ಕೊನೆ ಕ್ಷಣದಲ್ಲಿ ಇರಾನ್ ಮೇಲಿನ ಭೀಕರ ದಾಳಿ ಮುಂದೂಡಿದ ಅಮೆರಿಕ, ಗಲ್ಫ್ ರಾಷ್ಟ್ರಗಳ ಮನವಿಗೆ ಓಗೊಟ್ಟ ಟ್ರಂಪ್

ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಮೂಡಿಸಿದ್ದ ಇರಾನ್ ಮೇಲಿನ ಬೃಹತ್ ಮಿಲಿಟರಿ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆ ಕ್ಷಣದಲ್ಲಿ ಮುಂದೂಡಿದ್ದಾರೆ. ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ (UAE) ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ಮಿತ್ರ ರಾಷ್ಟ್ರಗಳ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇರಾನ್ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ತಾವು ಅತ್ಯಂತ ಹತ್ತಿರದಲ್ಲಿದ್ದೇವೆ, ಹಾಗಾಗಿ 2 ರಿಂದ 3 ದಿನ ದಾಳಿ ನಡೆಸದಂತೆ ಗಲ್ಫ್ ರಾಷ್ಟ್ರಗಳು ಮನವಿ ಮಾಡಿದ್ದವು. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ಬಿಟ್ಟರೆ ಮಾತುಕತೆ ಮೂಲಕ ಬಿಕ್ಕಟ್ಟು ಶಮನಗೊಳಿಸಲು ಸಿದ್ಧ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಕೊನೆ ಕ್ಷಣದಲ್ಲಿ ಇರಾನ್ ಮೇಲಿನ ಭೀಕರ ದಾಳಿ ಮುಂದೂಡಿದ ಅಮೆರಿಕ, ಗಲ್ಫ್ ರಾಷ್ಟ್ರಗಳ ಮನವಿಗೆ ಓಗೊಟ್ಟ ಟ್ರಂಪ್
ಡೊನಾಲ್ಡ್​ ಟ್ರಂಪ್
Image Credit source: Sputnik India

Updated on: May 19, 2026 | 7:41 AM

ವಾಷಿಂಗ್ಟನ್, ಮೇ 19: ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾ ಯುದ್ಧದ ಭೀತಿ ಸೃಷ್ಟಿಸಿದ್ದ ಇರಾನ್ ಮೇಲಿನ ಅತ್ಯಂತ ಭೀಕರ ಮಿಲಿಟರಿ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕೊನೆ ಕ್ಷಣದಲ್ಲಿ ಮುಂದೂಡಿದ್ದಾರೆ. ಅಮೆರಿಕದ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ  ವಿಷಯವನ್ನು ಖುದ್ದಾಗಿ ಹಂಚಿಕೊಂಡಿರುವ ಅಧ್ಯಕ್ಷ ಟ್ರಂಪ್, ಗಲ್ಫ್ ರಾಷ್ಟ್ರಗಳ ಉನ್ನತ ನಾಯಕರ ಮಧ್ಯಸ್ಥಿಕೆ ಮತ್ತು ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಶಿಯಲ್’ಪೋಸ್ಟ್ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಾವು ನಾಳೆಯೇ (ಬುಧವಾರ) ಇರಾನ್ ಮೇಲೆ ಅತ್ಯಂತ ಬೃಹತ್ ಮಟ್ಟದ ಮಿಲಿಟರಿ ದಾಳಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ನಾನು ಈ ದಾಳಿಯನ್ನು ಸದ್ಯಕ್ಕೆ ಮುಂದೂಡಿದ್ದೇವೆ. ಇದು ಸ್ವಲ್ಪ ಸಮಯದವರೆಗೆ ಇರಬಹುದು ಅಥವಾ ಇರಾನ್ ಜೊತೆಗಿನ ಮಾತುಕತೆ ಯಶಸ್ವಿಯಾದರೆ ಶಾಶ್ವತವಾಗಿಯೂ ದಾಳಿ ರದ್ದಾಗಬಹುದು ಎಂದಿದ್ದಾರೆ.

