Vijay Babu: ಲೈಂಗಿಕ ದೌರ್ಜನ್ಯದ ಆರೋಪ; ನಟ ವಿಜಯ್ ಬಾಬು ಪಾಸ್​ಪೋರ್ಟ್​​ ಜಪ್ತಿ

Vijay Babu: ಲೈಂಗಿಕ ದೌರ್ಜನ್ಯದ ಆರೋಪ; ನಟ ವಿಜಯ್ ಬಾಬು ಪಾಸ್​ಪೋರ್ಟ್​​ ಜಪ್ತಿ
ವಿಜಯ್ ಬಾಬು

Vijay Babu Case: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ನಟ, ನಿರ್ಮಾಪಕ ವಿಜಯ್​ ಬಾಬು ಪಾಸ್‌ಪೋರ್ಟ್ ಜಪ್ತಿ ಮಾಡಲಾಗಿದೆ. ಇದರಿಂದ ಅವರ ವೀಸಾ ಕೂಡ ರದ್ದಾಗಲಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ.

TV9kannada Web Team

| Edited By: shivaprasad.hs

May 20, 2022 | 12:17 PM

ಮಾಜಿ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕೇರಳದ ನಟ-ನಿರ್ಮಾಪಕ ವಿಜಯ್ ಬಾಬು (Vijay Babu) ಅವರ ಪಾಸ್‌ಪೋರ್ಟನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಕೊಚ್ಚಿ ನಗರ ಪೊಲೀಸರು ಕೇಂದ್ರಕ್ಕೆ ಸಲ್ಲಿಸಿದ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪಾಸ್‌ಪೋರ್ಟ್ ಜಪ್ತಿ ಮಾಡಿರುವುದರಿಂದ ವಿಜಯ್ ಬಾಬು ಅವರ ವೀಸಾ ಕೂಡ ರದ್ದಾಗಲಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ. ಈ ವಿಷಯವನ್ನು ಭಾರತೀಯ ರಾಯಭಾರ ಕಚೇರಿಯ ಮೂಲಕ ಯುಎಇ ರಾಯಭಾರ ಕಚೇರಿಗೆ ತಿಳಿಸಲಾಗುವುದು. ಪಾಸ್​ಪೋರ್ಟ್​​ ಜಪ್ತಿಯಾಗಿರುವುದರಿಂದ ವಿಜಯ್ ಬಾಬು ಅವರನ್ನು ಯುಎಇ ಪೊಲೀಸರು ಬಂಧಿಸಿ ಕೇರಳಕ್ಕೆ ಕಳುಹಿಸುವ ಸಾಧ್ಯತೆಗಳಿವೆ. ಆದರೆ ವಿಜಯ್ ಬಾಬು ಯುಎಇಯಿಂದ ಮತ್ತೊಂದು ದೇಶಕ್ಕೆ ತೆರಳಿರುವುದರ ಬಗ್ಗೆಯೂ ಅನುಮಾನಗಳಿವೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಎಎನ್​ಐ ವರದಿ ಮಾಡಿದ್ದು, ವಿಜಯ್​ ಬಾಬು ಪಾಸ್​ಪೋರ್ಟ್​​ನಲ್ಲಿರುವ ಎಲ್ಲಾ ದೇಶಗಳ ವೀಸಾಗಳು ಈಗ ಅಮಾನ್ಯವಾಗಿವೆ. ಅವರು ಬೇರೆ ದೇಶಕ್ಕೆ ತೆರಳಿರುವ ಸೂಚನೆಗಳಿದ್ದು, ವಿಜಯ್ ವಿರುದ್ಧ ನ್ಯಾಯಾಲಯದ ವಾರೆಂಟ್ ಇದೆ ಎಂದು ಮಾಹಿತಿ ನೀಡಿದೆ.

ಕೊಚ್ಚಿನ ನಗರ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯಲ್ಲಿ, ಮೇ 24 ರಂದು ವಿಜಯ್ ಬಾಬು ಕಚೇರಿಗೆ ಹಾಜರಾಗದಿದ್ದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಕುರಿತು ಎಎನ್​ಐ ಟ್ವೀಟ್:

ಸಂತ್ರಸ್ತೆಯ ಹೆಸರನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಿದ್ದ ವಿಜಯ್ ಬಾಬು:

ಈ ಹಿಂದೆ ಏಪ್ರಿಲ್ 22ರಂದು ವಿಜಯ್ ಬಾಬು ವಿರುದ್ಧ ದಕ್ಷಿಣ ಎರ್ನಾಕುಲಂ ಪೊಲೀಸರು ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ದೂರಿನಲ್ಲಿ ವಿಜಯ್ ಬಾಬು ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಕೊಚ್ಚಿಯ ಫ್ಲಾಟ್‌ನಲ್ಲಿ ನಟ ತಮ್ಮ ಮೇಲೆ ಒಂದಕ್ಕಿಂತಲೂ ಅಧಿಕ ಬಾರಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ದೂರು ನೀಡಿರುವ ಮಹಿಳೆ ಕೋಳಿಕ್ಕೋಡ್ ಜಿಲ್ಲೆಯವರಾಗಿದ್ದು, ವಿಜಯ್ ಬಾಬು ಅವರ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನೀಡುವ ನೆಪದಲ್ಲಿ ಈ ಅಪರಾಧ ಎಸಗಿದ್ದಾರೆ ಎಂದು ತಿಳಿಸಿದ್ದರು.

ಈ ಪ್ರಕರಣಕ್ಕೆ ಫೇಸ್​ಬುಕ್​ ಲೈವ್​ನಲ್ಲಿ ಸ್ಪಷ್ಟನೆ ನೀಡಿದ್ದ ವಿಜಯ್ ಬಾಬು ತಮ್ಮ ಮಾತಿನ ನಡುವೆ ಉದ್ದೇಶಪೂರ್ವಕವಾಗಿ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಬಾರದೆಂಬ ಕಾನೂನನ್ನು ತಾವು ಮುರಿದಿದ್ದು, ಇದರ ಪರಿಣಾಮ ಎದುರಿಸಲು ಸಿದ್ಧ ಎಂದೂ ಘೋಷಿಸಿದ್ದರು. ಈ ಪ್ರಕರಣದಲ್ಲಿ ತಾವೇ ಸಂತ್ರಸ್ತ ಎಂದೂ ಅವರು ಹೇಳಿಕೊಂಡಿದ್ದರು. ಮಹಿಳೆಯ ಹೆಸರನ್ನು ಬಹಿರಂಗಪಡಿಸಿದ್ದ ಕಾರಣ, ದಕ್ಷಿಣ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು.

ಇದನ್ನೂ ಓದಿ: Vijay Babu: ಮಲಯಾಳಂನ ಖ್ಯಾತ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada