AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಸ್ವೀಕರಿಸಲು ಮುಸ್ಲಿಂ ಮುಖಂಡರ ಹಿಂದೇಟು: ಶುರುವಾಗಿದೆ ವಿಜ್ಞಾನ-ಧಾರ್ಮಿಕ ಜಿಜ್ಞಾಸೆ

ಹಂದಿ ಮಾಂಸ/ಉತ್ಪನ್ನಗಳು ಸೇವನೆಗೆ ನಿಷಿದ್ಧ. ಆದರೆ ಲಸಿಕೆಯನ್ನು ನೇರವಾಗಿ ದೇಹಕ್ಕೆ ಚುಚ್ಚಲಾಗುತ್ತದೆ. ಹಾಗಾಗಿ ಏನೂ ತೊಂದರೆಯಿಲ್ಲ ಎಂಬ ವಾದವನ್ನೂ ಕೆಲವು ತಜ್ಞರು ಮುಂದಿಟ್ಟಿದ್ದಾರೆ. ಆದರೆ ಸದ್ಯಕ್ಕಂತೂ ಮುಸ್ಲಿಂ ಮುಖಂಡರ ಕೆಲವು ಗುಂಪು, ಲಸಿಕೆಗೆ ‘ಹಲಾಲ್’ ಪ್ರಮಾಣೀಕರಣ ನೀಡಿ ಎನ್ನುತ್ತಿದೆ.

ಕೊರೊನಾ ಲಸಿಕೆ ಸ್ವೀಕರಿಸಲು ಮುಸ್ಲಿಂ ಮುಖಂಡರ ಹಿಂದೇಟು: ಶುರುವಾಗಿದೆ ವಿಜ್ಞಾನ-ಧಾರ್ಮಿಕ ಜಿಜ್ಞಾಸೆ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 2:52 PM

ಜಕಾರ್ತಾ: ಹಲವು ಔಷಧೀಯ ಸಂಶೋಧನಾ ಸಂಸ್ಥೆಗಳು ಕೊರೊನಾ ಲಸಿಕೆ ಅಭಿವೃದ್ಧಿ, ಪ್ರಯೋಗ, ಪರೀಕ್ಷೆಯಲ್ಲಿ ತೊಡಗಿವೆ. ಹಾಗೇ, ರಾಷ್ಟ್ರಗಳು ತಮಗೆ ಅಗತ್ಯ ಇರುವಷ್ಟು ಡೋಸ್​ ಲಸಿಕೆಯನ್ನು ಪಡೆಯಲು ಕಾತರದಿಂದ ಕಾಯುತ್ತಿವೆ. ಆದರೆ ಈ ಮಧ್ಯೆ ಇಂಡೋನೇಷಿಯಾ ಸೇರಿ ಕೆಲವು ದೇಶಗಳ ಮುಸ್ಲಿಂ ಸಮುದಾಯದ ಧಾರ್ಮಿಕ ಪ್ರಮುಖರು ಒಂದು ವಿಚಾರಕ್ಕೆ ತುಂಬ ಕಳವಳ ವ್ಯಕ್ತಪಡಿಸಿ, ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಮುಸ್ಲಿಮರಿಗೆ ಧಾರ್ಮಿಕ ಕಾರಣಗಳಿಂದಾಗಿ ಹಂದಿ ನಿಷಿದ್ಧ. ಹೀಗಿರುವಾಗ ಕೊರೊನಾ ಲಸಿಕೆಯಲ್ಲಿ ಹಂದಿ ಮಾಂಸ/ಉತ್ಪನ್ನಗಳ ಬಳಕೆಯಾಗಿರುವ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೇ ಕಾರಣಕ್ಕೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಲಸಿಕೆಯಲ್ಲಿ ಹಂದಿಮಾಂಸದಿಂದ ಪಡೆದ ಜಿಲಾಟಿನ್​ನ್ನು ಸ್ಟೆಬಿಲೈಸರ್​ ಆಗಿ ಬಳಸಲಾಗುತ್ತದೆ. ಲಸಿಕೆ ಶೇಖರಣೆ, ಸಾಗಣೆ ಮಾಡುವಾಗ ಕೆಡದಂತೆ, ದೀರ್ಘಕಾಲ ಸ್ಥಿರವಾಗಿ ಉಳಿಯಲು ಹಂದಿಮಾಂಸದ ಜಿಲಾಟಿನ್​ ತುಂಬ ಪರಿಣಾಮಕಾರಿ. ಆದರೆ ಇದೇ ಈಗ ಮುಸ್ಲಿಂ ಧಾರ್ಮಿಕ ಮುಖಂಡರ ವಿರೋಧಕ್ಕೆ ಕಾರಣವಾಗಿದೆ. ಆದಾಗ್ಯೂ ಕೆಲವು ಕಂಪನಿಗಳು ಹಂದಿ ಮಾಂಸದ ಜಿಲಾಟಿನ್​ ಬಳಸದೆ ಲಸಿಕೆ ತಯಾರಿಸಲು ವರ್ಷದಿಂದಲೂ ಪ್ರಯತ್ನ ಮಾಡುತ್ತಿವೆ.

