ಅಫ್ಘಾನಿಸ್ತಾನ ತೊರೆಯುವ ಮುನ್ನಾ ದಿನ ಅಶ್ರಫ್ ಘನಿ ‘ಸಾಯುವವರೆಗೆ ಹೋರಾಡುತ್ತೇನೆ’ ಎಂದಿದ್ದರು: ಯುಎಸ್ ವಿದೇಶಾಂಗ ಕಾರ್ಯದರ್ಶಿ
ಬುಧವಾರದಂದು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆಶ್ರಫ್ ಘನಿ ಅವರು, ಅಫ್ಘಾನಿಸ್ತಾನ ಜನರ ಕ್ಷಮೆ ಯಾಚಿಸಿದ್ದಾರೆ. ಅರಮನೆಯ ಭದ್ರತಾ ದಳದ ಸಲಹೆ ಮೇರೆಗೆ ತಾನು ದೇಶ ತೊರೆದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ: ಸುಮಾರು ಒಂದು ತಿಂಗಳ ಹಿಂದೆ ತಾಲಿಬಾನಿಗಳು ಕಾಬೂಲ್ ನಗರವನ್ನು ಪ್ರವೇಶಿಸುತ್ತಿದ್ದಂತೆ ಗಂಟೆಮೂಟೆ ಕಟ್ಟಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪಲಾಯನಗೈದು ಅಲ್ಲಿ ಆಶ್ರಯ ಪಡೆದಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರು, ತಾವು ಹೊರಡುವ ಮುನ್ನಾ ದಿನ ‘ಕೊನೆಯುಸಿರುವವರೆಗೆ ಹೋರಾಡುತ್ತೇನೆ,’ ಎಂದು ಹೇಳಿದ್ದರು, ಅಂತ ಟೊಲೋ ನ್ಯೂಸ್ ಚ್ಯಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರು ಹೇಳಿದ್ದಾರೆ.
ಆಗಸ್ಟ್ 15 ರಂದು, ಮೂರು ಲಕ್ಷಕ್ಕೂ ಹೆಚ್ಚಿನ ಸಂಖ್ಯಾಬಲದ ಆಫ್ಘನ್ ಸೇನೆಯಿಂದ ಒಂದಿಷ್ಟೂ ಪ್ರತಿರೋಧ ಎದುರಿಸದೆ ತಾಲಿಬಾನ್ ಪಡೆಗಳು ಘನಿ ಅವರ ಸರ್ಕಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಅವರು ಯುಎಈಗೆ ಓಡಿಹೋದರು.
ಟೊಲೊ ವರದಿಗಾರ ಲೋತ್ಫುಲ್ಲಾಹ್ ನಜಾಫಿಜಾದಾ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡಲು ನೀವು ಸಹಾಯ ಮಾಡಿದ್ರಾ? ಅಂತ ಬ್ಲಿಂಕನ್ ಅವರನ್ನು ಕೇಳಿದಾಗ ಯುಎಸ್ ಡಿಪ್ಲೊಮ್ಯಾಟ್ ನೀಡಿದ ಉತ್ತರವನ್ನು ಟೊಲೊ ಟಿವಿ ಟ್ವೀಟ್ ಮಾಡಿದೆ.
‘ಅವರು (ಘನಿ) ದೇಶ ತೊರೆಯುವ ಒಂದು ದಿನ ಮೊದಲು ನನ್ನೊಂದಿಗೆ ಮಾತಾಡಿದಾಗ ಅವರು ನಾನು ಸಾಯುವವರೆಗೆ ಹೋರಾಡಲು ಸಿದ್ಧನಾಗಿದ್ದೇನೆ ಅಂತ ಹೇಳಿದರು ಎಂದು ಬ್ಲಿಂಕನ್ ತಿಳಿಸಿದ್ದಾರೆ.
