನ್​
ಪ್ರಾತಿನಿಧಿಕ ಚಿತ್ರ

ತಾಲಿಬಾನ್​ ಸಂಸ್ಥಾಪಕ ಮುಲ್ಲಾ ಮೊಹಮ್ಮದ್​ ಒಮರ್​​  ಪುಣ್ಯ ಸ್ಮರಣೆ ಹೊತ್ತಲ್ಲಿ ಮಾತುಗಳನ್ನಾಡಿದ ಯಾಕೂಬ್​, ಈ ಬಾರಿ ಸುಮ್ಮನೆ ಬಿಟ್ಟಿದ್ದೇವೆ. ನಮ್ಮ ದೇಶದ ಹಿತಾಸಕ್ತಿಗಾಗಿ ಮೌನವಹಿಸಿದ್ದೇವೆ ಎಂದಿದ್ದಾರೆ.

TV9kannada Web Team

| Edited By: Lakshmi Hegde

Apr 25, 2022 | 4:26 PM

ನಮ್ಮ ನೆರೆ ರಾಷ್ಟ್ರಗಳು ಸೇರಿ, ಯಾವುದೇ ದೇಶಗ ಆಕ್ರಮಣವನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಅಫ್ಘಾನಿಸ್ತಾನದ ಹಾಲಿ ರಕ್ಷಣಾ ಸಚಿವ ಹೇಳಿದ್ದಾರೆ. ಇತ್ತೀಚೆಗೆ ಅಫ್ಘಾನ್​​ ಮೇಲೆ ಪಾಕಿಸ್ತಾನ ಏರ್​ಸ್ಟ್ರೈಕ್​​ ನಡೆಸಿದೆ. ಈ ವೈಮಾನಿಕ ದಾಳಿಯಲ್ಲಿ ಕುನಾರ್​ ಮತ್ತು ಖೋಸ್ಟ್​ ಪ್ರಾಂತ್ಯದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್​ ಆರೋಪ ಮಾಡಿದೆ. ಪಾಕಿಸ್ತಾನವೇ ನಡೆಸಿದೆ ಎನ್ನಲಾದ ಈ ಏರ್​ಸ್ಟ್ರೈಕ್​ ಬಗ್ಗೆ ತಾಲಿಬಾನ್​ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದನ್ನೆಲ್ಲ ಸಹಿಸಿಕೊಳ್ಳುವುದಿಲ್ಲ ಎಂದಿದೆ. ಇಡೀ ವಿಶ್ವ ಮತ್ತು ನಮ್ಮ ನೆರೆರಾಷ್ಟ್ರಗಳಿಂದ ನಮಗೆ ವಿವಿಧ ಸವಾಲುಗಳು ಎದುರಾಗುತ್ತಿವೆ. ಅದಕ್ಕೆ ಉದಾಹರಣೆ ಕುನಾರ್​ ಮೇಲೆ ನಡೆದ ಏರ್​ಸ್ಟ್ರೈಕ್​ ಎಂದು ಅಫ್ಘಾನ್​​ನ ರಕ್ಷಣಾ ಸಚಿವ ಮೊಹಮ್ಮದ್​ ಯಾಕೂಬ್​ ತಿಳಿಸಿದ್ದಾರೆ. ತಮ್ಮ ತಂದೆ, ತಾಲಿಬಾನ್​ ಸಂಸ್ಥಾಪಕ ಮುಲ್ಲಾ ಮೊಹಮ್ಮದ್​ ಒಮರ್​​  ಪುಣ್ಯ ಸ್ಮರಣೆ ಹೊತ್ತಲ್ಲಿ ಮಾತುಗಳನ್ನಾಡಿದ ಯಾಕೂಬ್​, ಈ ಬಾರಿ ಸುಮ್ಮನೆ ಬಿಟ್ಟಿದ್ದೇವೆ. ನಮ್ಮ ದೇಶದ ಹಿತಾಸಕ್ತಿಗಾಗಿ ಮೌನವಹಿಸಿದ್ದೇವೆ. ಆದರೆ ಮತ್ತೊಂದು ಬಾರಿ ಇಂಥ ದಾಳಿಯಾದರೆ ಖಂಡಿತ ಸಹಿಸಿಕೊಳ್ಳುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

