ಭಾರತದಿಂದ ವೈಮಾನಿಕ ದಾಳಿ ಭೀತಿ; ಪಾಕಿಸ್ತಾನದಿಂದ ಗಡಿಯಲ್ಲಿ ತುರ್ತು ಸೈರನ್ ಅಳವಡಿಕೆ
ಪಹಲ್ಗಾಮ್ ಉಗ್ರರ ದಾಳಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಭಾರತ ಪ್ರತಿಜ್ಞೆ ಮಾಡಿದೆ. ಪಾಕಿಸ್ತಾನದ ವಿರುದ್ಧ ಸಾಧ್ಯವಿರುವ ಎಲ್ಲ ಕಾರ್ಯತಂತ್ರಗಳನ್ನೂ ಹೆಣೆದಿರುವ ಭಾರತ ಜಲ, ವಾಯುಮಾರ್ಗ, ಭೂಮಾರ್ಗ, ಸಮುದ್ರಮಾರ್ಗ ಹೀಗೆ ಎಲ್ಲ ರೀತಿಯಿಂದಲೂ ಪಾಕಿಸ್ತಾನವನ್ನು ಲಾಕ್ ಮಾಡಿದೆ. ಭಾರತ ವಾಯುದಾಳಿ ನಡೆಸುವ ಭೀತಿಯ ನಡುವೆ ಪಾಕಿಸ್ತಾನವು ಖೈಬರ್ ಪಖ್ತುಂಖ್ವಾ ಜಿಲ್ಲೆಗಳಲ್ಲಿ ತುರ್ತು ಸೈರನ್‌ಗಳನ್ನು ಅಳವಡಿಸುತ್ತಿದೆ. ಈ ಮೂಲಕ ಸಂಭಾವ್ಯ ಯುದ್ಧಕ್ಕೆ ಪಾಕ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನವದೆಹಲಿ, ಮೇ 1: 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಎದುರಾಗಿದೆ. ಹೀಗಾಗಿ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ (ಕೆಪಿ) ಸರ್ಕಾರವು 29 ಜಿಲ್ಲೆಗಳಲ್ಲಿ ತುರ್ತು ಎಚ್ಚರಿಕೆ ಸೈರನ್‌ಗಳನ್ನು ಅಳವಡಿಸಲು ಪ್ರಾರಂಭಿಸಿದೆ. ಯಾವುದೇ ವೈಮಾನಿಕ ಬೆದರಿಕೆಗಳ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಲು ಮತ್ತು ಮಿಲಿಟರಿಯ ಮೇಲಾಗುವ ಅಪಾಯಗಳನ್ನು ತಗ್ಗಿಸಲು ಸೈರನ್‌ಗಳನ್ನು ಬಳಸಲಾಗುತ್ತದೆ. ಈ ಮೂಲಕ ಪಾಕಿಸ್ತಾನ ಭಾರತ ಯುದ್ಧ ಸಾರಬಹುದು ಎಂಬ ಭಯದಲ್ಲಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.
ನಾಗರಿಕ ರಕ್ಷಣಾ ನಿರ್ದೇಶನಾಲಯ ಹೊರಡಿಸಿದ ಅಧಿಕೃತ ನಿರ್ದೇಶನದ ಪ್ರಕಾರ, ಖೈಬರ್ ಪಖ್ತುಂಖ್ವಾದಲ್ಲಿರುವ ಎಲ್ಲಾ ಉಪ ಆಯುಕ್ತರು ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳಿಗೆ ತುರ್ತು ಎಚ್ಚರಿಕೆ ಸೈರನ್‌ಗಳನ್ನು ವಿಳಂಬವಿಲ್ಲದೆ ಅಳವಡಿಸಲು ಸೂಚಿಸಲಾಗಿದೆ. ಈ ಕುರಿತು ನಿಯಮಿತ ಪ್ರಗತಿ ವರದಿಗಳನ್ನು ಸಲ್ಲಿಸಲು ಅವರಿಗೆ ಸೂಚಿಸಲಾಗಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ತುರ್ತು ಎಚ್ಚರಿಕೆ ಸೈರನ್‌ಗಳನ್ನು ಪೇಶಾವರ್, ಅಬೋಟಾಬಾದ್, ಮರ್ದಾನ್, ಕೊಹತ್, ಸ್ವಾತ್, ಡೇರಾ ಇಸ್ಮಾಯಿಲ್ ಖಾನ್, ಬನ್ನು, ಮಲಕಂಡ್, ಲೋವರ್ ದಿರ್, ಲೋವರ್ ಚಿತ್ರಾಲ್, ಕುರ್ರಂ, ಚಾರ್ಸದ್ದಾ, ನೌಶೇರಾ, ಸ್ವಾಬಿ, ಬಜೌರ್, ಹರಿಪುರ್, ಮನ್ಸೆಹ್ರಾ, ಹಂಗು, ಮೊಹಮ್ಮದ್, ಅಪ್ಪರ್ ದಿರ್, ಶಾಂಗ್ಲಾ, ಬುನೇರ್, ಲಕ್ಕಿ ಮಾರ್ವಾತ್, ಖೈಬರ್, ಉತ್ತರ ವಜೀರಿಸ್ತಾನ್, ದಕ್ಷಿಣ ವಜೀರಿಸ್ತಾನ್, ಬಟ್ಟಗ್ರಾಮ್, ಟ್ಯಾಂಕ್ ಮತ್ತು ಒರಾಕ್ಜೈ ಸೇರಿದಂತೆ 29 ಜಿಲ್ಲೆಗಳಲ್ಲಿ ಕಾರ್ಯತಂತ್ರವಾಗಿ ಸೈರನ್ ಅಳವಡಿಸಲಾಗುವುದು.
ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕ್ ಸೇನಾ ಶಿಬಿರ ಧ್ವಂಸ, ಯುದ್ಧ ತಡೆಯಲು ಅಮೆರಿಕದ ಮೊರೆಹೋದ ಪಾಕ್; ಇಂದು ಏನೇನಾಯ್ತು?
ಈ ನಡುವೆ, ಪಾಕಿಸ್ತಾನ ಪ್ರಸಾರಕರ ಸಂಘ (ಪಿಬಿಎ) ಇಂದು ಪಾಕಿಸ್ತಾನ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ನಿಷೇಧಿಸಿದೆ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು 26 ಜನರು ಸಾವನ್ನಪ್ಪಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಬಲವಾದ ಕ್ರಮಗಳನ್ನು ತೆಗೆದುಕೊಂಡಿದೆ. ಅದಕ್ಕೆ ಪ್ರತಿಯಾಗಿ ಭಾರತ ಕೂಡ ಎಫ್ಎಂನಲ್ಲಿ ಬಾಲಿವುಡ್ ಹಾಡುಗಳ ಪ್ರಸಾರವನ್ನು ನಿಷೇಧಿಸಿದೆ.
ಇದನ್ನೂ ಓದಿ: ಭಾರತದ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ ಎಫ್‌ಎಂ ರೇಡಿಯೋ ಸ್ಟೇಷನ್ಸ್
ಹಾಗೇ, ಪಾಕಿಸ್ತಾನವು ಚೀನಾದ ಹೊವಿಟ್ಜರ್‌ಗಳನ್ನು ತನ್ನ ಸೇನೆಗೆ ಸೇರಿಸಿಕೊಂಡಿದೆ. ಭಾರತದ ಗಡಿಯ ಬಳಿ ಪೂರ್ಣ ಯುದ್ಧ ನೌಕಾಪಡೆಯೊಂದಿಗೆ ಪಾಕಿಸ್ತಾನ ಕವಾಯತುಗಳನ್ನು ನಡೆಸುತ್ತಿದೆ. ಪಾಕಿಸ್ತಾನಿ ಸೇನೆಯು ಭಾರತದ ಗಡಿಯಲ್ಲಿ ತನ್ನ ನಿಯೋಜನೆಯನ್ನು ತೀವ್ರಗೊಳಿಸಿದೆ, ಸುಧಾರಿತ ಶಸ್ತ್ರಾಸ್ತ್ರಗಳನ್ನು ಇರಿಸಿದೆ ಮತ್ತು ಬಲ ಪ್ರದರ್ಶನವಾಗಿ ವ್ಯಾಪಕ ಮಿಲಿಟರಿ ಪ್ರಾಕ್ಟೀಸ್ಗಳನ್ನು ನಡೆಸುತ್ತಿದೆ. ಪಾಕಿಸ್ತಾನ ಸೇನೆಯ ಫಿರಂಗಿ ರೆಜಿಮೆಂಟ್‌ಗಳು ಭಾರತೀಯ ಗಡಿಗಳ ಬಳಿ ಬೃಹತ್ ಗುಂಡಿನ ಶಕ್ತಿಯನ್ನು ಪ್ರದರ್ಶಿಸುತ್ತವೆ. ಭಾರತದೊಂದಿಗೆ ಸಂಘರ್ಷ ಹೆಚ್ಚುತ್ತಿರುವ ನಡುವೆಯೂ ಪಾಕಿಸ್ತಾನವು ಸಿಯಾಲ್‌ಕೋಟ್, ನರೋವಾಲ್, ಜಫರ್ವಾಲ್ ಮತ್ತು ಶಕರ್‌ಗಢದಲ್ಲಿ ದೊಡ್ಡ ಪ್ರಮಾಣದ ಭೂಸೇನಾ ಕವಾಯತುಗಳನ್ನು ನಡೆಸುತ್ತಿದೆ. ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ದೊಡ್ಡ-ಕ್ಯಾಲಿಬರ್ ಶಸ್ತ್ರಾಸ್ತ್ರಗಳು ಸೇರಿದಂತೆ ಟ್ಯಾಂಕ್‌ಗಳು, ಫಿರಂಗಿ ಮತ್ತು ಕಾಲಾಳುಪಡೆಗಳನ್ನು ಈ ಪ್ರಾಕ್ಟೀಸ್ ಒಳಗೊಂಡಿವೆ. ಪಾಕಿಸ್ತಾನ ಸೇನಾ ಮುಖ್ಯಸ್ಥರ ಸಮ್ಮುಖದಲ್ಲೇ ಈ ಪ್ರಾಕ್ಟೀಸ್ ನಡೆದಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರು ಕವಾಯತನ್ನು ಮೇಲ್ವಿಚಾರಣೆ ಮಾಡಲು ಟಿಲ್ಲಾ ಶ್ರೇಣಿಗಳಿಗೆ ಭೇಟಿ ನೀಡಿದರು. ಇದು ಮಂಗ್ಲಾ ಸ್ಟ್ರೈಕ್ ಕಾರ್ಪ್ಸ್ ಯುದ್ಧ ಸಿದ್ಧತೆ, ಜಂಟಿ ಕಾರ್ಯಾಚರಣೆಗಳು ಮತ್ತು ಸುಧಾರಿತ ಶಸ್ತ್ರಾಸ್ತ್ರಗಳನ್ನು ಯುದ್ಧಭೂಮಿಯಂತಹ ಪರಿಸ್ಥಿತಿಗಳಲ್ಲಿ ಪರೀಕ್ಷಿಸುವ ತೀವ್ರವಾದ ವ್ಯಾಯಾಮವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








