ಸೇನೆಯ ಒಂದು ಸಣ್ಣ ತಪ್ಪು, ನೂರಾರು ಜೀವಗಳು ಬಲಿ: ಉಗ್ರರ ಬದಲು ಸಾಮಾನ್ಯ ನಾಗರಿಕರ ಮೇಲೆ ನೈಜೀರಿಯಾ ವೈಮಾನಿಕ ದಾಳಿ

ನೈಜೀರಿಯಾದಲ್ಲಿ ಉಗ್ರರನ್ನು ಸದೆಬಡಿಯಲು ನಡೆಸಿದ ಮಿಲಿಟರಿ ವೈಮಾನಿಕ ದಾಳಿಯು ದಾರಿ ತಪ್ಪಿ ನಾಗರಿಕರ ಮೇಲೆ ಅಪ್ಪಳಿಸಿದ್ದು, ಕನಿಷ್ಠ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೈಜೀರಿಯನ್ ವಾಯುಪಡೆಯು ಆ ಭಾಗದಲ್ಲಿ ಸಕ್ರಿಯವಾಗಿರುವ ಜಿಹಾದಿ ಹೋರಾಟಗಾರರನ್ನು ಸದೆಬಡಿಯಲು ಕಾರ್ಯಾಚರಣೆ ನಡೆಸುತ್ತಿತ್ತು. ಬೊರ್ನೊ ಮತ್ತು ಯೋಬೆ ರಾಜ್ಯಗಳ ಗಡಿ ಭಾಗದಲ್ಲಿರುವ ಗ್ರಾಮವೊಂದರ ಮಾರುಕಟ್ಟೆಯಲ್ಲಿ ಜನಜಂಗುಳಿ ಇದ್ದ ಸಮಯದಲ್ಲಿ ಈ ವೈಮಾನಿಕ ದಾಳಿ ನಡೆದಿದೆ.

ಸೇನೆಯ ಒಂದು ಸಣ್ಣ ತಪ್ಪು, ನೂರಾರು ಜೀವಗಳು ಬಲಿ: ಉಗ್ರರ ಬದಲು ಸಾಮಾನ್ಯ ನಾಗರಿಕರ ಮೇಲೆ ನೈಜೀರಿಯಾ ವೈಮಾನಿಕ ದಾಳಿ
ಸಾಂದರ್ಭಿಕ ಚಿತ್ರ
Image Credit source: Google Gemini

Updated on: Apr 13, 2026 | 7:56 AM

ಅಬುಜಾ, ಏಪ್ರಿಲ್ 13: ನೈಜೀರಿಯಾದಲ್ಲಿ ಉಗ್ರ(Terrorist) ರನ್ನು ಸದೆಬಡಿಯಲು ನಡೆಸಿದ ಮಿಲಿಟರಿ ವೈಮಾನಿಕ ದಾಳಿಯು ದಾರಿ ತಪ್ಪಿ ನಾಗರಿಕರ ಮೇಲೆ ಅಪ್ಪಳಿಸಿದ್ದು, ಕನಿಷ್ಠ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೈಜೀರಿಯನ್ ವಾಯುಪಡೆಯು ಆ ಭಾಗದಲ್ಲಿ ಸಕ್ರಿಯವಾಗಿರುವ ಜಿಹಾದಿ ಹೋರಾಟಗಾರರನ್ನು ಸದೆಬಡಿಯಲು ಕಾರ್ಯಾಚರಣೆ ನಡೆಸುತ್ತಿತ್ತು. ಬೊರ್ನೊ ಮತ್ತು ಯೋಬೆ ರಾಜ್ಯಗಳ ಗಡಿ ಭಾಗದಲ್ಲಿರುವ ಗ್ರಾಮವೊಂದರ ಮಾರುಕಟ್ಟೆಯಲ್ಲಿ ಜನಜಂಗುಳಿ ಇದ್ದ ಸಮಯದಲ್ಲಿ ಈ ವೈಮಾನಿಕ ದಾಳಿ ನಡೆದಿದೆ.

