ಕೊರೊನಾ ಹುಟ್ಟಿದ್ದು ಭಾರತದದಲ್ಲಿಯೇ ಅಂತೆ.. ಚೀನಾ ಸಂಶೋಧಕರ ಹೊಸ ವಾದ!
ಚೀನಾದ ವಾದದಂತೆ ಕೊರೊನಾ ವೈರಸ್ ಭಾರತದಲ್ಲಿ ಹುಟ್ಟಿ, ಪ್ರಾಣಿಗಳಿಂದ ಮನುಷ್ಯರಿಗೆ ಹರಡಿ, ಬಳಿಕ ವುಹಾನ್ ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆಯಂತೆ. ಭಾರತವು ಕೊರೊನಾ ಮೂಲ ಎಂಬುದು ಇದೀಗ ಚೀನಾದ ದೂಷಣೆಯಾಗಿದೆ.
ಕೊರೊನಾ ಕಾಲಿಟ್ಟು ವರ್ಷವೇ ಕಳೆಯುತ್ತಾ ಬಂತು. ಚೀನಾದ ವುಹಾನ್ ನಗರದಲ್ಲಿ 2019ರ ಡಿಸೆಂಬರ್ನಲ್ಲಿ ಕೊರೊನಾ ಮೊದಲು ಕಾಣಿಸಿಕೊಂಡಿತ್ತು. ಇದೀಗ ಒಂದು ಮಿಲಿಯನ್ಗೂ ಅಧಿಕ ಮಂದಿಯನ್ನು ಬಲಿ ಪಡೆದುಕೊಂಡಿರುವ ಕೊವಿಡ್ನ ಮೂಲ ಮಾತ್ರ ಯಾವುದೆಂದು ಇನ್ನೂ ತಿಳಿದುಬಂದಿಲ್ಲ. ಆ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಈ ನಡುವೆ, ಕೊರೊನಾ ವೈರಸ್ ಭಾರತದಲ್ಲಿ ಹುಟ್ಟಿದ್ದು ಎಂದು ಚೀನಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. 2019ರ ಬಿರು ಬೇಸಿಗೆಯಲ್ಲಿ, ಮನುಷ್ಯರು ಮತ್ತು ಪ್ರಾಣಿಗಳು ಒಂದೇ ನೀರನ್ನು ಉಪಯೋಗಿಸಿದ ಕಾರಣ ಈ ಖಾಯಿಲೆ ಹರಡಿದೆ ಎಂದು ಹೇಳಿದ್ದಾರೆ.
ಚೀನಾದ ವಿಜ್ಞಾನ ಅಕಾಡೆಮಿಯ ವಾದದಂತೆ ಕೊರೊನಾ ವೈರಸ್ ಭಾರತದಲ್ಲಿ ಹುಟ್ಟಿ, ಪ್ರಾಣಿಗಳಿಂದ ಮನುಷ್ಯರಿಗೆ ಹರಡಿ, ಬಳಿಕ ವುಹಾನ್ ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆಯಂತೆ. ಭಾರತವು ಕೊರೊನಾ ಮೂಲ ಎಂಬುದು ಇದೀಗ ಚೀನಾದ ದೂಷಣೆಯಾಗಿದೆ.
ಮತ್ತೊಂದು ದೇಶದ ಮೇಲೆ ಅಪವಾದ ಹೊರಿಸುವುದು ಚೀನಾಕ್ಕೆ ಇದು ಹೊಸದೇನಲ್ಲ. ಸಾಕ್ಷ್ಯರಹಿತ ವಾದಗಳನ್ನು ಈ ಮೊದಲೂ ಚೀನಾ ಪ್ರಯೋಗಿಸಿತ್ತು.
ಅಧ್ಯಯನ ಏನು ಹೇಳುತ್ತಿದೆ? ಈ ಸಂಶೋಧನೆಗೆ ಚೀನಾದ ವಿಜ್ಞಾನಿಗಳ ತಂಡವು ಫೈಲೊಜೆನೆಟಿಕ್ ವಿಶ್ಲೇಷಣಾ ವಿಧಾನವನ್ನು (phylogenetic analysis) ಬಳಸಿದ್ದು, ವೈರಸ್ ಹೇಗೆ ರೂಪಾಂತರ ಹೊಂದುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಮೂಲಕ ವೈರಸ್ನ ಮೂಲ ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ.
ಕಡಿಮೆ ರೂಪಾಂತರ ಹೊಂದಿರುವ ವೈರಸ್ಗಳನ್ನು ಪರಿಗಣಿಸಿ ವೈರಾಣುವಿನ ಮೂಲ ಪತ್ತೆ ಹಚ್ಚಲು ಸಾಧ್ಯ ಎಂಬುದು ವಿಜ್ಞಾನಿಗಳ ವಾದವಾಗಿದೆ. ವೈರಾಣು ರೂಪಾಂತರ ಹೊಂದಲು ಪಡೆಯುವ ಸಮಯವನ್ನು ಭಾರತದ ಮಾದರಿಗಳ ಜೊತೆ ಹೊಂದಿಸಿ ನೋಡಿ, ಭಾರತದಲ್ಲೇ ಕೊವಿಡ್ ಹುಟ್ಟಿಕೊಂಡಿರುವ ಬಗ್ಗೆ ಹೇಳಿದ್ದಾರೆ. ಜುಲೈ ಅಥವಾ ಆಗಸ್ಟ್ ಸಂದರ್ಭದಲ್ಲಿ ಕೊವಿಡ್ ಹುಟ್ಟಿಕೊಂಡಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಎಂಟು ದೇಶಗಳನ್ನು ದೂಷಿಸಿದೆ ಚೀನಾ! ವುಹಾನ್ ನಗರದಲ್ಲಿ ಕೊವಿಡ್ ಹುಟ್ಟಿತೆಂಬ ವಾದವನ್ನು ಬದಿಗೆ ಸರಿಸಿರುವ ಚೀನಾ ಸಂಶೋಧಕರು, ಇತರೆ ಎಂಟು ದೇಶಗಳ ಕಡೆ ಕೈ ತೋರಿಸಿದ್ದಾರೆ. ಬಾಂಗ್ಲಾದೇಶ, USA, ಗ್ರೀಸ್, ಆಸ್ಟ್ರೇಲಿಯಾ, ಭಾರತ, ಇಟಲಿ, ಸೆಜ್ ರಿಪಬ್ಲಿಕ್, ರಷ್ಯಾ ಮತ್ತು ಸರ್ಬಿಯಾ ದೇಶದ ಮೇಲೆ ಆಪಾದನೆ ಹೊರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ಲಾಸ್ಗೊವ್ ವಿಶ್ವವಿದ್ಯಾಲಯದ ಸಂಶೋಧಕ ಡೇವಿಡ್ ರಾಬರ್ಟ್ಸನ್, ಚೀನಾದ ವಾದವನ್ನು ತಳ್ಳಿಹಾಕಿದ್ದಾರೆ. ಕೊರೊನಾ ವೈರಸ್ ಬಗ್ಗೆ ತಿಳಿಯುವಲ್ಲಿ ಈ ವಾದದಿಂದ ಏನೂ ಉಪಯೋಗವಿಲ್ಲ ಎಂದಿದ್ದಾರೆ.
Published On - 2:42 pm, Sat, 28 November 20