ತಾಲಿಬಾನಿಗಳ ಆರೋಪಕ್ಕೆ ಸದ್ಯಕ್ಕೇನೂ ಪಾಕಿಸ್ತಾನ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಸಹೋದರ ದೇಶಗಳಿದ್ದಂತೆ. ಎರಡೂ ದೇಶಗಳ ಸರ್ಕಾರಗಳು ಮತ್ತು ಜನರು ದೀರ್ಘಕಾಲದಿಂದ ಭಯೋತ್ಪಾದನೆಯಿಂದ ಅಪಾಯ ಎದುರಿಸುತ್ತಿವೆ/ದ್ದಾರೆ.  ಹೀಗಾಗಿ ನಮ್ಮ ಎರಡೂ ದೇಶಗಳು ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೋರಾಡಲು ಒಂದಾಗಬೇಕು. ನಮ್ಮ ನೆಲದಲ್ಲಿನ ಭಯೋತ್ಪಾದಕತೆ ವಿರುದ್ಧ ಕ್ರಮ  ಕೈಗೊಳ್ಳಬೇಕು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಮತ್ತೊಮ್ಮೆ ಬಂದಾಗ ಅತ್ಯಂತ ಹೆಚ್ಚು ಖುಷಿಪಟ್ಟಿದ್ದೇ ಪಾಕಿಸ್ತಾನ. ಆದರೆ ಅದೀಗ ಮೊದಲಿನಂತೆ ಇಲ್ಲ. ತಾಲಿಬಾನ್​ ಮತ್ತು ಪಾಕಿಸ್ತಾನದ ಮಧ್ಯೆಯೂ ಬಂದಿದ್ದು ಗಡಿವಿವಾದ. ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿರುವ ಗಿಲ್ಗಿಟ್ ಬಲ್ಚಿಸ್ತಾನ ಪ್ರಾಂತ್ಯದ ಸಮೀಪ ಭಾರತ ಮತ್ತು ಅಫ್ಘಾನಿಸ್ತಾನದ ಗಡಿಯಾದ ಡ್ಯುರಾಂಡ್ ಲೈನ್​​ನ ಸುಮಾರು 2640 ಕಿಮೀ ದೂರದ ಭೂಪ್ರದೇಶದ ವಿಚಾರವಾಗಿ ತಾಲಿಬಾನ್​ ಹೋರಾಟಗಾರರು ಮತ್ತು ಪಾಕಿಸ್ತಾನ ಸೇನೆ ನಡುವೆ ಸಂಘರ್ಷ ಉಂಟಾಗಿದೆ.  ಇದರಿಂದಾಗಿ ಪದೇಪದೆ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. 2021ರ ಡಿಸೆಂಬರ್​​ನಲ್ಲೂ ಸಹ ಪರಸ್ಪರ ದಾಳಿ ನಡೆದಿತ್ತು. ಅದಾದ ನಂತರ ಫೆಬ್ರವರಿಯಲ್ಲಿ ಕುನಾರ್​​ನಲ್ಲಿ ಪಾಕಿಸ್ತಾನ ಸೇನೆ ತಾಲಿಬಾನಿಗಳ ಮೇಲೆ ಗುಂಡಿನ ದಾಳಿ ನಡೆಸಿತ್ತು. ಫಿರಂಗಿ ಪ್ರಯೋಗವನ್ನೂ ಮಾಡಿತ್ತು. ಒಟ್ಟಾರೆ ಗಡಿ ವಿಚಾರಕ್ಕೆ ತಾಲಿಬಾನಿಗಳು ಪಾಕಿಸ್ತಾನದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ:Coronavirus: ರಾಜ್ಯದಲ್ಲಿ ಕೊವಿಡ್ ಪರಿಸ್ಥಿತಿ ಪರಿಶೀಲನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ

Follow us on

Related Stories

Most Read Stories

Click on your DTH Provider to Add TV9 Kannada