ಕಿಮ್, ಪುಟಿನ್ ಜೊತೆ ಜಿನ್​ಪಿಂಗ್; ಚೀನಾದಲ್ಲಿ ಬೃಹತ್ ಮಿಲಿಟರಿ ಪೆರೇಡ್; ಪಾಶ್ಚಿಮಾತ್ಯ ಶಕ್ತಿಗೆ ಖಡಕ್ ಸಂದೇಶ

China's massive military parade: ಬೀಜಿಂಗ್​ನಲ್ಲಿ ಬೃಹತ್ ಮಿಲಿಟರಿ ಪೆರೇಡ್ ನಡೆದಿದೆ. ಇದರಲ್ಲಿ 20 ದೇಶಗಳ ಮುಖಂಡರು ಪಾಲ್ಗೊಂಡಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಮತ್ತು ಷಿ ಜಿನ್​ಪಿಂಗ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಮಿಲಿಟರಿ ಪೆರೇಡ್ ಅನ್ನು ಕಿಚಾಯಿಸಿದ್ದಾರೆ.

ಕಿಮ್, ಪುಟಿನ್ ಜೊತೆ ಜಿನ್​ಪಿಂಗ್; ಚೀನಾದಲ್ಲಿ ಬೃಹತ್ ಮಿಲಿಟರಿ ಪೆರೇಡ್; ಪಾಶ್ಚಿಮಾತ್ಯ ಶಕ್ತಿಗೆ ಖಡಕ್ ಸಂದೇಶ
ಪುಟಿನ್, ಜಿನ್​ಪಿಂಗ್, ಕಿಮ್

Updated on: Sep 03, 2025 | 11:47 AM

ಬೀಜಿಂಗ್, ಸೆಪ್ಟೆಂಬರ್ 3: ಚೀನಾದ ದೇಶದ ರಾಜಧಾನಿ ಬೀಜಿಂಗ್​ನ ಟಿಯಾನ್ಮೆನ್ ಸ್ಕ್ವಯರ್​ನಲ್ಲಿ ಬೃಹತ್ ಮಿಲಿಟರಿ ಪೆರೇಡ್ ನಡೆದಿದೆ. ಇದು ಚೀನಾದಲ್ಲಿ (China) ಇದೂವರೆಗೂ ನಡೆದಿರುವ ಮಿಲಿಟರಿ ಪೆರೇಡ್​ಗಳಲ್ಲಿ ಇದು ಅತಿದೊಡ್ಡದು. ಜಪಾನ್ ದೇಶ ಎರಡನೇ ವಿಶ್ವ ಮಹಾಯುದ್ಧದಲ್ಲಿ ಸೋತು 80 ವರ್ಷವಾದ ಸಂದರ್ಭ. ಆ ಸೋಲನ್ನು ಆಚರಿಸಲು ಈ ಮಿಲಿಟರಿ ಪೆರೇಡ್ ನಡೆಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಪೆರೇಡ್​ನಲ್ಲಿ ಚೀನಾ ಮುಖ್ಯಸ್ಥ ಷಿ ಜಿನ್​ಪಿಂಗ್ ಜೊತೆ ರಷ್ಯಾ ಹಾಗೂ ಉತ್ತರ ಕೊರಿಯಾದ ಮುಖಂಡರೂ ಪಾಲ್ಗೊಂಡಿದ್ದರು. ಷಿ ಜಿನ್​ಪಿಂಗ್, ವ್ಲಾದಿಮಿರ್ ಪುಟಿನ್ ಮತ್ತು ಕಿಮ್ ಜೋಂಗ್ ಉನ್ ಅವರು ಮೂವರು ಒಂದೇ ಕಡೆ ಕಾಣಿಸಿಕೊಂಡಿದ್ದು ಇದೇ ಮೊದಲು.

