ಬೀಜಿಂಗ್​ ಚಳಿಗಾಲದ ಒಲಿಂಪಿಕ್ಸ್​ಗೆ ಆಸ್ಟ್ರೇಲಿಯಾದಿಂದಲೂ ರಾಜತಾಂತ್ರಿಕ ಬಹಿಷ್ಕಾರ; ಕ್ರೀಡಾಪಟುಗಳಿಗೆ ಇಲ್ಲ ನಿರ್ಬಂಧ

| Updated By: Lakshmi Hegde

Updated on: Dec 08, 2021 | 8:03 AM

ಚೀನಾದ ಕ್ಸಿನ್​ಜಿಯಾಂಗ್​​ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ನರಮೇಧಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರಿಂದ ನಾವು ಬೀಜಿಂಗ್​ ವಿಂಟರ್​ ಒಲಿಂಪಿಕ್ಸ್​ಗೆ ಬಹಿಷ್ಕಾರ ಹಾಕುವುದಾಗಿ ಅಮೆರಿಕ ಹೇಳಿತ್ತು.

ಬೀಜಿಂಗ್​ ಚಳಿಗಾಲದ ಒಲಿಂಪಿಕ್ಸ್​ಗೆ ಆಸ್ಟ್ರೇಲಿಯಾದಿಂದಲೂ ರಾಜತಾಂತ್ರಿಕ ಬಹಿಷ್ಕಾರ; ಕ್ರೀಡಾಪಟುಗಳಿಗೆ ಇಲ್ಲ ನಿರ್ಬಂಧ
ಸ್ಕಾಟ್​ ಮಾರಿಸನ್​
Follow us on

ಚೀನಾದ ಬೀಜಿಂಗ್​​ನಲ್ಲಿ 2022ರಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕ ರಾಜತಾಂತ್ರಿಕ ಬಹಿಷ್ಕಾರ ಹಾಕಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕೂಡ ಅದೇ ಹೆಜ್ಜೆ ಇಟ್ಟಿದೆ. ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾದ ಅಧಿಕಾರಿಗಳು ಪಾಲ್ಗೊಳ್ಳುವುದಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಸ್ಪಷ್ಟಪಡಿಸಿದ್ದಾರೆ. ಸಿಡ್ನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನಾನು ಹೇಳುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಆಸ್ಟ್ರೇಲಿಯಾ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಹಾಳಾಗಿದೆ. ಹೀಗಾಗಿ ಮುಂದಿನ ವರ್ಷದ ವಿಂಟರ್​​ ಒಲಿಂಪಿಕ್ಸ್​​ಗೆ ನಾವೂ ಸಹ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದಿದ್ದಾರೆ. 

ರಾಜತಾಂತ್ರಿಕ ಬಹಿಷ್ಕಾರವನ್ನಷ್ಟೇ ಹೇರುತ್ತಿದ್ದೇವೆ. ಆಸ್ಟ್ರೇಲಿಯಾ ಒಂದು ಕ್ರೀಡಾ ದೇಶ. ಇಲ್ಲಿನ ಕ್ರೀಡಾಪಟುಗಳು ಖಂಡಿತವಾಗಿಯೂ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿ ಆಟವಾಡುತ್ತಾರೆ. ನಾನು ರಾಜಕೀಯ ವಿಷಯಗಳನ್ನು ಮತ್ತು ಕ್ರೀಡೆಯನ್ನು ಪ್ರತ್ಯೇಕವಾಗಿ ನೋಡಲು ಬಯಸುತ್ತೇನೆ.  ಹಾಗೇ, ಆಸ್ಟ್ರೇಲಿಯಾ ಮತ್ತು ಚೀನಾ ನಡುವೆ ದೀರ್ಘಕಾಲದಿಂದ ಇರುವ ಸಮಸ್ಯೆಯನ್ನು ಬಗೆಹರಿಸಲು ನಾನು ಇಷ್ಟಪಡುತ್ತೇನೆ. ಆದರೆ ಅದಕ್ಕಾಗಿ ನಮ್ಮ ಆಸ್ಟ್ರೇಲಿಯಾದ ಹಿತಾಸಕ್ತಿಗಾಗಿ ನಾವೀಗ ನಿಂತಿರುವ ಪ್ರಬಲ ಸ್ಥಾನದಿಂದ ಹಿಂದೆ ಸರಿಯುವುದಿಲ್ಲ ಎಂದೂ ಹೇಳಿದ್ದಾರೆ.

