ಲಾಹೋರ್: ಹಬ್ಬದ ಸಂಭ್ರಮಾಚರಣೆಗೆ ಊರಿಗೆ ಹೋಗುತ್ತಿದ್ದ 30 ಜನರು ಮಾರ್ಗಮಧ್ಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಈದ್-ಉಲ್-ಅಜಾ ಹಬ್ಬದ ಆಚರಣೆಗೆ ತಮ್ಮ ಊರಿಗೆ ತೆರಳುತ್ತಿದ್ದ ಕಾರ್ಮಿಕರಿದ್ದ ಬಸ್ ಅಪಘಾತಕ್ಕೀಡಾಗಿದ ಪರಿಣಾಮ 30 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಡೇರಾ ಗಾಜಿ ಖಾನ್ ಜಿಲ್ಲೆಯಲ್ಲಿ ಇಂದು ನಡೆದಿದೆ. ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಬಸ್ ಡಿಕ್ಕಿ ಹೊಡೆದ ಕಾರಣದಿಂದ ಈ ದುರಂತ ಸಂಭವಿಸಿದೆ. ಬಸ್ ಅಪಘಾತದಲ್ಲಿ 30 ಜನರು ಸಾವನ್ನಪ್ಪಿದ್ದು, 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದ ಬಸ್ನಲ್ಲಿದ್ದವರಲ್ಲಿ ಬಹುತೇಕರು ಕಾರ್ಮಿಕರು ಎನ್ನಲಾಗಿದೆ. ಸಿಯಾಲ್ಕೋಟ್ನಿಂದ ರಾಜಾನ್ಪುರಕ್ಕೆ ಹೊರಟಿದ್ದ ಬಸ್ ತಾನ್ಸಾ ಬಳಿ ಇರುವ ಇಂಡಸ್ ಹೈವೇಯಲ್ಲಿ ಅಪಘಾತಕ್ಕೀಡಾಗಿದೆ. ಬಸ್ನಲ್ಲಿದ್ದವರು ತಮ್ಮ ಊರಿನಲ್ಲಿ ಈದ್-ಉಲ್-ಅಜಾ ಹಬ್ಬವನ್ನು ಆಚರಿಸಲು ತೆರಳುತ್ತಿದ್ದರು.
ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತಕ್ಕೆ ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಸಂತಾಪ ಸೂಚಿಸಿದ್ದಾರೆ. ಈ ಬಸ್ ಅಪಘಾತದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ರಾಯಭಾರಿ ಮಗಳ ಅಪಹರಣ; ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