ಉಕ್ರೇನ್ ಕದನ ವಿರಾಮ ಒಪ್ಪಂದದ ಕುರಿತು ಡೊನಾಲ್ಡ್ ಟ್ರಂಪ್, ಪುಟಿನ್ ಮಾತುಕತೆ

|

Updated on: Mar 18, 2025 | 10:28 PM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ 30 ದಿನಗಳ ಸಂಭಾವ್ಯ ಕದನ ವಿರಾಮದ ಬಗ್ಗೆ ಚರ್ಚಿಸಿದ್ದಾರೆ. ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಆಡಳಿತ ಒತ್ತಾಯಿಸುತ್ತಿರುವಂತೆಯೇ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನೇತೃತ್ವದಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಉಕ್ರೇನಿಯನ್ ಅಧಿಕಾರಿಗಳು ಆರಂಭದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಿದ್ದರು. ಇದನ್ನು ಯುದ್ಧವನ್ನು ಕೊನೆಗೊಳಿಸುವತ್ತ ಸಂಭಾವ್ಯ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಉಕ್ರೇನ್ ಕದನ ವಿರಾಮ ಒಪ್ಪಂದದ ಕುರಿತು ಡೊನಾಲ್ಡ್ ಟ್ರಂಪ್, ಪುಟಿನ್ ಮಾತುಕತೆ
Trump, Putin
Follow us on

ವಾಷಿಂಗ್ಟನ್, (ಮಾರ್ಚ್ 18): ಉಕ್ರೇನ್‌ನಲ್ಲಿ ಪ್ರಸ್ತಾವಿತ 30 ದಿನಗಳ ಕದನ ವಿರಾಮಕ್ಕೆ ಅಮೆರಿಕ ರಷ್ಯಾದ ಅನುಮೋದನೆಯನ್ನು ಕೋರುತ್ತಿರುವಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಣಾಯಕ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂದು ಶ್ವೇತಭವನ ಇಂದು ದೃಢಪಡಿಸಿದೆ. ರಷ್ಯಾದ ಪಡೆಗಳು ಉಕ್ರೇನ್ ಮೇಲೆ ದಾಳಿ ಮುಂದುವರಿಸುತ್ತಿರುವಾಗ ಪುಟಿನ್ ಶಾಂತಿ ಸ್ಥಾಪನೆಯ ಬಗ್ಗೆ ಕೇವಲ ಬಾಯ್ಮಾತನ್ನಾಡುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪಿಸಿದ್ದರು.

ಚರ್ಚೆಗೆ ಮುಂಚಿತವಾಗಿ ಶ್ವೇತಭವನವು ಆಶಾವಾದವನ್ನು ವ್ಯಕ್ತಪಡಿಸಿತು. ಈ ಸಂಘರ್ಷವನ್ನು ತ್ವರಿತವಾಗಿ ಪರಿಹರಿಸುವ ಟ್ರಂಪ್ ಅವರ ಬದ್ಧತೆಯನ್ನು ಒತ್ತಿಹೇಳಿತು. “ರಷ್ಯಾದಲ್ಲಿ ಇದು ಕೆಟ್ಟ ಪರಿಸ್ಥಿತಿ, ಉಕ್ರೇನ್‌ನಲ್ಲಿ ಕೂಡ ಇದು ಕೆಟ್ಟ ಪರಿಸ್ಥಿತಿ” ಎಂದು ಟ್ರಂಪ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದರು. “ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಒಳ್ಳೆಯದಲ್ಲ. ಆದರೆ ನಾವು ಶಾಂತಿ ಒಪ್ಪಂದ, ಕದನ ವಿರಾಮ ಉಂಟುಮಾಡಬಹುದೇ ಎಂದು ಯೋಚಿಸಲಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಅಗತ್ಯವಿದ್ದರೆ ಉಕ್ರೇನ್​ನ ಝೆಲೆನ್ಸ್ಕಿ ಜೊತೆ ಮಾತುಕತೆಗೆ ಸಿದ್ಧ ಎಂದ ರಷ್ಯಾದ ಪುಟಿನ್

ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜಾಗರೂಕರಾಗಿದ್ದಾರೆ. ವಿಶೇಷವಾಗಿ ರಷ್ಯಾದ ಪಡೆಗಳು ಉಕ್ರೇನ್‌ನಾದ್ಯಂತ ದಾಳಿಗಳನ್ನು ನಡೆಸುತ್ತಿರುವಾಗ ಯುದ್ಧವನ್ನು ಕೊನೆಗೊಳಿಸಲು ಪುಟಿನ್ ಅವರ ಇಚ್ಛೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದರು. ಇಂದಿನ ಫೋನ್ ಮಾತುಕತೆಯ ಫಲಿತಾಂಶವು ಅನಿಶ್ಚಿತವಾಗಿಯೇ ಉಳಿದಿದೆ. ಆದರೆ ಕೈವ್‌ನಲ್ಲಿ ಸಂದೇಹಗಳು ಮುಂದುವರಿದಿದ್ದರೂ ಸಹ, ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುವ ತನ್ನ ಬದ್ಧತೆಯನ್ನು ಶ್ವೇತಭವನವು ಒತ್ತಿಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