ಪಾಕಿಸ್ತಾನ​ ನ್ಯಾಯಾಂಗದಲ್ಲಿ ಇತಿಹಾಸ ಸೃಷ್ಟಿ; ಸುಪ್ರೀಂಕೋರ್ಟ್ ​ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೇಶಾ ಮಲ್ಲಿಕ್​ ನೇಮಕ

ಪಾಕಿಸ್ತಾನ​ ನ್ಯಾಯಾಂಗದಲ್ಲಿ ಇತಿಹಾಸ ಸೃಷ್ಟಿ; ಸುಪ್ರೀಂಕೋರ್ಟ್ ​ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೇಶಾ ಮಲ್ಲಿಕ್​ ನೇಮಕ
ಪ್ರಮಾಣ ವಚನ ಸ್ವೀಕರಿಸಿದ ಆಯೇಶಾ ಮಲ್ಲಿಕ್​

ಮಹಿಳೆಯರು ಲೈಂಗಿಕ ಅನುಭವ ಹೊಂದಿದ್ದಾರೆಯೋ ಇಲ್ಲವೋ ಎಂದು ತಿಳಿಯಲು ಬಳಸುವ ವೈದ್ಯಕೀಯ ಪರೀಕ್ಷೆಯನ್ನು ಆಯೇಶಾ ಮಲ್ಲಿಕ್​ ಕಾನೂನುಬಾಹಿರಗೊಳಿಸಿದ್ದರು.  

TV9kannada Web Team

| Edited By: Lakshmi Hegde

Jan 25, 2022 | 12:42 PM

ಪಾಕಿಸ್ತಾನ ಸುಪ್ರೀಂಕೋರ್ಟ್​​ನ ಪ್ರಥಮ ಜಡ್ಜ್​ ಆಗಿ ಆಯೇಶಾ ಮಲ್ಲಿಕ್​ ಸೋಮವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಮಹಿಳಾ ಹಕ್ಕುಗಳಿಗೆ ಬೆಲೆಯಲಿಲ್ಲ. ಅದನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿರುವ ಬೆನ್ನಲ್ಲೇ ಆಯೇಶಾ ಮಲ್ಲಿಕ್​ ಪ್ರಮಾಣ ವಚನ ಸ್ವೀಕಾರ ಒಂದು ಮಹತ್ವದ ಬೆಳವಣಿಗೆಯಾಗಿದೆ. ಸೋಮವಾರ ಇಸ್ಲಮಬಾದ್​​ನ ಸುಪ್ರೀಂಕೋರ್ಟ್​ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿತ್ತು. ಅಲ್ಲಿ 16 ಪುರುಷ ನ್ಯಾಯಾಧೀಶರೊಂದಿಗೆ ಕುಳಿತ ಆಯೇಶಾ ಮಲ್ಲಿಕ್​, ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದೊಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.  ವಕೀಲ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರಾದ ನಿಘಾತ್​ ದಾದ್​ ಪ್ರತಿಕ್ರಿಯೆ ನೀಡಿ, ಇದೊಂದು ಮಹತ್ವದ ಹೆಜ್ಜೆ. ಪಾಕಿಸ್ತಾನದ ನ್ಯಾಯಾಂಗ ವಿಭಾಗದಲ್ಲಿ ಒಂದು ಇತಿಹಾಸ ಸೃಷ್ಟಿಯಾದಂತೆ ಆಯಿತು ಎಂದು ಹೇಳಿದ್ದಾರೆ.

ಆಯೇಶಾ ಮಲ್ಲಿಕ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು. ಪಾಕಿಸ್ತಾನದ ಪೂರ್ವ ನಗರವಾದ ಲಾಹೋರ್​​ನ ಹೈಕೋರ್ಟ್​ನಲ್ಲಿ ಕಳೆದ 20 ವರ್ಷಗಳಿಂದ ಜಡ್ಜ್​ ಆಗಿದ್ದರು. ಅವರನ್ನು ಸುಪ್ರೀಂಕೋರ್ಟ್​ ಜಡ್ಜ್​ ಆಗಿ ನೇಮಕ ಮಾಡುವುದಕ್ಕೆ ಪಾಕಿಸ್ತಾನ ಅಧ್ಯಕ್ಷ ಆರಿಫ್​ ಅಲ್ವಿ ಜನವರಿ 21ರಂದು ಅನುಮೋದನೆ ನೀಡಿದ್ದರು. ಅದರಂತೆ ಪಾಕಿಸ್ತಾನ ಸುಪ್ರೀಂಕೋರ್ಟ್​ನ ಮೊದಲ ಮಹಿಳಾ ಜಡ್ಜ್​ ಆಗುವ ಹೆಗ್ಗಳಿಕೆ ಆಯೇಶಾರ ಪಾಲಿಗೆ ಸಂದಿದೆ. 2031ರವರೆಗೂ ಅವರು ಸುಪ್ರೀಂಕೋರ್ಟ್​​ನಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಅಷ್ಟೇ ಅಲ್ಲ, 2030ರಲ್ಲಿ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೂ ಸ್ಪರ್ಧಿಸಬಹುದಾದ ಅವಕಾಶ ಇದೆ.