ಚೀನಾದ ಕ್ಸಿನ್​ಜಿಯಾಂಗ್​​ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ನರಮೇಧಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರಿಂದ ನಾವು ಬೀಜಿಂಗ್​ ವಿಂಟರ್​ ಒಲಿಂಪಿಕ್ಸ್​ಗೆ ಬಹಿಷ್ಕಾರ ಹಾಕುವುದಾಗಿ ಅಮೆರಿಕ ಹೇಳಿತ್ತು. ಈ ವಿಚಾರವನ್ನೂ ಕೂಡ ಇದೀಗ ಮಾರಿಸನ್​ ಎತ್ತಿದ್ದಾರೆ. ಚೀನಾದಲ್ಲಿ ಮುಸ್ಲಿಮರ ಮೇಲಾಗುತ್ತಿರುವ ದೌರ್ಜನ್ಯ, ಹಿಂಸಾಚಾರವನ್ನು ನಿಯಂತ್ರಿಸುವಂತೆ ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಹಲವು ಬಾರಿ ಹೇಳಿದೆ. ಆದರೆ ಮಾನವ ಹಕ್ಕುಗಳಿಗೆ ಸಂಬಂಧಪಟ್ಟ ಈ ವಿಚಾರವನ್ನು ಚೀನಾ ಗಂಭೀರವಾಗಿ ಪರಿಗಣಿಸಲಿಲ್ಲ. ಇದೀಗ ಒಲಿಂಪಿಕ್ಸ್​ ಬಹಿಷ್ಕಾರಕ್ಕೆ ಇದೂ ಒಂದು ಕಾರಣ ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ಸರ್ಕಾರ ಕೂಡ ತಾವೂ ಸಹ ವಿಂಟರ್​ ಒಲಿಂಪಿಕ್ಸ್​ಗೆ ನಮ್ಮ ಅಧಿಕಾರಿಗಳನ್ನು ಕಳಿಸುವುದಿಲ್ಲ ಎಂದು ಹೇಳಿದೆ. ಆದರೆ ಬಹಿಷ್ಕಾರ ಎಂದು ಉಲ್ಲೇಖಿಸಿಲ್ಲ. ಕೊವಿಡ್​ 19 ಕಾರಣಕ್ಕೆ ಅಧಿಕಾರಿಗಳು ಹೋಗುತ್ತಿಲ್ಲ ಎಂದಿದೆ. ಆಸ್ಟ್ರೇಲಿಯಾ, ಅಮೆರಿಕ ರಾಜತಾಂತ್ರಿಕ ಬಹಿಷ್ಕಾರದ ಬಗ್ಗೆ ಸದ್ಯಕ್ಕೇನೂ ಚೀನಾ ಪ್ರತಿಕ್ರಿಯೆ ಇಲ್ಲ. ಆದರೆ ಕೆಲವೇ ದಿನಗಳ ಹಿಂದೆ ಈ ಬಗ್ಗೆ ಮಾತನಾಡಿ, ಇಂಥದ್ದಕ್ಕೆಲ್ಲ ತಕ್ಕ ಪ್ರತೀಕಾರ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:  ಬೀಜಿಂಗ್​ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ಗೆ ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ; ಅಧಿಕೃತ ಘೋಷಣೆ

Published On - 7:59 am, Wed, 8 December 21