ಅಲ್ಪಸಂಖ್ಯಾತರ ಮೇಲಿನ ದಾಳಿ ಬಗ್ಗೆ ಪಾಕಿಸ್ತಾನದ ಹೇಳಿಕೆಗೆ ಭಾರತ ತಿರುಗೇಟು
ಅಲ್ಪಸಂಖ್ಯಾತರ ಮೇಲಿನ ದಾಳಿಯ ಕುರಿತು ಪಾಕಿಸ್ತಾನದ ಹೇಳಿಕೆಗಳಿಗೆ ಭಾರತ ಪ್ರತಿಕ್ರಿಯಿಸಿದೆ. ಸಾಂಪ್ರದಾಯಿಕವಾಗಿ ಹೆಚ್ಚು ಸಹಿಷ್ಣುತೆಯನ್ನು ಹೊಂದಿರುವ ಕೇರಳ ರಾಜ್ಯದಲ್ಲಿಯೂ ಸಹ ಕ್ಯಾರೋಲ್‌ಗಳನ್ನು ಹಾಡುವ ಹದಿಹರೆಯದವರ ಗುಂಪಿನ ಮೇಲೆ ದಾಳಿ ಮಾಡಿ ಅವರ ವಾದ್ಯಗಳನ್ನು ನಾಶಪಡಿಸಿದ ನಂತರ ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಯಿತು. ಇದೆಲ್ಲವನ್ನೂ ಆಧಾರವಾಗಿಟ್ಟುಕೊಂಡು ಆರೋಪ ಮಾಡಿದ್ದ ಪಾಕಿಸ್ತಾನ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆ ಎಂದು ಹೇಳಿತ್ತು.

ನವದೆಹಲಿ, ಡಿಸೆಂಬರ್ 29: ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಪಾಕಿಸ್ತಾನದ (Pakistan) ವಿದೇಶಾಂಗ ಸಚಿವಾಲಯದ ವಕ್ತಾರರು ನೀಡಿದ ಹೇಳಿಕೆಗಳನ್ನು ವಿದೇಶಾಂಗ ಸಚಿವಾಲಯ (MEA) ತಿರಸ್ಕರಿಸಿದೆ. ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕೃತ್ಯಗಳೇ ಎಲ್ಲ ಹೇಳುತ್ತವೆ. ನಮ್ಮ ದೇಶದಲ್ಲಿ ಆ ರೀತಿಯ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಅವರ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ MEA ವಕ್ತಾರ ರಣಧೀರ್ ಜೈಸ್ವಾಲ್, ಭಾರತ ಅಂತಹ ಹೇಳಿಕೆಗಳನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಲೇ ಬಂದಿರುವ ದೇಶದಿಂದ ಈ ಹೇಳಿಕೆ ಬಂದಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ಮಾರ್ಗದ ಮೂಲಕ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಪ್ಲಾನ್
“ಈ ವಿಷಯದಲ್ಲಿ ಕಳಪೆ ದಾಖಲೆಯನ್ನು ಹೊಂದಿರುವ ದೇಶದ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ” ಎಂದು ಜೈಸ್ವಾಲ್ ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪಾಕಿಸ್ತಾನದ ಆಂತರಿಕ ಸಮಸ್ಯೆಗಳ ನಡುವೆ ನಮ್ಮ ದೇಶದ ಕಡೆ ಬೆರಳು ತೋರಿಸುವ ಪ್ರಯತ್ನಗಳ ಕಡೆಗೆ ನಾವು ಗಮನವನ್ನು ನೀಡುವುದಿಲ್ಲ. ತಮ್ಮ ದೇಶದ ಮೇಲಿನ ಆರೋಪವನ್ನು ನಮ್ಮೆಡೆಗೆ ತಿರುಗಿಸುವ ಉಪಾಯವಿದು” ಎಂದು ಜೈಸ್ವಾಲ್ ಟೀಕಿಸಿದ್ದಾರೆ.
Our response to media queries regarding remarks of the Spokesperson of the Pakistani Ministry of Foreign Affairs on incidents in India ⬇️
🔗 https://t.co/xMhlbQZYqc pic.twitter.com/WU09obKsbj
— Randhir Jaiswal (@MEAIndia) December 29, 2025
ಕ್ರಿಸ್‌ಮಸ್ ಆಚರಣೆಯ ಸಮಯದಲ್ಲಿ ನಡೆದ ದಾಳಿಗಳು ಮತ್ತು ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರವನ್ನು ಗಮನಿಸುವಂತೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ ನಂತರ ಭಾರತ ಈ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಇತ್ತೀಚಿನ ಘಟನೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಹಿರ್ ಅಂದ್ರಾಬಿ ಈ ಹೇಳಿಕೆ ನೀಡಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತೀವ್ರ ಕಳವಳಕಾರಿ ಎಂದು ಅಂದ್ರಾಬಿ ಬಣ್ಣಿಸಿದ್ದರು.
ಇದನ್ನೂ ಓದಿ: ಪಹಲ್ಗಾಮ್ ದಾಳಿಯ ತನಿಖೆ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ; ಅಮಿತ್ ಶಾ
ಪಾಕಿಸ್ತಾನವು ಇತರ ದೇಶಗಳ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ಅಲ್ಪಸಂಖ್ಯಾತರ ಬಗ್ಗೆ ತನ್ನದೇ ಆದ ಮಾನವ ಹಕ್ಕುಗಳ ದಾಖಲೆಯನ್ನು ಸರಿಪಡಿಸುವತ್ತ ಗಮನಹರಿಸಬೇಕು ಎಂದು ಭಾರತ ಪದೇ ಪದೇ ಒತ್ತಿ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