ಆಯೇಶಾ ಮಲ್ಲಿಕ್​ ಅವರು ಹುಟ್ಟಿದ್ದು 1966ರಲ್ಲಿ. ಪ್ಯಾರಿಸ್​, ನ್ಯೂಯಾರ್ಕ್​ ಮತ್ತು ಕರಾಚಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಪಾಕಿಸ್ತಾನದ ಕಾನೂನು ಕಾಲೇಜಿನಲ್ಲಿಯೇ ಅವರು ಲಾ ಓದಿದ್ದಾರೆ. ನಂತರ ಎಲ್​ಎಲ್​ಎಂ ಪದವಿಯನ್ನು ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. ಪಂಜಾಬ್​ ಪ್ರಾಂತ್ಯದ ಕೋರ್ಟ್​​ನಲ್ಲಿದ್ದಾಗ ಇವರು ಪಿತೃಪ್ರಧಾನ ಕಾನೂನು ನೀತಿಗಳನ್ನು ಹಿಂಪಡೆದು ಸಂಚಲನ ಸೃಷ್ಟಿಸಿದ್ದರು.  ಅಷ್ಟೇ ಅಲ್ಲ, ಮಹಿಳೆಯರು ಲೈಂಗಿಕ ಅನುಭವ ಹೊಂದಿದ್ದಾರೆಯೋ ಇಲ್ಲವೋ ಎಂದು ತಿಳಿಯಲು ಬಳಸುವ ವೈದ್ಯಕೀಯ ಪರೀಕ್ಷೆಯನ್ನು ಕಾನೂನುಬಾಹಿರಗೊಳಿಸಿದ್ದರು.

ಪಾಕಿಸ್ತಾನದಲ್ಲಿ ಮಹಿಳೆಯರು ಅತ್ಯಾಚಾರ, ದೌರ್ಜನ್ಯವಾದಾಗ ನ್ಯಾಯ ಪಡೆಯಲು ತುಂಬ ಒದ್ದಾಡುತ್ತಾರೆ. ಅದೆಷ್ಟೋ ಮಹಿಳೆಯರಿಗೆ ಕೊನೆವರೆಗೂ ನ್ಯಾಯ ಸಿಗುವುದಿಲ್ಲ. ಈ ಮಧ್ಯೆ ಆಯೇಶಾ ಮಲ್ಲಿಕ್​ ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನೇಮಕವಾಗಿದ್ದು ನಿಜಕ್ಕೂ ಸಮಾಧಾನ ತಂದಿದೆ.  ಸದ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇದ್ದ ಅಡೆತಡೆಗಳನ್ನು ಇವರು ಮುರಿದಿದ್ದಾರೆ. ಈ ಮೂಲಕ ಇತರರಿಗೂ ಅಲ್ಲಿ ಪ್ರವೇಶಿಸಲು ಸಹಾಯವಾಗುತ್ತದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ವಕೀಲೆ ಖದಿಜಾ ಸಿದ್ದಿಕಿ ತಿಳಿಸಿದ್ದಾರೆ.

ಅಂದಹಾಗೆ, ಇವರ ನೇಮಕಾತಿ ಏನೂ ಸುಲಲಿತವಾಗಿ ಆಗಿದ್ದಲ್ಲ. ಆಯೇಶಾರನ್ನು ಸುಪ್ರೀಂಕೋರ್ಟ್​ಗೆ ನೇಮಕ ಮಾಡಲು ಪಾಕಿಸ್ತಾನ ಬಾರ್ ಕೌನ್ಸಿಲ್​ ವಿರೋಧ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಿತ್ತು. ಅವರಿಗಿಂತ ಹಿರಿಯರಾದ ಅನೇಕ ಪುರುಷ ಜಡ್ಜ್​ಗಳೇ ಇರುವಾಗ, ಅದು ಹೇಗೆ ಆಯೇಶಾರನ್ನು ಸುಪ್ರಿಂಕೋರ್ಟ್​ಗೆ ನೇಮಕ ಮಾಡಲಾಗುತ್ತಿದೆ ಎಂದು ಪ್ರಶ್ನಿಸಲಾಗಿತ್ತು.  ಕಳೆದ ನಾಲ್ಕು ತಿಂಗಳಿಂದ ನಡೆದ ವಿವಾದದ ನಡುವೆಯೇ ಆಯೇಶಾ ನೇಮಕಾತಿ ನಡೆದಿದೆ.

ಇದನ್ನೂ ಓದಿ: ಇಂದು 9 ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಕೇಂದ್ರ ಆರೋಗ್ಯ ಸಚಿವರಿಂದ ಸಭೆ; ಕೊವಿಡ್​ 19 ಪರಿಸ್ಥಿತಿ ಪರಿಶೀಲನೆ

Follow us on

Related Stories

Most Read Stories

Click on your DTH Provider to Add TV9 Kannada