
ನವದೆಹಲಿ, ಜನವರಿ 3: ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದನಾ ಸಂಘಟನೆಗಳು ಇದೀ ಜಗತ್ತಿಗೆ ಆತಂಕ ತಂದೊಡ್ಡುತ್ತಿವೆ ಎಂಬುದು ಎಲ್ಲ ದೇಶಗಳಿಗೂ ತಿಳಿದಿರುವ ವಿಚಾರ. ಇದೇ ಕಾರಣದಿಂದ ಹಲವು ದೇಶಗಳು ‘ದುಷ್ಟರಿಂದ ದೂರವಿರು’ ಎಂಬ ಗಾದೆಯನ್ನು ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನದಿಂದ ಅಂತರ ಕಾಯ್ದುಕೊಂಡಿವೆ. ಆದರೆ, ಚೀನಾ, ನೇಪಾಳ, ಬಾಂಗ್ಲಾದೇಶದಂತಹ ಕೆಲವು ದೇಶಗಳು ಪಾಕಿಸ್ತಾನದ (Pakistan) ಜೊತೆ ಬಹಳ ಆತ್ಮೀಯ ಸಂಬಂಧ ಹೊಂದಿವೆ. ಅಮೆರಿಕ ಅತ್ತ ಪಾಕಿಸ್ತಾನದ ಕಡೆಗೂ ಮೋಹವಿಟ್ಟುಕೊಂಡು ಇತ್ತ ಮೋದಿಯನ್ನೂ ಸಂಪೂರ್ಣವಾಗಿ ಎದುರು ಹಾಕಿಕೊಳ್ಳಲಾಗದೆ ಡಬಲ್ ಗೇಮ್ ಆಡುತ್ತಿದೆ.
ಒಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ಎಂದು ಅವಕಾಶ ಸಿಕ್ಕಾಗಲೆಲ್ಲ ಡಂಗುರ ಸಾರಿಕೊಳ್ಳುತ್ತಲೇ ಇದ್ದಾರೆ. ಇದು ಸುಳ್ಳು ಎಂದು ಭಾರತಕ್ಕೂ ಸ್ಪಷ್ಟನೆ ನೀಡಿ ಸಾಕಾಗಿದೆ. ಇನ್ನೊಂದೆಡೆ ಇದೀಗ ಚೀನಾ ಕೂಡ ತಾನೇ ಈ ಯುದ್ಧ ನಿಲ್ಲಿಸಿದ್ದು ಎಂದು ಹೇಳುತ್ತಿದೆ. ಇದಕ್ಕೆ ಪಾಕಿಸ್ತಾನವೂ ಕೋರಸ್ ನೀಡುತ್ತಿರುವುದು ವಿಪರ್ಯಾಸ!
ಇದನ್ನೂ ಓದಿ: ಪಾಕ್-ಭಾರತ ನಡುವಿನ ಯುದ್ಧ ಕೊನೆಗೊಳಿಸಿದ್ದು ನಾವೇ, ಟ್ರಂಪ್ ಬಳಿಕ ಚೀನಾದ ಅಚ್ಚರಿಯ ಹೇಳಿಕೆ
ಮೇ 6-10ರವರೆಗೆ ಚೀನಾ ಭಾರತದೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ಪಾಕಿಸ್ತಾನದ ಜೊತೆಗಿನ ಯುದ್ಧ ನಿಲ್ಲಿಸಲು ಚೀನಾ ಮಧ್ಯಸ್ಥಿಕೆ ವಹಿಸಿತ್ತು ಎಂದು ಆಪರೇಷನ್ ಸಿಂಧೂರ್ ದಾಳಿಯ ಕುರಿತು ಚೀನಾ ಹೇಳಿಕೆ ನೀಡಿತ್ತು. ಆ ಹೇಳಿಕೆಗೆ ಪಾಕಿಸ್ತಾನ ಬೆಂಬಲ ನೀಡಿದೆ.
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ, “ಮೇ 6ರಿಂದ ಮೇ 10ರವರೆಗಿನ ಆ 3-4 ದಿನಗಳಲ್ಲಿ ಚೀನಾದ ನಾಯಕರು ಪಾಕಿಸ್ತಾನದ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ಭಾರತೀಯ ನಾಯಕರೊಂದಿಗೂ ಸಂಪರ್ಕ ಹೊಂದಿದ್ದರು” ಎಂದು ಹೇಳಿದ್ದಾರೆ. ಈ ರಾಜತಾಂತ್ರಿಕ ಸಂಪರ್ಕಗಳು ಫಲಪ್ರದವಾಗಿತ್ತು. ನಮ್ಮೆರಡು ದೇಶಗಳಲ್ಲಿ ಶಾಂತಿ ಮತ್ತು ಭದ್ರತೆಯನ್ನು ತರಲು ಚೀನಾದ ಈ ರಾಜತಾಂತ್ರಿಕತೆ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲಿನ ದಾಳಿ ಬಗ್ಗೆ ಪಾಕಿಸ್ತಾನದ ಹೇಳಿಕೆಗೆ ಭಾರತ ತಿರುಗೇಟು
ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆಯಲ್ಲಿ ಚೀನಾದ ಪಾಲ್ಗೊಳ್ಳುವಿಕೆಯನ್ನು ಪಾಕಿಸ್ತಾನ ಇಷ್ಟು ತಡವಾಗಿ ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸಿದೆ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ, ಇಲ್ಲಿಯವರೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ಚೀನಾ ವಿಶೇಷವಾಗಿ ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಪ್ರಶಂಸಿಸಿತ್ತು. ಇದೀಗ ಚೀನಾ ತಾನೇ ಈ ಕದನವಿರಾಮಕ್ಕೆ ಕಾರಣ ಎಂದು ಬಿಂಬಿಸಿಕೊಳ್ಳುತ್ತಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ 26 ಜನರು ಸಾವನ್ನಪ್ಪಿದರು, ಅದರಲ್ಲಿ 25 ಭಾರತೀಯರು. ಪ್ರವಾಸಿಗರ ಮೇಲಿನ ದಾಳಿಯ ನಂತರ, ಆ ದಾಳಿಗೆ ಕಾರಣರಾದ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಹೊರಹಾಕಲು ಭಾರತ ಆಪರೇಷನ್ ಸಿಂಧೂರ್ ಅನ್ನು ಘೋಷಿಸಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