ಆಕಾಶದಿಂದ ಬಿತ್ತಾ ಟೈರ್? ‘ಫೈನಲ್ ಡೆಸ್ಟಿನೇಷನ್’ ಸಿನಿಮಾವನ್ನೇ ನೆನಪಿಸಿದ ಘಟನೆ: ಯುವಕನಿಗೆ ಡಿಕ್ಕಿ ಹೊಡೆದ ಟೈರ್

ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಎಲ್ಲಿಂದಲೋ ಹಾರಿ ಬಂದ ಟೈರ್ ಡಿಕ್ಕಿ ಹೊಡೆದ ಭಯಾನಕ ಘಟನೆ ವಿಡಿಯೋ ವೈರಲ್ ಆಗಿದೆ. 'ಫೈನಲ್ ಡೆಸ್ಟಿನೇಷನ್' ಸಿನಿಮಾವನ್ನು ನೆನಪಿಸುವ ಈ ಅನಿರೀಕ್ಷಿತ ಅಪಘಾತದಲ್ಲಿ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಟೈರ್ ಬಂದ ಮೂಲ ಇನ್ನೂ ನಿಗೂಢವಾಗಿದ್ದು, ಈ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಆಕಾಶದಿಂದ ಬಿತ್ತಾ ಟೈರ್? ಫೈನಲ್ ಡೆಸ್ಟಿನೇಷನ್ ಸಿನಿಮಾವನ್ನೇ ನೆನಪಿಸಿದ ಘಟನೆ: ಯುವಕನಿಗೆ ಡಿಕ್ಕಿ  ಹೊಡೆದ ಟೈರ್
ಅಪಘಾತ

Updated on: Nov 06, 2026 | 10:48 AM

ಚಿಲಿ, ನವೆಂಬರ್ 06:ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಮೇಲೆ ನಮ್ಮ ಗಮನ ಇರುತ್ತದೆ. ಆದರೆ ಕೆಲವೊಮ್ಮೆ ನಾವು ಊಹಿಸದ ಕಡೆಯಿಂದಲೂ ಅಪಾಯ ಎದುರಾಗಬಹುದು. ಚಿಲಿಯ ಸ್ಯಾಂಟಿಯಾಗೊದಲ್ಲಿ ಇಂತಹದ್ದೇ ವಿಚಿತ್ರ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 19 ವರ್ಷದ ಯುವಕನಿಗೆ ಏಕಾಏಕಿ ಹಾರಿಬಂದ ಟೈರ್ ಡಿಕ್ಕಿ ಹೊಡೆದಿದೆ. ಟೈರ್ ಬಡಿದ ರಭಸಕ್ಕೆ ಯುವಕ ನೆಲಕ್ಕೆ ಬಿದ್ದಿದ್ದಾನೆ. ಈ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಲಿಯ ಸ್ಯಾಂಟಿಯಾಗೊ ನಗರದ ಲಾಸ್ ಲಿಯೋನ್ಸ್ ಅವೆನ್ಯೂನಲ್ಲಿ ಅಕ್ಟೋಬರ್ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. 19 ವರ್ಷದ ಯುವಕನೊಬ್ಬ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ರಸ್ತೆಯ ಕಡೆಯಿಂದ ವೇಗವಾಗಿ ಬಂದ ಟೈರ್ ಪಾದಚಾರಿ ಮಾರ್ಗಕ್ಕೆ ಹಾರಿ ಯುವಕನಿಗೆ ಡಿಕ್ಕಿ ಹೊಡೆದಿದೆ.

Loading...

ಟೈರ್ ಬಡಿದ ರಭಸಕ್ಕೆ ಯುವಕ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣವೇ ಸುತ್ತಮುತ್ತಲಿದ್ದವರು ಆತನ ನೆರವಿಗೆ ಧಾವಿಸಿದ್ದಾರೆ. ವರದಿಗಳ ಪ್ರಕಾರ, ಯುವಕನ ಹಣೆಯ ಮತ್ತು ಎದೆಯ ಭಾಗಕ್ಕೆ ಗಾಯಗಳಾಗಿದ್ದು, ಅದೃಷ್ಟವಶಾತ್ ಗಂಭೀರ ಅಪಾಯದಿಂದ ಪಾರಾಗಿದ್ದಾನೆ. ಟೈರ್ ಎಲ್ಲಿಂದ ಬಂತು? ಯಾವುದಾದರೂ ವಾಹನದಿಂದ ಕಳಚಿಕೊಂಡು ಬಂದಿತೇ? ಅಥವಾ ಬೇರೆ ಕಾರಣದಿಂದ ಹಾರಿಬಂದಿತೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:

ನ್ಯಾಯಾಧೀಶರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿ, ವ್ಯಕ್ತಿ ಸಾವು: ವಶಕ್ಕೆ ಪಡೆದು ಕೆಲವೇ ಗಂಟೆಯಲ್ಲಿ ಜಾಮೀನು

‘ಫೈನಲ್ ಡೆಸ್ಟಿನೇಷನ್’ ಸಿನಿಮಾ ನೆನಪಿಸಿದ ಘಟನೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದನ್ನು ಹಾರರ್ ಸಿನಿಮಾ ‘ಫೈನಲ್ ಡೆಸ್ಟಿನೇಷನ್’ ದೃಶ್ಯಕ್ಕೆ ಹೋಲಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಅನಿರೀಕ್ಷಿತ ಘಟನೆಗಳ ಮೂಲಕ ಅಪಘಾತಗಳು ಸಂಭವಿಸುವ ದೃಶ್ಯಗಳಿವೆ. ಅದೇ ರೀತಿ ಇಲ್ಲಿ ಕೂಡ ಯುವಕನಿಗೆ ಎಲ್ಲಿಂದಲೋ ಟೈರ್ ಬಂದು ಡಿಕ್ಕಿ ಹೊಡೆದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಕೆಲವರು ಯುವಕನ ಅದೃಷ್ಟದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನು ಕೆಲವರು ಟೈರ್ ಇಷ್ಟು ನಿಖರವಾಗಿ ಆತನಿಗೇ ಹೇಗೆ ಬಂದು ಡಿಕ್ಕಿ ಹೊಡೆಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ, ರಸ್ತೆಯಿಂದ ದೂರ ನಡೆಯುತ್ತಿದ್ದರೂ ಇಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us