ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಅವರು ಗುರುವಾರ ಮಾಲ್ಡೀವ್ಸ್ನಿಂದ (Maldives) ಸಿಂಗಾಪುರಕ್ಕೆ (Singapore) ಪ್ರಯಾಣಿಸಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಿನ್ನಲೆಯಲ್ಲಿ ಜನಾಕ್ರೋಶ ಸಿಡಿದೆದ್ದಾಗ ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿ ಮಾಲ್ಡೀವ್ಸ್ ನಲ್ಲಿ ನೆಲೆಸಿದ್ದರು. ರಾಜಪಕ್ಸ ಅವರು ಮಾಲ್ಡೀವ್ಸ್ ನಿಂದ ಸೌದಿ ಏರ್ ಲೈನ್ ವಿಮಾನ ಎಸ್ ವಿ788ನಲ್ಲಿ ಸಿಂಗಾಪುರಕ್ಕೆ ಹೋಗಿದ್ದಾರೆ. 73ರ ಹರೆಯದ ಗೊಟಬಯ ದೇಶದಿಂದ ಪಲಾಯನ ಮಾಡಿದ ಮೇಲೆ ಬುಧವಾರದಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಸದ್ಯ ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು ಮುಂದಿನ ಅಧ್ಯಕ್ಷರ ಆಯ್ಕೆ ವರೆಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಗೊಟಬಯ ಅವರು ಬುಧವಾರ ಸೌದಿ ಏರ್ ಲೈನ್ಸ್ ವಿಮಾನ ಹತ್ತಿದ್ದು, ಅವರು ಸಿಂಗಾಪುರಕ್ಕೆ ಹೋಗಲಿದ್ದಾರೆ. ಅಲ್ಲಿಂದ ಅವರು ಜೆದ್ದಾ ನಂತರ ಸೌದಿ ಅರೇಬಿಯಾಕ್ಕೆ ಹೋಗಲಿದ್ದಾರೆ ಎಂದು ಹೆಸರು ಹೇಳಲು ಬಯಸದ ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಕೊಲಂಬೊ ಜಿಲ್ಲೆಯೊಳಗೆ ಇಂದು ಮಧ್ಯಾಹ್ನದಿಂದ ನಾಳೆ ಬೆಳಗ್ಗೆ 5 ಗಂಟೆ ವರೆಗೆ ಕರ್ಫ್ಯೂ ವಿಧಿಸಲಾಗಿದೆ ಎಂದು ಸರ್ಕಾರದ ಮಾಹಿತಿ ಇಲಾಖೆ ಹೇಳಿದೆ.
ರಾಜೀನಾಮೆ ನೀಡಿ ಇಲ್ಲವೇ ನಾವು ಬೇರೆ ಆಯ್ಕೆ ಕಂಡುಕೊಳ್ಳುತ್ತೇವೆ: ಸ್ಪೀಕರ್
ಅಧ್ಯಕ್ಷ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದ ಗೊಟಬಯ ರಾಜಪಕ್ಸ ಇನ್ನೂ ರಾಜೀನಾಮೆ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಲಂಕಾ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಆದಷ್ಟು ಬೇಗ ರಾಜೀನಾಮೆ ಸಲ್ಲಿಸಿ ಇಲ್ಲವೇ ನಾವು ನಿಮ್ಮನ್ನು ಹುದ್ದೆಯಿಂದ ಕಿತ್ತು ಹಾಕುವ ಆಯ್ಕೆ ಪರಿಗಣಿಸುತ್ತೇವೆ ಎಂದು ಹೇಳಿರುವುದಾಗಿ ನ್ಯೂಸ್ ಫಸ್ಟ್ ಲಂಕಾ ವರದಿ ಮಾಡಿದೆ.
ಗಲ್ಲೆಯಿಂದ ಚದುರಿದ ಪ್ರತಿಭಟನಾಕಾರರು
ಶ್ರೀಲಂಕಾದ ಗಲ್ಲೆಯಲ್ಲಿರುವ ಪ್ರತಿಭಟನಾಕಾರರು ಪ್ರೆಸಿಡೆನ್ಶಿಯಲ್ ಸೆಕ್ರೆಟರಿಯೇಟ್ , ಅಧ್ಯಕ್ಷರ ನಿವಾಸ ಮತ್ತು ಪ್ರಧಾನಿಯವರ ನಿವಾಸದಿಂದ ಹೊರಹೋಗಲು ನಿರ್ಧರಿಸಿದ್ದಾರೆ
Published On - 12:38 pm, Thu, 14 July 22