ಜಸ್ಟಿನ್ ಟ್ರುಡೊರನ್ನು ಮೋದಿ ಪ್ರಶ್ನಿಸಿದ ಬೆನ್ನಲ್ಲೇ ಭಾರತದ ಜತೆಗಿನ ವಹಿವಾಟು ಮುಂದೂಡಿದ ಕೆನಡಾ
ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಕೆನಡಾದೊಂದಿಗಿನ ಮಾತುಕತೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಸಹ ಘೋಷಿಸಿತ್ತು. ರಾಜಕೀಯ ಸಮಸ್ಯೆಗಳ ಪರಿಹಾರದ ನಂತರವೇ ಉಭಯ ದೇಶಗಳ ನಡುವಿನ ಮಾತುಕತೆ ಪುನರಾರಂಭವಾಗಲಿದೆ ಎಂದು ಸರ್ಕಾರ ಹೇಳಿದೆ.
ಒಟ್ಟಾವಾ, ಸೆಪ್ಟೆಂಬರ್ 16: ಖಲಿಸ್ತಾನಿಗಳು ಭಾರತೀಯ ಸಮುದಾಯ ಮತ್ತು ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿರುವ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊರನ್ನು (Justin Trudeau) ಪ್ರಧಾನಿ ನರೇಂದ್ರ ಮೋದಿ (Narendra Modi) ಜಿ20 ಶೃಂಗಸಭೆ ವೇಳೆ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇದೀಗ ಕೆನಡಾ ಸರ್ಕಾರವು ಭಾರತದ ಜತೆಗಿನ ವಹಿವಾಟನ್ನು ಮುಂದೂಡಿಕೆ ಮಾಡಿದೆ. ಕೆನಡಾ ವ್ಯಾಪಾರ ಸಚಿವ ಮೇರಿ ಎನ್‌ಜಿ ಅವರು ಭಾರತದ ಜತೆ ಅಕ್ಟೋಬರ್ನಲ್ಲಿ ಹಮ್ಮಿಕೊಂಡಿದ್ದ ಟ್ರೇಡ್ ಮಿಷನ್ ಅನ್ನು ಮುಂದೂಡಿದ್ದಾರೆ.
ಮೇರಿ ಎನ್‌ಜಿಯ ವಕ್ತಾರರು ಈ ಕುರಿತು ಮಾಹಿತಿ ನೀಡಿದ್ದು, ನಾವು ಭಾರತದ ಜತೆಗಿನ ವ್ಯಾಪಾರ ಕಾರ್ಯಾಚರಣೆಯನ್ನು ಮುಂದೂಡುತ್ತಿದ್ದೇವೆ ಎಂದು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಅಥವಾ ಕಾರಣವನ್ನು ಅವರು ನೀಡಿಲ್ಲ.
ಭಾರತ, ಕೆನಡಾ ನಡುವಿನ ಮಾತುಕತೆ ಮುಂದೂಡಿಕೆ ಏಕೆ?
ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಕೆನಡಾದೊಂದಿಗಿನ ಮಾತುಕತೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿತು. ರಾಜಕೀಯ ಸಮಸ್ಯೆಗಳ ಪರಿಹಾರದ ನಂತರವೇ ಉಭಯ ದೇಶಗಳ ನಡುವಿನ ಮಾತುಕತೆ ಪುನರಾರಂಭವಾಗಲಿದೆ ಎಂದು ಸರ್ಕಾರ ಹೇಳಿದೆ.
ಈ ತಿಂಗಳ ಆರಂಭದಲ್ಲಿ, ಕೆನಡಾ ಸಹ ಇದೇ ರೀತಿಯ ಪ್ರಕಟಣೆಯನ್ನು ಹೊರಡಿಸಿತ್ತು. ಈ ವರ್ಷಾಂತ್ಯದೊಳಗೆ ವ್ಯಾಪಾರ ಒಪ್ಪಂದಕ್ಕೆ ಮುದ್ರೆ ಹಾಕುವ ಇಚ್ಛೆಯನ್ನು ಉಭಯ ದೇಶಗಳು ಸುಮಾರು ನಾಲ್ಕು ತಿಂಗಳ ಹಿಂದೆಯೇ ವ್ಯಕ್ತಪಡಿಸಿದ್ದವು ಎಂಬುದು ಇಲ್ಲಿ ಉಲ್ಲೇಖಾರ್ಹ.
ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದನ್ನು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಸ್ಟಿನ್ ಟ್ರುಡೋ ಭೇಟಿಯಾಗಿದ್ದನ್ನು ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಟೀಕಿಸಿದ್ದರು. ಕೆನಡಾದ ಯಾವೊಬ್ಬ ವ್ಯಕ್ತಿಯು ತಮ್ಮ ದೇಶದ ಪ್ರಧಾನ ಮಂತ್ರಿಯ ಇಂತಹ ನಡವಳಿಕೆಗಳನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಪಿಯರೆ ಪೊಯ್ಲಿವ್ರೆ ಟೀಕಿಸಿದ್ದರು. ಪ್ರಧಾನಿಯೊಬ್ಬರು ಪದೇ ಪದೇ ಅವಮಾನಕ್ಕೊಳಗಾಗುವುದನ್ನು ಮತ್ತು ತುಳಿದುಕೊಳ್ಳುವುದನ್ನು ನೋಡಲು ಯಾರು ಇಷ್ಟಪಡುವುದಿಲ್ಲಎಂದು ಪೋಯ್ಲಿವ್ರೆ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