ಫೈಝರ್​ ಲಸಿಕೆಯಲ್ಲಿ ಇಲ್ಲ ಜಿಲಾಟಿನ್ ಈಗಾಗಲೇ ಬಳಕೆಗೆ ಅನುಮತಿ ಸಿಕ್ಕಿರುವ ಫೈಝರ್ ಮತ್ತು ಪರೀಕ್ಷೆಗಳ ಅಂತಿಮ ಹಂತದಲ್ಲಿರುವ ಮಾಡೆರ್ನಾ ಮತ್ತು ಆಸ್ಟ್ರಾಜೆನೆಕಾ ಕಂಪನಿಗಳ ಲಸಿಕೆಗಳಲ್ಲಿ ಹಂದಿ ದೇಹದಿಂದ ಪಡೆದ ಯಾವುದೇ ಉತ್ಪನ್ನ ಬಳಕೆ ಮಾಡಿಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಫೈಝರ್​ ಈಗಾಗಲೇ ತನ್ನ ಸೀಮಿತ ಪೂರೈಕೆಯನ್ನು ಪ್ರಾರಂಭಿಸಿದೆ. ಆದರೆ ಇಂಡೋನೇಷಿಯಾ ಸೇರಿ ಮತ್ತಿತರ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಪೂರೈಸಲು ಸಿದ್ಧವಾಗಿರುವ ಲಸಿಕೆಗಳನ್ನು ಜಿಲಾಟಿನ್​ ಮುಕ್ತ ಎಂದು ಪ್ರಮಾಣೀಕರಿಸಿಲ್ಲ. ಪ್ರಸ್ತುತ ಮುಸ್ಲಿಂ ಧಾರ್ಮಿಕ ಮುಖಂಡರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ ಎಂದು ಬ್ರಿಟಿಷ್​ ಇಸ್ಲಾಮಿಕ್ ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಸಲ್ಮಾನ್ ವಾಖರ್​ ತಿಳಿಸಿದ್ದಾರೆ.

ಯಹೂದಿ ಮತ್ತು ಮುಸ್ಲಿಂ ಸಂಪ್ರದಾಯವಾದಿಗಳು ಹಂದಿ ಉತ್ಪನ್ನಗಳ ಸೇವನೆಯನ್ನು ಧಾರ್ಮಿಕ ಕಾರಣಗಳಿಗಾಗಿ ತಪ್ಪು ಎಂದು ಭಾವಿಸುತ್ತಾರೆ. ಇದನ್ನೇ ಔಷಧಗಳ ವಿಚಾರಕ್ಕೂ ಅನ್ವಯ ಮಾಡಿಕೊಳ್ಳುತ್ತಾರೆ. ಹಂದಿ ಮಾಂಸದ ಜಿಲಾಟಿನ್​ ಅನ್ನು ಕಠಿಣ ರಾಸಾಯನಿಕವನ್ನಾಗಿ ರೂಪಾಂತರ ಮಾಡಲಾಗುತ್ತದೆಯಾ? ಅದು ರಾಸಾಯನಿಕವಾಗಿ ರೂಪಾಂತರವಾದ ಮೇಲೆ ಕೂಡ ಧಾರ್ಮಿಕವಾಗಿ ನಿಷಿದ್ಧವಾ ಎಂಬಿತ್ಯಾದಿ ವಿಚಾರಗಳಲ್ಲಿ ಗೊಂದಲ ಇನ್ನೂ ಇರುವುದರಿಂದ ಮುಸ್ಲಿಂ ಪಂಡಿತರದಲ್ಲೇ ಕೆಲ ಭಿನ್ನಾಭಿಪ್ರಾಯಗಳು ಇವೆ. ಒಂದಷ್ಟು ಮಂದಿ ಹಂದಿ ಮಾಂಸವಷ್ಟೇ ನಿಷೇಧ, ರಾಸಾಯನಿಕವಾಗಿ ಬದಲಾದ ಮೇಲೆ ಅದಕ್ಕೂ ಧಾರ್ಮಿಕ ಕಾರಣಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ ಕಟು ಸಂಪ್ರದಾಯವಾದಿಗಳು ಹಂದಿ ಜಿಲಾಟಿನ್​ ಬಳಸಿರುವ ಲಸಿಕೆ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ವಾಖರ್​ ವಿವರಿಸಿದ್ದಾರೆ.

ಭಿನ್ನ ವಾದಗಳು ಹಂದಿ ಮಾಂಸ/ಉತ್ಪನ್ನಗಳು ಸೇವನೆಗೆ ನಿಷಿದ್ಧ. ಆದರೆ ಲಸಿಕೆಯನ್ನು ನೇರವಾಗಿ ದೇಹಕ್ಕೆ ಚುಚ್ಚಲಾಗುತ್ತದೆ. ಹಾಗಾಗಿ ಏನೂ ತೊಂದರೆಯಿಲ್ಲ ಎಂಬ ವಾದವನ್ನೂ ಕೆಲ ಧಾರ್ಮಿಕ ಪಂಡಿತರು ತಜ್ಞರು ಮುಂದಿಟ್ಟಿದ್ದಾರೆ. ಆದರೆ ಸದ್ಯಕ್ಕಂತೂ ಮುಸ್ಲಿಂ ಮುಖಂಡರ ಕೆಲವು ಗುಂಪು, ಲಸಿಕೆಗೆ ‘ಹಲಾಲ್’ ಪ್ರಮಾಣೀಕರಣ, ಅಂದರೆ ಲಸಿಕೆಗಳಲ್ಲಿ ಹಂದಿಮಾಂಸದ ಜಿಲಾಟಿನ್​ ಬಳಸಿಲ್ಲ ಎಂದು ಸರ್ಟಿಫಿಕೇಟ್ ನೀಡಿ ಎಂದು ಬೇಡಿಕೆ ಮುಂದಿಟ್ಟಿದೆ. 2018ರಲ್ಲಿ ಕೂಡ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ದಡಾರ ಮತ್ತು ರುಬೆಲ್ಲಾ ಲಸಿಕೆಗಳ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕೊವಿಡ್-19 ವಿರುದ್ಧ ಫೈಝರ್ ಲಸಿಕೆ ಹಾಕಿಸಿಕೊಂಡ ಇಸ್ರೇಲ್ ಪ್ರಧಾನಿ ನೆತನ್ಯಾಹು