ದಾಳಿ ಮುಂದೂಡಿಕೆಯ ಹಿಂದಿರುವ ಅಸಲಿ ರಹಸ್ಯವನ್ನು ಬಿಚ್ಚಿಟ್ಟ ಟ್ರಂಪ್, ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳು ಅಮೆರಿಕದ ಬೆನ್ನಿಗೆ ನಿಂತು ಮಾತುಕತೆ ನಡೆಸಿರುವುದನ್ನು ಬಹಿರಂಗಪಡಿಸಿದರು. ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತು ಇತರ ಕೆಲವು ಪ್ರಮುಖ ದೇಶಗಳು ನನ್ನನ್ನು ನೇರವಾಗಿ ಸಂಪರ್ಕಿಸಿ, ದಾಳಿಯನ್ನು ಕನಿಷ್ಠ 2 ರಿಂದ 3 ದಿನಗಳ ಕಾಲ ಮುಂದೂಡುವಂತೆ ವಿನಂತಿಸಿಕೊಂಡವು. ಇರಾನ್ ಜೊತೆಗೆ ಒಂದು ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳಲು ತಾವು ಅತ್ಯಂತ ಹತ್ತಿರದಲ್ಲಿದ್ದೇವೆ ಎಂದು ಆ ದೇಶಗಳು ನಮಗೆ ಮನವರಿಕೆ ಮಾಡಿಕೊಟ್ಟಿವೆ ಎಂದು ಟ್ರಂಪ್ ತಿಳಿಸಿದರು.

ಮತ್ತಷ್ಟು ಓದಿ:

ಜಗತ್ತಿನ ಎರಡು ದೊಡ್ಡ ಶಕ್ತಿಗಳ ಸಮ್ಮಿಲನ: ಸಂಘರ್ಷ ಬೇಡ ಸಹಕಾರವಿರಲಿ ಎಂದ ಜಿನ್‌ಪಿಂಗ್

ಅಮೆರಿಕದ ಏಕೈಕ ಷರತ್ತು: ಪರಮಾಣು ಮುಕ್ತ ಇರಾನ್
ಇರಾನ್ ಜೊತೆಗಿನ ಯಾವುದೇ ಸಂಭಾವ್ಯ ಒಪ್ಪಂದಕ್ಕೆ ಅಮೆರಿಕ ವಿಧಿಸಿರುವ ಕಠಿಣ ನಿಲುವನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದುವಂತಿಲ್ಲ. ಈ ಷರತ್ತಿಗೆ ಒಪ್ಪಿ, ಮಧ್ಯಪ್ರಾಚ್ಯದ ನಮ್ಮ ಮಿತ್ರ ರಾಷ್ಟ್ರಗಳು ಆ ಒಪ್ಪಂದದಿಂದ ತೃಪ್ತರಾದರೆ, ಖಂಡಿತವಾಗಿಯೂ ಅಮೆರಿಕ ಕೂಡ ಸಮಾಧಾನಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಟ್ರಂಪ್ ಹೇಳಿದ್ದೇನು?

ಒಂದು ವೇಳೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ್ದರೆ ಅದು ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಜ್ವಾಲೆಗೆ ತಳ್ಳುತ್ತಿತ್ತು. ಆದರೆ ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ಜಂಟಿಯಾಗಿ ರಾಜತಾಂತ್ರಿಕ ಚದುರಂಗದಾಟ ಆಡಿ ಟ್ರಂಪ್ ಅವರನ್ನು ಸದ್ಯಕ್ಕೆ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿವೆ. ಮುಂದಿನ 48 ಗಂಟೆಗಳಲ್ಲಿ ಗಲ್ಫ್ ರಾಷ್ಟ್ರಗಳು ಇರಾನ್‌ನಿಂದ ಎಂತಹ ಭರವಸೆ ತರಲಿವೆ ಎಂಬುದರ ಮೇಲೆ ಜಾಗತಿಕ ಶಾಂತಿ ನಿರ್ಧಾರವಾಗಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:41 am, Tue, 19 May 26

Follow Us