ಈ ಬೃಹತ್ ಮಿಲಿಟರಿ ಪೆರೇಡ್ ಅನ್ನು ಕಣ್ತುಂಬಿಕೊಳ್ಳಲು 50,000ಕ್ಕೂ ಅಧಿಕ ಜನರು ಸೇರಿದ್ದರು. ಚೀನಾದ ಕಮ್ಯೂನಿಸ್ಟ್ ಮೇರು ಮುಖಂಡರೆನಿಸಿದ್ದ ಮಾವೋ ಜೆಡಾಂಗ್ ಅವರು ಧರಿಸುತ್ತಿದ್ದ ಶೈಲಿಯ ಉಡುಗೆಯನ್ನು ಷಿ ಜಿನ್​ಪಿಂಗ್ ತೊಟ್ಟು ಬಂದಿದ್ದರು.

ಶಾಂತಿ ಮತ್ತು ಯುದ್ಧದ ಆಯ್ಕೆ: ಷಿ ಜಿನ್​ಪಿಂಗ್

‘ಇವತ್ತು ಮಾನವಕುಲ ಎರಡು ಆಯ್ಕೆಗಳನ್ನು ಎದುರಿಸುತ್ತಿದೆ. ಶಾಂತಿಯಾ ಅಥವಾ ಯುದ್ಧವಾ? ಮಾತುಕತೆಯಾ ಅಥವಾ ಸಂಘರ್ಷವಾ? ಎಲ್ಲರಿಗೂ ಗೆಲುವಾ ಅಥವಾ ಎಲ್ಲರಿಗೂ ಸೋಲಾ? ಚೀನೀ ಜನರು ಇತಿಹಾಸದ ಸರಿಯಾದ ಕಡೆ ಇದ್ದಾರೆ’ ಎಂದು ಚೀನಾ ಅಧ್ಯಕ್ಷರು ಹೇಳಿದರು.

ಇದನ್ನೂ ಓದಿ: ವಿಶ್ವಕ್ಕೆ ಫ್ಯಾಕ್ಟರಿಯಾಗಲು ಭಾರತಕ್ಕೆ ಅಪೂರ್ವ ಅವಕಾಶ; ಆದರೆ, ಚೀನಾ ವಿಚಾರದಲ್ಲಿ ಈ ತಪ್ಪು ಬೇಡ ಎಂದ ಜಾನ್ಸನ್

ಪೆರೇಡ್​ನಲ್ಲಿ 20 ಮುಖಂಡರು ಭಾಗಿ

ಈ ಮಿಲಿಟರಿ ಪೆರೇಡ್​ನಲ್ಲಿ ವಿವಿಧ ದೇಶಗಳ 20 ಮುಖಂಡರು ಭಾಗವಹಿಸಿದ್ದರು. ಎಸ್​ಸಿಒ ಸಮಿಟ್​ಗೆ ಚೀನಾಗೆ ಹೋಗಿದ್ದ ನರೇಂದ್ರ ಮೋದಿ ಅವರು ಮೊನ್ನೆಯೇ ಮರಳಿ ಬಂದಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್​ಕಿಯಾನ್, ಮಯನ್ಮಾರ್ ಮಿಲಿಟರಿ ಮುಖ್ಯಸ್ಥ ಮಿನ್ ಔಂಗ್ ಹಲೇಂಗ್, ಇಂಡೋನೇಷ್ಯಾ ಅಧ್ಯಕ್ಷ, ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಮೊದಲಾದವರು ಚೀನಾದ ಮಿಲಿಟರಿ ಪೆರೇಡ್​ನಲ್ಲಿ ಪಾಲ್ಗೊಂಡಿದ್ದರು. ಇದು ಅಮೆರಿಕ ನೇತೃತ್ವದ ಪಾಶ್ಚಿಮಾತ್ಯದ ದೇಶಗಳ ಶಕ್ತಿಗೆ ಪ್ರತಿಯಾಗಿ ಹೊಸ ಶಕ್ತಿ ರೂಪುಗೊಂಡಿದೆ ಎನ್ನುವ ಸಂದೇಶವು ಇಡೀ ಜಗತ್ತಿಗೆ ಸಾರಿದಂತಿತ್ತು. ಅದರಲ್ಲೂ ಉತ್ತರ ಕೊರಿಯಾಗೆ ಈ ಸಂದರ್ಭ ಬಹಳ ಮಹತ್ವದ್ದೆನಿಸಿದೆ.

