ಅಫ್ಘಾನಿಸ್ತಾನದ ಸುಮಾರು 20 ಸಾವಿರ ನಿರಾಶ್ರಿತರಿಗೆ ಪುನರ್ವಸತಿ ಘೋಷಿಸಿದ ಕೆನಡಾ

| Updated By: Skanda

Updated on: Aug 14, 2021 | 12:54 PM

ತಾಲಿಬಾನ್ ಜನರನ್ನು ಕೊಳ್ಳೆ ಹೊಡೆಯುತ್ತಿದೆ ಮತ್ತು ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿದೆ ಎಂದು ವರದಿಯಾಗಿದ್ದು, ಭದ್ರತಾ ಪರಿಸ್ಥಿತಿ ಹದಗೆಟ್ಟಂತೆ ಅಫಘಾನ್ ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ.

ಅಫ್ಘಾನಿಸ್ತಾನದ ಸುಮಾರು 20 ಸಾವಿರ ನಿರಾಶ್ರಿತರಿಗೆ ಪುನರ್ವಸತಿ ಘೋಷಿಸಿದ ಕೆನಡಾ
ಸಾಂಕೇತಿಕ ಚಿತ್ರ
Follow us on

ತಾಲಿಬಾನ್​ ವಶಕ್ಕೆ ಸಿಲುಕಿ ನಲುಗಿರುವ ಅಫಘಾನಿಸ್ತಾನದ ಪರಿಸ್ಥಿತಿ ಅತ್ಯಂತ ಯಾತನಾಮಯವಾಗಿದ್ದು, ಅಲ್ಲಿ ನಿರಾಶ್ರಿತರಾದವರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ಆಸರೆ ನೀಡುವುದಾಗಿ ಕೆನಡಾ ದೇಶ ಕೈ ಚಾಚಿದೆ. ಅಫ್ಘಾನಿಸ್ತಾನದಲ್ಲಿ ನಿರಾಶ್ರಿತರಾದ ಸುಮಾರು 20,000 ದುರ್ಬಲರನ್ನು ನೋಡಿಕೊಳ್ಳುವುದಾಗಿ ಕೆನಡಾ ಶುಕ್ರವಾರ ಘೋಷಿಸಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಕೆನಡಾದ ಸಚಿವ ಮಾರ್ಕೊ ಮೆಂಡಿಸಿನೊ, ತಾಲಿಬಾನ್​ನಿಂದ ಕಿರುಕುಳಕ್ಕೆ ಗುರಿಯಾದ ಮಹಿಳಾ ನಾಯಕರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವರದಿಗಾರರಂತಹ ಗುಂಪುಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸುಮಾರು 20,000 ದುರ್ಬಲ ಅಫಘಾನ್ ನಿರಾಶ್ರಿತರನ್ನು ಸ್ವಾಗತಿಸಲು ಕೆನಡಾ ತನ್ನ ವಿಶೇಷ ವಲಸೆ ಕಾರ್ಯಕ್ರಮವನ್ನು ಏರ್ಪಡಿಸಲಿದೆ ಎಂದು ಸಚಿವ ಮೆಂಡಿಸಿನೊ ಹೇಳಿದ್ದು, ನಮ್ಮ ಪ್ರಯತ್ನಗಳು ಮಹಿಳಾ ನಾಯಕರನ್ನು ಒಳಗೊಂಡಂತೆ ವಿಶೇಷವಾಗಿ ದುರ್ಬಲವಾಗಿರುವವರ ಮೇಲೆ ಕೇಂದ್ರೀಕೃತವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದೊಂದು ವಾರದ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತ್ವರಿತವಾಗಿ ಹಿಡಿತ ಸಾಧಿಸಿದ್ದು, 24 ಗಂಟೆಗಳಲ್ಲಿ ಆರು ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡು ಹಾನಿ ಮಾಡಿದೆ. ಸ್ಥಳೀಯ ಮಾಧ್ಯಮಗಳು, ಸುದ್ದಿ ಸಂಸ್ಥೆಗಳ ಪ್ರಕಾರ, ದಂಗೆಕೋರರು ಶುಕ್ರವಾರ ದೇಶದ ಎರಡನೇ ಮತ್ತು ಮೂರನೇ ದೊಡ್ಡ ನಗರಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಪಡೆಗಳ ಪ್ರತಿರೋಧ ತಗ್ಗಿದ ಬೆನ್ನಲ್ಲೇ ಅವರ ಆಟಾಟೋಪ ಹೆಚ್ಚಾಗಿದ್ದು, ಕೆಲವೇ ದಿನಗಳಲ್ಲಿ  ರಾಜಧಾನಿ ಕಾಬೂಲ್ ಮೇಲೆ ಆಕ್ರಮಣ ಮಾಡಬಹುದು ಎಂಬ ಭಯ ನಿರ್ಮಾಣವಾಗಿದೆ.

