Big News: ಆತ ನನ್ನನ್ನು ಕೊಲ್ಲುತ್ತಾನೆ; ಅತ್ಯಾಚಾರ ನಡೆಸಿ ಮದುವೆಯಾದ ತಾಲಿಬಾನ್ ನಾಯಕನ ವಿರುದ್ಧ ವಿಡಿಯೋ ರಿಲೀಸ್ ಮಾಡಿದ ಯುವತಿ

| Updated By: ಸುಷ್ಮಾ ಚಕ್ರೆ

Updated on: Sep 02, 2022 | 12:01 PM

ತನ್ನ ಫೋನ್‌ನಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಪಡೆಗಳ ಚಿತ್ರಗಳನ್ನು ಇಟ್ಟುಕೊಂಡಿದ್ದರಿಂದ ಎಲಾಹಾಳನ್ನು ತಾಲಿಬಾನ್ ಗುಪ್ತಚರ ಇಲಾಖೆ ಬಂಧಿಸಿತ್ತು. ತನ್ನ ಜೀವಕ್ಕೆ ಅಪಾಯವಿದೆ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Big News: ಆತ ನನ್ನನ್ನು ಕೊಲ್ಲುತ್ತಾನೆ; ಅತ್ಯಾಚಾರ ನಡೆಸಿ ಮದುವೆಯಾದ ತಾಲಿಬಾನ್ ನಾಯಕನ ವಿರುದ್ಧ ವಿಡಿಯೋ ರಿಲೀಸ್ ಮಾಡಿದ ಯುವತಿ
ಸಯೀದ್ ಖೋಸ್ಟಿ - ಎಲಾಹಾ
Follow us on

ಕಾಬೂಲ್: ತಾಲಿಬಾನ್ (Taliban) ಆಂತರಿಕ ಸಚಿವಾಲಯದ ಮಾಜಿ ವಕ್ತಾರ ಸಯೀದ್ ಖೋಸ್ಟಿ (Saeed Khosty) ಮಾಜಿ ರಾಷ್ಟ್ರೀಯ ಭದ್ರತಾ ಜನರಲ್‌ (ಎನ್​ಡಿಎಸ್​) ಮಗಳನ್ನು ಮದುವೆಯಾಗಿದ್ದರು. ಆದರೆ, ಅವರೀಗ ಆಕೆಗೆ ಬಲವಂತದಿಂದ ವಿಚ್ಛೇದನ ನೀಡಿದ್ದು, ಈ ಕುರಿತು ಅವರ ಪತ್ನಿ 24 ವರ್ಷದ ಎಲಾಹಾ, 24 ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಕಾಬೂಲ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಎಲಾಹಾ ತಾಲಿಬಾನ್ ಗುಪ್ತಚರ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸಯೀದ್ ಖೋಸ್ಟಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಇದು ನನ್ನ ಅಂತಿಮ ಮಾತುಗಳಾಗಿರಬಹುದು. ಈ ವಿಡಿಯೋ ಹೊರಬಿದ್ದ ಬಳಿಕ ನಾನು ಬದುಕುತ್ತೇನೆಂಬ ಯಾವ ನಂಬಿಕೆಯೂ ನನಗಿಲ್ಲ ಎಂದು ಆಕೆ ಅಳುತ್ತಾ ವಿಡಿಯೋ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾದ ವಿಡಿಯೋವೊಂದರಲ್ಲಿ ಎಲಾಹಾ ತಾಲಿಬಾನ್ ನಾಯಕ ಸಯೀದ್ ಖೋಸ್ಟಿ ಬಗ್ಗೆ ಹೇಳಿದ್ದಾರೆ. ಆತ ದಿನವೂ ನನಗೆ ಹಿಂಸಿಸುತ್ತಿದ್ದ. ದಿನಾ ರಾತ್ರಿ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಇದೇ ನನ್ನ ಕೊನೆಯ ಮಾತುಗಳಾಗಿರಬಹುದು. ಏಕೆಂದರೆ, ಆತ ಖಂಡಿತವಾಗಿಯೂ ನನ್ನನ್ನು ಕೊಲ್ಲುತ್ತಾನೆ. ದಿನವೂ ಆತನ ಕೈಯಲ್ಲಿ ಸಾಯುತ್ತಾ ಹಿಂಸೆ ಅನುಭವಿಸುವುದಕ್ಕಿಂತ ಒಂದೇ ಬಾರಿ ಸಾಯುವುದು ಒಳ್ಳೆಯದು ಎಂದು ಎಲಾಹಾ ಹೇಳಿದ್ದಾರೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಉದ್ಯೋಗಿಗಳು ಗಡ್ಡ ಬಿಡುವುದು ಕಡ್ಡಾಯ; ಸೂಟ್ ಧರಿಸಿದವರಿಗೆ ನೋ ಎಂಟ್ರಿ!