Lotfullah Najafizada: "Did you help President Ghani flee the country?"Blinken: Ghani said night before fleeing "he was prepared to fight to the death."Watch the exclusive interview with US Secretary Antony Blinken tonight at 8pm (#Afghanistan time) on TOLOnews#TOLOnews pic.twitter.com/aXh1KlPPTu
— TOLOnews (@TOLOnews) September 8, 2021
ಆದರೆ, ಬುಧವಾರದಂದು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆಶ್ರಫ್ ಘನಿ ಅವರು, ಅಫ್ಘಾನಿಸ್ತಾನ ಜನರ ಕ್ಷಮೆ ಯಾಚಿಸಿದ್ದಾರೆ. ಅರಮನೆಯ ಭದ್ರತಾ ದಳದ ಸಲಹೆ ಮೇರೆಗೆ ತಾನು ದೇಶ ತೊರೆದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಆಗಸ್ಟ್ 15 ರಂದು ತಾಲಿಬಾನಿ ಪಡೆಗಳು ಕಾಬೂಲ್ ನಗರವನ್ನು ಅನಿರೀಕ್ಷಿತವಾಗಿ ಪ್ರವೇಶಿಸಿದಾಗ ನಾನು ತರಾತುರಿಯಲ್ಲಿ ಕಾಬೂಲ್ ಅನ್ನು ತೊರೆದಿರುವುದಕ್ಕೆ ಆಫ್ಘನ್ ಜನರಿಗೆ ವಿವರಣೆ ನೀಡುವುದು ನನ್ನ ಭಾಧ್ಯತೆಯಾಗಿದೆ. ನಾನೊಂದು ವೇಳೆ ಅಲ್ಲೇ ಉಳಿದಿದ್ದರೆ, 1990ರಲ್ಲಿ ಕಾಬೂಲ್ ನಗರದಲ್ಲಿ ನಡೆಯುತ್ತಿದ್ದ ಹಾಗೆ ಬೀದಿ ಕಾಳಗ ಆರಂಭವವಾಗುತ್ತದೆ ಎಂದು ನನಗೆ ತಿಳಿಸಲಾಯಿತು. ಆಗ ಕಾಬೂಲಿನ ಜನ ಎಷ್ಟು ಕಷ್ಟಪಟ್ಟರು ಅಂತ ನನಗೆ ಚೆನ್ನಾಗಿ ನೆನಪಿದೆ,’ ಎಂದು ಘನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಬೂಲ್ ನಗರವನ್ನು ತ್ಯಜಿಸುವುದು ತಮ್ಮ ಬದುಕಿನ ಅತ್ಯಂತ ಕಠೋರ ನಿರ್ಧಾರವಾಗಿತ್ತು ಎಂದು ಹೇಳಿರುವ ಘನಿ ಅವರು, ತಾಲಿಬಾನಿಗಳ ಬಂದೂಕುಗಳನ್ನು ನಿಶಬ್ದವಾಗಿಡಲು ಮತ್ತು ಕಾಬೂಲ್ ನಗರವನ್ನು ಸುರಕ್ಷಿತವಾಗಿರಿಸಲು ತಾನು ಹಾಗೆ ಮಾಡದೆ ಬೇರೆ ದಾರಿಯಿರಲಿಲ್ಲ ಎಂದಿದ್ದಾರೆ.
ದೇಶ ತೊರೆಯುವಾಗ ತಾನು ಹಣದ ಮೂಟೆಗಳನ್ನು ಕಟ್ಟಿಕೊಂಡು ಹೋಗಿದ್ದೇನೆ ಎಂದು ಹೇಳುತ್ತಿರುವುದು ಅಪ್ಟಟ ಸುಳ್ಳು, ಅಫ್ಘಾನಿಸ್ತಾನದ ಹಣ ತೆಗೆದುಕೊಂಡಿಲ್ಲ ಅಂತ ಘನಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆಗೆ ಅನುಮತಿ ಕಡ್ಡಾಯ, ನಾಯಕರನ್ನು ಬೈಯ್ಯುವಂತಿಲ್ಲ: ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್