ದಕ್ಷಿಣದ ಆರ್ಥಿಕ ಕೇಂದ್ರವಾದ ಕಂದಹಾರ್ ಈಗ ತಾಲಿಬಾನ್ ನಿಯಂತ್ರಣದಲ್ಲಿದೆ. ಪಶ್ಚಿಮದಲ್ಲಿ ಹೆರಾತ್ ಕೂಡ ಕಠಿಣ ಇಸ್ಲಾಮಿಸ್ಟ್ ಗುಂಪಿನ ಹಿಡಿತಕ್ಕೆ ಸಿಲುಕಿದೆ ಎಂದು ವರದಿಗಳು ತಿಳಿಸಿವೆ. ತಾಲಿಬಾನ್ ಜನರನ್ನು ಕೊಳ್ಳೆ ಹೊಡೆಯುತ್ತಿದೆ ಮತ್ತು ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿದೆ ಎಂದು ವರದಿಯಾಗಿದ್ದು, ಭದ್ರತಾ ಪರಿಸ್ಥಿತಿ ಹದಗೆಟ್ಟಂತೆ ಅಫಘಾನ್ ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ.

ಕೆನಡಿಯನ್ ಮಿಷನ್ ಗೆ ನಿರ್ಣಾಯಕ ಬೆಂಬಲ ನೀಡಿದ ಅಫ್ಘಾನ್ ಪ್ರಜೆಗಳನ್ನು ಸ್ಥಳಾಂತರಿಸಲು ದೇಶವು ವಿಶೇಷ ಪುನರ್ವಸತಿ ಕಾರ್ಯಾಚರಣೆಗಳನ್ನು ತ್ವರಿತವಾಗಿ ನಡೆಸುತ್ತಿದೆ ಎಂದು ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಸಚಿವರು ಹೇಳಿದರು. ಭಾಷಾಂತರಕಾರರು, ರಾಯಭಾರ ಕಾರ್ಮಿಕರು ಮತ್ತು ಅವರ ಕುಟುಂಬಗಳಂತಹ ಕೆನಡಾದ ಸರ್ಕಾರಕ್ಕಾಗಿ ಕೆಲಸ ಮಾಡಿದ ಸಾವಿರಾರು ಅಫ್ಘಾನಿಸ್ತಾನಗಳನ್ನು ಸ್ವಾಗತಿಸಲು ದೇಶವು ಕೈಗೊಂಡ ಹಿಂದಿನ ಉಪಕ್ರಮಕ್ಕೆ ವಲಸೆ ಕಾರ್ಯಕ್ರಮದ ಇತ್ತೀಚಿನ ವಿಸ್ತರಣೆಯು ಒಂದು ಸೇರ್ಪಡೆಯಾಗಿದೆ.

ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್, ಅಫ್ಘಾನಿಸ್ತಾನದಿಂದ ದುರ್ಬಲ ಸಿಖ್ ಮತ್ತು ಹಿಂದೂ ಕುಟುಂಬಗಳನ್ನು ಪುನರ್ವಸತಿ ಮಾಡಲು ಮನ್ಮೀತ್ ಸಿಂಗ್ ಭುಲ್ಲರ್ ಫೌಂಡೇಶನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದ್ದಾರೆ. ಮುಂದಿನ ಹಲವು ತಿಂಗಳುಗಳಲ್ಲಿ, ಅಲ್ಲಿ ಉಳಿದಿರುವ ನೂರಾರು ಸಿಖ್ಖರು ಮತ್ತು ಹಿಂದೂಗಳನ್ನು ಪುನರ್ವಸತಿ ಮಾಡಲು ಈ ಕಾರ್ಯಕ್ರಮವನ್ನು ವಿಸ್ತರಿಸುತ್ತೇವೆ ಎಂದು ಭರವಸೆಯನ್ನೂ ನೀಡಿದ್ದಾರೆ.

ಸ್ಪೇನ್, ಡೆನ್ಮಾರ್ಕ್, ನಾರ್ವೆ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವು ದೇಶಗಳು ಶುಕ್ರವಾರ ತಮ್ಮ ತಮ್ಮ ರಾಯಭಾರ ಕಚೇರಿಯಿಂದ ಅಫ್ಘಾನಿಸ್ತಾನದಲ್ಲಿರುವ ತಮ್ಮ ರಾಯಭಾರ ಕಚೇರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿವೆ. ಪ್ರತಿ ದಿನವೂ ಕಾಬೂಲ್ ಪತನದ ಸಾಧ್ಯತೆ ಹೆಚ್ಚಾಗುತ್ತಿದ್ದು, ಕೆನಡಾ ದೇಶವು ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದೆ. ಜತೆಗೆ, ಕೆನಡಾದ ರಾಯಭಾರ ಕಚೇರಿ ಹಾಗೂ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ರಕ್ಷಿಸಲು ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

(Canada to-resettle 20000 Afghan refugees amid Taliban attack)

ಇದನ್ನೂ ಓದಿ:
ಅಫ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಸಿ, ಭಾರತವನ್ನು ಹೊಗಳಿದ ತಾಲಿಬಾನ್​.. 

ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!