ಕ್ಯೂಬಾಗೆ ತೈಲ ಪೂರೈಸುವ ದೇಶಗಳಿಗೆ ಟ್ರಂಪ್ ಬೆದರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯೂಬಾಗೆ ತೈಲ ಪೂರೈಸುವ ದೇಶಗಳಿಗೆ ಹೊಸ ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ. ಇದು ಕ್ಯೂಬಾದ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವ ಹೊಸ ತಂತ್ರವಾಗಿದೆ. ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಅಧಿಕಾರ ಕಳೆದುಕೊಂಡ ನಂತರ, ಟ್ರಂಪ್ ಕ್ಯೂಬಾವನ್ನು ಏಕಾಂಗಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಕ್ಯೂಬಾದ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಪರಿಣಾಮಕಾರಿಯಾಗಿದ್ದು, ತೈಲ ಪೂರೈಕೆ ನಿಲ್ಲಿಸುವ ಮೂಲಕ ಕ್ಯೂಬಾ ಸರ್ಕಾರವನ್ನು ದುರ್ಬಲಗೊಳಿಸುವುದು ಅವರ ಗುರಿಯಾಗಿದೆ.

ವಾಷಿಂಗ್ಟನ್, ಜನವರಿ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಜಗತ್ತಿಗೆ ಮತ್ತೊಂದು ಹೊಸ ಬೆದರಿಕೆಯನ್ನು ಹಾಕಿದ್ದಾರೆ. ಕ್ಯೂಬಾಗೆ ತೈಲ ಸರಬರಾಜು ಮಾಡದಂತೆ ಎಲ್ಲಾ ದೇಶಗಳಿಗೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕ್ಯೂಬಾಗೆ ತೈಲ ಮಾರಾಟ ಮಾಡುವ ದೇಶಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗುವುದು. ಇದಕ್ಕೆ ಸಂಬಂಧಿಸಿದ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.
ಟ್ರಂಪ್ ಅವರ ಈ ಕ್ರಮವು ಕ್ಯೂಬಾದ ಮೇಲೆ ಒತ್ತಡ ಹೆಚ್ಚಿಸುವ ಅವರ ಹೊಸ ತಂತ್ರವಾಗಿದೆ.ಈ ತಿಂಗಳ ಆರಂಭದಲ್ಲಿ, ಯುಎಸ್ ಮಿಲಿಟರಿ ವೆನೆಜುವೆಲಾದ ಮೇಲೆ ದಾಳಿ ಮಾಡಿ ಅಂದಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿತು. ಅಂದಿನಿಂದ, ನಿಕೋಲಸ್ ಮಡುರೊ ಅವರ ಆಪ್ತ ಮಿತ್ರ ಕ್ಯೂಬಾ ನಾಯಕತ್ವದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಪದೇ ಪದೇ ಬೆದರಿಕೆ ಹಾಕಿದ್ದಾರೆ. ಕ್ಯೂಬಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವ ಮತ್ತು ಕ್ಯೂಬಾಗೆ ತೈಲ ಮಾರಾಟ ಮಾಡುವ ದೇಶಗಳ ಸರಕುಗಳ ಮೇಲೆ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ತಿಳಿಸಿದೆ .
ಆದಾಗ್ಯೂ, ಹೇಳಿಕೆಯಲ್ಲಿ ಸುಂಕ ದರಗಳು ಅಥವಾ ಯುಎಸ್ ಸುಂಕಗಳಿಗೆ ಒಳಪಡಬಹುದಾದ ದೇಶಗಳ ಹೆಸರನ್ನು ಇನ್ನೂ ತಿಳಿಸಿಲ್ಲ. ಡೊನಾಲ್ಡ್ ಟ್ರಂಪ್ ಆಡಳಿತವು ಕ್ಯೂಬಾವನ್ನು ಏಕಾಂಗಿಯಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕ್ಯೂಬಾದ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನವು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇತ್ತೀಚೆಗೆ, ಮೆಕ್ಸಿಕನ್ ಸರ್ಕಾರವು ಕ್ಯೂಬಾಗೆ ತೈಲ ರಫ್ತುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿತು. ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ತೆಗೆದುಹಾಕಿದ ನಂತರ, ಟ್ರಂಪ್ ಈಗ ಕ್ಯೂಬಾ ಸರ್ಕಾರದ ಪತನದ ಬಗ್ಗೆ ಸುಳಿವು ನೀಡಿದ್ದಾರೆ.
ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಈ ವರ್ಷದ ಆರಂಭದಲ್ಲಿ, ಅಮೆರಿಕದ ಸೇನೆಯು ವೆನೆಜುವೆಲಾವನ್ನು ಆಕ್ರಮಿಸಿ, ಆಗಿನ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಸೆರೆ ಹಿಡಿಯಿತು. ಅಂದಿನಿಂದ ಡೊನಾಲ್ಡ್ ಟ್ರಂಪ್ ಕ್ಯೂಬಾದ ಮೇಲೆ ದಾಳಿಯ ಬಗ್ಗೆ ಸುಳಿವು ನೀಡುತ್ತಿದ್ದಾರೆ. ಟ್ರಂಪ್ ಕ್ಯೂಬಾಗೆ ಹೊಸ ಬೆದರಿಕೆ ಹಾಕಿದ್ದಲ್ಲದೆ ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಕ್ಯೂಬಾದ ಹೊಸ ಅಧ್ಯಕ್ಷರನ್ನಾಗಿ ನೇಮಿಸುವ ಆಲೋಚನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಿಕೋಲಸ್ ಮಡುರೊ ಅಮೆರಿಕದ ವಶದಲ್ಲಿರುವುದರಿಂದ ವೆನೆಜುವೆಲಾದಿಂದ ಕ್ಯೂಬಾಗೆ ತೈಲ ಮತ್ತು ಹಣದ ಹರಿವು ನಿಲ್ಲುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಕ್ಯೂಬಾ ತನ್ನ ಮಿತ್ರ ರಾಷ್ಟ್ರವಾದ ವೆನೆಜುವೆಲಾದಿಂದ ಬಹಳ ಹಿಂದಿನಿಂದಲೂ ತೈಲವನ್ನು ಪಡೆಯುತ್ತಿದೆ. ವೆನೆಜುವೆಲಾದ ಮೇಲಿನ ಅಮೆರಿಕದ ನಿಯಂತ್ರಣದ ಲಾಭವನ್ನು ಪಡೆದುಕೊಂಡು ಟ್ರಂಪ್ ಈಗ ನಿರಂತರವಾಗಿ ಕ್ಯೂಬಾಗೆ ಬೆದರಿಕೆ ಹಾಕುತ್ತಿದ್ದಾರೆ. ಅವರು ಕ್ಯೂಬಾವನ್ನು ಅಮೆರಿಕದ ಪ್ರಭಾವಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 am, Fri, 30 January 26