ಕಿಮ್ ಜೋಂಗ್ ಉನ್ ಜೊತೆ ಮಗಳು

ಮತ್ತೊಂದು ಕುತೂಹಲ ಸಂಗತಿ ಎಂದರೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಜೊತೆ ಆತನ ಮಗಳಾದ ಜು ಏ ಅವರು ಆಗಮಿಸಿದ್ದರು. ಸೌತ್ ಕೊರಿಯಾದ ಗುಪ್ತಚರ ಮಾಹಿತಿ ಪ್ರಕಾರ ಕಿಮ್ ಜೋಂಗ್ ಅವರ ನಂತರ ಉತ್ತರ ಕೊರಿಯಾದ ಅಧಿಕಾರವು ಆತನ ಮಗಳಿಗೆ ವರ್ಗವಾಗುತ್ತದೆ. ಇದನ್ನು ಜಗತ್ತಿಗೆ ತೋರ್ಪಡಿಸುವ ಉತ್ತರಕೊರಿಯಾಗೆ ಇದ್ದಂತಿತ್ತು.

ಚೀನಾ ಮತ್ತು ರಷ್ಯಾ ಜೊತೆ ಆಪ್ತವಾಗಿರುವ ಪಾಕಿಸ್ತಾನ, ಟರ್ಕಿ, ಸರ್ಬಿಯಾ, ಸ್ಲೊವಾಕಿಯಾ ಮೊದಲಾದ ದೇಶಗಳ ಮುಖಂಡರು ಈ ಪೆರೇಡ್​ನಲ್ಲಿ ಪಾಲ್ಗೊಳ್ಳದೇ ಇದ್ದದ್ದು ಕುತೂಹಲ ಮೂಡಿಸಿತು.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಕಾರಿನಲ್ಲಿ ಹೋಗಲು 10 ನಿಮಿಷ ಕಾದ ಪುಟಿನ್; ಟ್ರೆಂಡ್ ಆಯ್ತು ಫೋಟೋ

ಕಿಚಾಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇತ್ತ ಚೀನಾದಲ್ಲಿ ಬೃಹತ್ ಮಿಲಿಟರಿ ಪೆರೇಡ್ ನಡೆಯುತ್ತಿರುವ ನಡುವೆ, ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚೀನಾವನ್ನು ಕಿಚಾಯಿಸುವ ಪ್ರಯತ್ನ ಮಾಡಿದರು. ಜಪಾನ್​ನಿಂದ ಚೀನಾಗೆ ಸ್ವಾತಂತ್ರ್ಯ ಸಿಗಲು ಅಮೆರಿಕ ಹೇಗೆ ಸಹಾಯ ಮಾಡಿತು ಎಂಬುದನ್ನು ಟ್ರಂಪ್ ನೆನಪಿಸಿದ್ದಾರೆ.

‘ಅಮೆರಿಕ ವಿರುದ್ಧ ಚಿತಾವಣಿ ಮಾಡುತ್ತಿರುವ ನೀವು ವ್ಲಾದಿಮಿರ್ ಪುಟಿನ್ ಮತ್ತು ಕಿಮ್ ಜೋಂಗ್ ಉನ್​ಗೆ ಶುಭಾಶಯ ತಿಳಿಸಿ’ ಎಂದು ಹೇಳಿದ ಟ್ರಂಪ್, ಈ ಮಿಲಿಟರಿ ಪೆರೇಡ್ ಅನ್ನು ಅಮೆರಿಕಕ್ಕೆ ಒಡ್ಡಿದ ಸವಾಲೆಂದು ತಾನು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