ಅಧಿಕಾರಿಗಳು ಈ ಘಟನೆಯನ್ನು ‘ಮಿಸ್‌ಫೈರ್’ ಎಂದು ಒಪ್ಪಿಕೊಂಡಿದ್ದಾರೆ. ಉಗ್ರರ ಅಡಗುತಾಣ ಎಂದು ಭಾವಿಸಿ ನಡೆಸಿದ ಬಾಂಬ್ ದಾಳಿಯು ನೇರವಾಗಿ ಮಾರುಕಟ್ಟೆಯ ಮೇಲೆ ಬಿದ್ದಿದೆ. ಬದುಕುಳಿದವರ ಹೇಳಿಕೆಗಳನ್ನು ಉಲ್ಲೇಖಿಸಿರುವ ಅಮ್ನೆಸ್ಟಿ ಇಂಟರ್ನ್ಯಾಷನಲ್, ಕನಿಷ್ಠ 100 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದೆ. ದಶಕಗಳಿಂದ ದಂಗೆಕೋರರ ಹಾವಳಿಯಿಂದ ತತ್ತರಿಸಿರುವ ಈ ಪ್ರದೇಶದಲ್ಲಿ ಈಗ ಸ್ವತಃ ದೇಶದ ಸೇನೆಯೇ ನಡೆಸಿದ ಈ ದಾಳಿ ಜನರಲ್ಲಿ ಆತಂಕ ಮೂಡಿಸಿದೆ.

ನೈಜೀರಿಯಾದ ಈಶಾನ್ಯ ಭಾಗವು 2000ರ ದಶಕದ ಆರಂಭದಿಂದಲೂ ಬೊಕೊ ಹರಮ್ ಎಂಬ ಜಿಹಾದಿ ಉಗ್ರಗಾಮಿ ಗುಂಪಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಮೊಹಮ್ಮದ್ ಯೂಸುಫ್ ಸ್ಥಾಪಿಸಿದ ಈ ಗುಂಪು ಪಾಶ್ಚಿಮಾತ್ಯ ಶಿಕ್ಷಣವನ್ನು ವಿರೋಧಿಸುತ್ತದೆ. 2014ರಲ್ಲಿ 200ಕ್ಕೂ ಹೆಚ್ಚು ಶಾಲಾ ಬಾಲಕಿಯರನ್ನು ಅಪಹರಿಸಿದ ಪ್ರಕರಣ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಲಕ್ಷಾಂತರ ಜನರ ಸ್ಥಳಾಂತರ ಮತ್ತು ಸಾವಿರಾರು ಜನರ ಹತ್ಯೆಗೆ ಈ ಗುಂಪು ಕಾರಣವಾಗಿದೆ.

ಮತ್ತಷ್ಟು ಓದಿ: 16 ವರ್ಷಗಳಿಂದ ಭಾರತದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪಾಕಿಸ್ತಾನದ ಎಲ್​ಇಟಿ ಉಗ್ರ ಸೆರೆ

ಪ್ರಾದೇಶಿಕ ಮಿಲಿಟರಿ ಕಾರ್ಯಾಚರಣೆಗಳಿಂದಾಗಿ ಬೊಕೊ ಹರಮ್ ದುರ್ಬಲಗೊಂಡಿದ್ದರೂ, ಈಗಲೂ ಸಣ್ಣ ಗುಂಪುಗಳಾಗಿ ವಿಭಜನೆಗೊಂಡು ದಾಳಿಗಳನ್ನು ಮುಂದುವರಿಸುತ್ತಿವೆ. ಉಗ್ರರನ್ನು ಕೊಲ್ಲಲು ಹೊರಟು ನಾಗರಿಕರನ್ನೇ ಬಲಿ ಪಡೆದ ಈ ಘಟನೆ ನೈಜೀರಿಯಾ ಸರ್ಕಾರಕ್ಕೆ ಭಾರಿ ಮುಜುಗರ ತಂದಿದೆ. ಸೇನೆಯ ಕಾರ್ಯವೈಖರಿಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿಬರುತ್ತಿವೆ. ಬಡತನ ಮತ್ತು ಭಯೋತ್ಪಾದನೆಯ ನಡುವೆ ಬದುಕುತ್ತಿದ್ದ ಜನರಿಗೆ ಈಗ ಮಾರುಕಟ್ಟೆಗೆ ಹೋಗಲೂ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸೈನಿಕರ ವಿವೇಚನಾರಹಿತ ದಾಳಿಗಳು ಹೇಗೆ ಅಮಾಯಕರ ಬದುಕನ್ನು ಕಸಿದುಕೊಳ್ಳುತ್ತವೆ ಎಂಬುದಕ್ಕೆ ಈ ಘಟನೆ ಒಂದು ಕರಾಳ ಸಾಕ್ಷಿ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us