ತನ್ನ ಫೋನ್‌ನಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಪಡೆಗಳ ಚಿತ್ರಗಳನ್ನು ಇಟ್ಟುಕೊಂಡಿದ್ದರಿಂದ ಎಲಾಹಾಳನ್ನು ತಾಲಿಬಾನ್ ಗುಪ್ತಚರ ಇಲಾಖೆ ಬಂಧಿಸಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆಕೆಯನ್ನು ಅವಮಾನಿಸಿ, ಹಿಂಸೆ ನೀಡಿ, ವಿಡಿಯೊ ಚಿತ್ರೀಕರಣ ಮಾಡಲಾಗುತ್ತಿತ್ತು. ಅಲ್ಲದೆ, ಸಯೀದ್ ಖೋಸ್ಟಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.

ತಾಲಿಬಾನ್ ಅಧಿಕಾರಿ ಮತ್ತು ಹಲವಾರು ಶಸ್ತ್ರಸಜ್ಜಿತ ತಾಲಿಬಾನ್ ಸದಸ್ಯರು ನಂತರ ಆಕೆಯ ಕುಟುಂಬವನ್ನು ಭೇಟಿ ಮಾಡಿ, ಆಕೆಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಅದಕ್ಕೆ ಆಕೆಯ ಮನೆಯವರು ಒಪ್ಪದಿದ್ದಾರೆ ಅವರನ್ನು ಹೆದರಿಸಿದ್ದರು. ಬಳಿಕ, ಅನಿವಾರ್ಯವಾಗಿ ಎಲಾಹಾ ಸಯೀದ್ ಖೋಸ್ಟಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಬೇಕಾಯಿತು. ಆಕೆಯನ್ನು ಈಗ ಕಾಬೂಲ್‌ನ ಗುಲ್ಬಹಾರ್ ಕೇಂದ್ರದಲ್ಲಿ ಇರಿಸಲಾಗಿದೆ. ಅವಳು ಪರಾರಿಯಾಗಲು ಪದೇ ಪದೇ ಪ್ರಯತ್ನಿಸುತ್ತಿದ್ದರೂ, ತಾಲಿಬಾನಿಗಳು ಆಕೆಯನ್ನು ಬಂಧಿಸಿಟ್ಟಿದ್ದರು.

ಇದನ್ನೂ ಓದಿ: Big News: ಭಾರತ ನನ್ನ ಕುಟುಂಬವಿದ್ದಂತೆ; ಶಿಕ್ಷಣದ ವೀಸಾ, ಸ್ಕಾಲರ್​​ಶಿಪ್ ನೀಡಲು ಮೋದಿಗೆ ಪತ್ರ ಬರೆದ ಅಫ್ಘಾನ್ ಯುವತಿ

ಕೊನೆಗೆ ಹೇಗೋ ಮಾಡಿ ಸ್ಮಾರ್ಟ್‌ಫೋನ್ ಪಡೆದ ಆಕೆ ತನ್ನ ವೀಡಿಯೊವನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ತನ್ನ ಜೀವಕ್ಕೆ ಅಪಾಯವಿದೆ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನವು ಕಳೆದ ವರ್ಷದ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ನಿಯಂತ್ರಣವನ್ನು ತೆಗೆದುಕೊಂಡಾಗಿನಿಂದ ಅಫ್ಘಾನ್​ನಲ್ಲಿ ಮೂಲಭೂತ ಮಹಿಳಾ ಹಕ್ಕುಗಳನ್ನು ನಿಗ್ರಹಿಸಲಾಗಿದೆ. ಮಾಧ್ಯಮ ಸ್ವಾತಂತ್ರ್ಯವನ್ನು ಕೂಡ ನಿರ್ಬಂಧಿಸಲಾಗಿದೆ. ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಅಕ್ಷರಶಃ ನರಕವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