ವಿಶ್ವದ ಅತಿಹೆಚ್ಚು ಕುಬೇರರು ಯಾವ್ಯಾವ ನಗರಗಳಲ್ಲಿ ವಾಸವಾಗಿದ್ದಾರೆ ಅಂತ ನಿಮಗೆ ಗೊತ್ತಾ?
ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಒಂಬತ್ತು ಮತ್ತು ಹತ್ತನೇ ಸ್ಥಾನ ಹೊಂದಿರುವ ಬೀಜಿಂಗ್ ಮತ್ತು ಶಾಂಘೈ ಕೂಡ ಭಾರಿ ಸ್ಥಿತಿವಂತರ ಸಂಖ್ಯೆಯಲ್ಲಿ ಕುಸಿತ ಕಂಡಿವೆ.
ನಮ್ಮ ದೇಶದಲ್ಲಿ ಕೋಟ್ಯಾಧಿಪತಿಗಳು (millionaires) ಯಾವೂರಲ್ಲಿ ಜಾಸ್ತಿಯಿದ್ದಾರೆ ಅಂತ ಕೇಳಿದರೆ ಉತ್ತರ ಕೊಡೋದು ಸ್ವಲ್ಪ ಕಷ್ಟ ಮಾರಾಯ್ರೇ. ಯಾಕೆಂದರೆ ಪ್ರತಿ ಮಹಾನಗರದದಲ್ಲಿ ಅವರು ನಮಗೆ ಸಿಗುತ್ತಾರೆ. ಜಾಗತಿಕ ಮಟ್ಟದಲ್ಲಿ (globally) ನೋಡಿದರೂ ಎಲ್ಲ ದೇಶಗಳ ಪ್ರಮುಖ ನಗರಗಳಲ್ಲಿ ನಮಗೆ ಮಿಲಿಯನ್ನೇರ್ ಗಳು ಸಿಗುತ್ತಾರೆ. ಹೆನ್ಲೀ ಅಂಡ್ ಪಾರ್ಟ್ನರ್ಸ್ (Henley and Partners) ಗ್ರೂಪ್ ಹೆಸರಿನ ಒಂದು ಉದ್ಯೋಗ ಸಲಹಾ ಸಮಿತಿ ವರದಿಯೊಂದರ ಪ್ರಕಾರ ನ್ಯೂ ಯಾರ್ಕ್, ಟೋಕಿಯೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಬೇ ಮಹಾನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಿಲಿಯನ್ನೇರ್ ಗಳು ವಾಸವಾಗಿದ್ದಾರೆ.
ಅತ್ಯಧಿಕ ಮಿಲಿಯನ್ನೇರ್ ಗಳನ್ನು ಹೊಂದಿರುವ ಟಾಪ್ 10 ನಗರಗಳ ಪೈಕಿ 5 ಅಮೆರಿಕನಲ್ಲಿವೆ. ಈ ವಿಷಯವನ್ನು ಮತ್ತಷ್ಟು ಕೂಲಂಕುಶವಾಗಿ ಅವಲೋಕಿಸಿದರೆ ನ್ಯೂ ಯಾರ್ಕ್ ನಗರವು 2022 ರ ಮೊದಲಾರ್ಧದಲ್ಲಿ ಶೇಕಡ 12 ರಷ್ಟು ಆಗರ್ಭ ಶ್ರೀಮಂತರನ್ನು ಕಳೆದುಕೊಂಡಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಶೇಕಡ 4 ರಷ್ಟು ಹೆಚ್ಚಳ ಕಂಡುಬಂದಿದೆ.
ನಾಲ್ಕನೇ ಸ್ಥಾನದಲ್ಲಿರುವ ಲಂಡನ್ ಶ್ರೀಮಂತರ ಸಂಖ್ಯೆಯಲ್ಲಿ ಶೇಕಡ 9 ರಷ್ಟು ಕುಸಿತ ಕಂಡಿದೆ. ವರದಿಯು ಮಿಲಿಯನೇರ್‌ಗಳನ್ನು 1 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಆಸ್ತಿ ಹೊಂದಿರುವವರು ಎಂದು ವ್ಯಾಖ್ಯಾನಿಸುತ್ತದೆ.
ಗುಪ್ತಚರ ಸಂಸ್ಥೆ ನ್ಯೂ ವರ್ಲ್ಡ್ ವೆಲ್ತ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಶಾರ್ಜಾ ಈ ವರ್ಷದ ಇವತ್ತಿನ ದಿನದವರೆಗೆ ವೇಗವಾಗಿ ಬೆಳೆಯುತ್ತಿರುವ ಮಿಲಿಯನೇರ್ ಗಳ ಜನಸಂಖ್ಯೆಯನ್ನು ಹೊಂದಿವೆ.
ಅಬುಧಾಬಿ ಮತ್ತು ದುಬೈ ಕೂಡ ವೇಗವಾಗಿ ಬೆಳೆಯುತ್ತಿರುವ ಮಿಲಿಯನೇರ್ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಸೇರಿವೆ. ಯುಎಈ ಕಡಿಮೆ ತೆರಿಗೆ ಮತ್ತು ಅದ್ಭುತವಾದ ಮನೆ ಯೋಜನೆಗಳೊಂದಿಗೆ ಕುಬೇರರನ್ನು ತನ್ನಡೆ ಸೆಳೆದುಕೊಳ್ಳುತ್ತಿದೆ. ಶ್ರೀಮಂತ ರಷ್ಯನ್ನರ ವಲಸೆಯು ಸಹ ಯುಎಈಯಲ್ಲಿ ಶ್ರೀಮಂತರ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗಿದೆ.
ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಒಂಬತ್ತು ಮತ್ತು ಹತ್ತನೇ ಸ್ಥಾನ ಹೊಂದಿರುವ ಬೀಜಿಂಗ್ ಮತ್ತು ಶಾಂಘೈ ಕೂಡ ಭಾರಿ ಸ್ಥಿತಿವಂತರ ಸಂಖ್ಯೆಯಲ್ಲಿ ಕುಸಿತ ಕಂಡಿವೆ. ಹೆನ್ಲೀ ಅಂಡ್ ಪಾರ್ಟ್ನರ್ಸ್ ನುಡಿದಿರುವ ಭವಿಷ್ಯದ ಪ್ರಕಾರ ರಷ್ಯಾದ ಬಳಿಕ ಚೀನಾ ಅತಿ ಹೆಚ್ಚು ಶ್ರೀಮಂತರನ್ನು ಕಳೆದುಕೊಳ್ಳುವ ರಾಷ್ಟ್ರವೆನಿಸಿಕೊಳ್ಳಲಿದೆ.