ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು

ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರು ದಾಳಿ ನಡೆಸಿದ್ದು, ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದು BLA ಹೊಸ ಸಾಗರ ಕಾರ್ಯತಂತ್ರದ ಭಾಗವಾಗಿದ್ದು, ಗ್ವಾದರ್ ಬಂದರು ಭದ್ರತೆಗೂ ಅಪಾಯ ಎದುರಾಗಿದೆ. ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಭೂಮಿಯ ಯುದ್ಧ ಈಗ ಸಮುದ್ರಕ್ಕೂ ವ್ಯಾಪಿಸಿದ್ದು, ಪ್ರದೇಶದಲ್ಲಿ ಚೀನಾ ಹೂಡಿಕೆಗೆ ನಡುಕ ಹುಟ್ಟಿಸಿದೆ.

ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು
ಸಾಂದರ್ಭಿಕ ಚಿತ್ರ
Image Credit source: Google Gemini

Updated on: Apr 13, 2026 | 8:22 AM

ಇಸ್ಲಾಮಾಬಾದ್, ಏಪ್ರಿಲ್ 13: ಬಲೂಚಿಸ್ತಾನ(Balochistan)ದ ನೆಲದ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದ್ದ ಬಲೂಚ್ ಪ್ರತ್ಯೇಕತಾವಾದಿಗಳು ಈಗ ತಮ್ಮ ಕಾರ್ಯತಂತ್ರವನ್ನು ಬದಲಿಸಿದ್ದಾರೆ. ಭಾನುವಾರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ (Pakistan Coast Guard) ಗಸ್ತು ದೋಣಿಯ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಇತಿಹಾಸದ ಮೊದಲ ದಾಳಿ ಇದಾಗಿದೆ.

ನಡೆದಿದ್ದೇನು?
ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರೆದ ದಂಗೆಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಭದ್ರತಾ ಸಿಬ್ಬಂದಿಗಳಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಪರಿಣಾಮವಾಗಿ ಮೂವರು ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

‘ಬಿಎಲ್‌ಎ’  ಹೊಣೆ ಮತ್ತು ಹೊಸ ಕಾರ್ಯತಂತ್ರ
ನಿಷೇಧಿತ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಕೇವಲ ಹೊಣೆ ಹೊರುವುದು ಮಾತ್ರವಲ್ಲದೆ, ಪಾಕಿಸ್ತಾನಕ್ಕೆ ಅಪಾಯಕಾರಿ ಎಚ್ಚರಿಕೆಯನ್ನು ನೀಡಿದೆ

ಸಮುದ್ರವೇ ಮುಂದಿನ ರಣರಂಗ

ನಾವು ಇನ್ನು ಮುಂದೆ ಭೂಮಿಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ ಗಡಿಗಳಲ್ಲೂ ದಾಳಿ ನಡೆಸುವುದು ನಮ್ಮ ಹೊಸ ಮಿಲಿಟರಿ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿಎಲ್‌ಎ ಘೋಷಿಸಿದೆ. ಸಮುದ್ರದ ಮಧ್ಯದಲ್ಲಿ ದಾಳಿ ನಡೆಸುವ ಮೂಲಕ ತಾವು ಜಲಮಾರ್ಗದಲ್ಲೂ ಭದ್ರತಾ ಪಡೆಗಳಿಗೆ ಬೆದರಿಕೆ ಒಡ್ಡಬಲ್ಲೆವು ಎಂಬುದನ್ನು ಬಂಡುಕೋರರು ಸಾಬೀತುಪಡಿಸಿದ್ದಾರೆ.

ಮತ್ತಷ್ಟು ಓದಿ: ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್

ಗ್ವಾದರ್ ಬಂದರಿಗೆ ಎದುರಾದ ಭೀತಿ?
ಈ ದಾಳಿಯು ನಡೆದ ಪ್ರದೇಶವು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಚೀನಾದ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ನ ಪ್ರಮುಖ ಭಾಗವಾಗಿರುವ ಗ್ವಾದರ್ ಆಳ ಸಮುದ್ರ ಬಂದರು ಇದೇ ಕರಾವಳಿ ಪಟ್ಟಿಯಲ್ಲಿದೆ. ಕೋಸ್ಟ್ ಗಾರ್ಡ್ ಮೇಲಿನ ದಾಳಿಯು ಈ ಬಂದರು ಮತ್ತು ಇಲ್ಲಿ ನಡೆಯುತ್ತಿರುವ ಚೀನಾ ಮೂಲಸೌಕರ್ಯ ಯೋಜನೆಗಳ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾಬೂಲ್ ಕಡೆಗೆ ಇಸ್ಲಾಮಾಬಾದ್ ಬೆರಳು
ಪಾಕಿಸ್ತಾನ ಸರ್ಕಾರವು ಈ ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದೆ. ಬಲೂಚ್ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಮತ್ತು ಈ ದಾಳಿಗಳನ್ನು ಕಾಬೂಲ್‌ನಿಂದಲೇ ಯೋಜಿಸಲಾಗಿದೆ ಎಂದು ಇಸ್ಲಾಮಾಬಾದ್ ನಂಬುತ್ತದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದೆ.

ಭೂಮಿಯ ಮೇಲಿನ ಯುದ್ಧ ಈಗ ಸಮುದ್ರಕ್ಕೂ ವ್ಯಾಪಿಸಿದೆ. ಬಿಎಲ್‌ಎ ನ ಈ ಹೊಸ ರೂಪ ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಹೂಡಿಕೆ ಮಾಡಿರುವ ಚೀನಾಕ್ಕೂ ನಡುಕ ಹುಟ್ಟಿಸಿದೆ. ಅರಬ್ಬಿ ಸಮುದ್ರದ ಭದ್ರತೆ ಈಗ ಜಾಗತಿಕ ಮಟ್ಟದ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us