
ಮಿಚಿಗನ್, ಸೆಪ್ಟೆಂಬರ್ 18: ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿದ್ದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ನ ಎಫ್-16 ಯುದ್ಧ ವಿಮಾನವೊಂದು ಗುರುವಾರ ಹಠಾತ್ ಪತನಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಪೈಲಟ್ ಎಜೆಕ್ಟ್ (Eject) ಆಗುವ ಮೂಲಕ ಪ್ಯಾರಾಚೂಟ್ ನೆರವಿನಿಂದ ಸುರಕ್ಷಿತವಾಗಿ ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಬಳಿ ಈ ದುರ್ಘಟನೆ ಸಂಭವಿಸಿದ್ದು, ಪತನದ ಸ್ಥಳದಲ್ಲಿ ಭಾರಿ ಬೆಂಕಿ ಮತ್ತು ಸ್ಫೋಟಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲು ತುರ್ತು ನಿರ್ವಹಣಾ ಪಡೆ ಆದೇಶಿಸಿದೆ.
ಟೆಕ್ಸಾಸ್ನ 149ನೇ ಫೈಟರ್ ವಿಂಗ್ ಘಟಕಕ್ಕೆ ಸೇರಿದ ಈ ವಿಮಾನ ಪತನಗೊಂಡ ತಕ್ಷಣವೇ ಪೈಲಟ್ ವಿಮಾನದಿಂದ ಯಶಸ್ವಿಯಾಗಿ ಹೊರಹಾರಿದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಡೆಟ್ರಾಯಿಟ್ನಿಂದ ಉತ್ತರಕ್ಕೆ 305 ಕಿ.ಮೀ ದೂರದಲ್ಲಿರುವ ಆಲ್ಪೆನಾ ರಾಷ್ಟ್ರೀಯ ಗಾರ್ಡ್ ನೆಲೆಯಿಂದ ಈ ತಾಲೀಮು ನಡೆಯುತ್ತಿತ್ತು. ಟ್ರಾವರ್ಸ್ ಸಿಟಿ ಬಳಿ ವಿಮಾನ ಪತನವಾದಾಗ ಕಾರುಗಳು ಡಿಕ್ಕಿಯಾದಂತಹ ಭಾರಿ ಸದ್ದು ಕೇಳಿಬಂದಿದೆ.
ವಿಮಾನ ಪತನದಿಂದ ಹೊಗೆ ಮತ್ತು ಸ್ಫೋಟ ಮುಂದುವರಿದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶಕ್ಕೆ ಸ್ಥಳಾಂತರ ಆದೇಶ ನೀಡಲಾಗಿದೆ. ಘಟನೆಗೆ ನಿಖರ ತಾಂತ್ರಿಕ ಕಾರಣವೇನು ಎಂಬುದರ ಕುರಿತು ಯುಎಸ್ ವಾಯುಪಡೆ ಉನ್ನತ ಮಟ್ಟದ ತನಿಖೆ ಆರಂಭಿಸಿದೆ.
ಮತ್ತಷ್ಟು ಓದಿ:ಎಂಜಿನ್ನಲ್ಲಿ ತಾಂತ್ರಿಕ ದೋಷ: ಜೈಪುರದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್, ತಪ್ಪಿದ ಭಾರಿ ಅನಾಹುತ
ಎಫ್-16 ಯುದ್ಧ ವಿಮಾನದ ಇತಿಹಾಸ: ಅಮೆರಿಕ ಸೇನೆಯು 1979 ರಲ್ಲಿ ಮೊದಲ ಬಾರಿಗೆ ಎಫ್-16 ‘ಫೈಟಿಂಗ್ ಫಾಲ್ಕನ್’ ವಿಮಾನಗಳನ್ನು ನಿಯೋಜಿಸಿತು. ಇದು ವಿಶ್ವದ ಅತ್ಯಂತ ಜನಪ್ರಿಯ ಮತ್ತು ಚುರುಕಾದ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಪ್ರಸ್ತುತ ಹಲವಾರು ದೇಶಗಳ ವಾಯುಪಡೆಗಳಲ್ಲಿ ಬಳಕೆಯಲ್ಲಿದೆ.
ವಿಡಿಯೋ
ವಾಯುಪಡೆಯ ಸುರಕ್ಷತಾ ಕೇಂದ್ರದ ಅಂಕಿಅಂಶಗಳ ಪ್ರಕಾರ, 2000ನೇ ಇಸವಿಯಿಂದ ಈವರೆಗೆ ಎಫ್-16 ವಿಮಾನಗಳಿಗೆ ಸಂಬಂಧಿಸಿದಂತೆ ಕನಿಷ್ಠ 14 ಕ್ಕೂ ಹೆಚ್ಚು ‘ವರ್ಗ ಎ’ ಅಪಘಾತಗಳು ದಾಖಲಾಗಿವೆ. ಈ ಹಿಂದೆಯೂ ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ‘ಥಂಡರ್ಬರ್ಡ್ಸ್’ ಸ್ಕ್ವಾಡ್ರನ್ನ ಎಫ್-16ಸಿ ಜೆಟ್ ಅಪಘಾತಕ್ಕೀಡಾಗಿತ್ತು, ಅಂದೂ ಕೂಡ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿ ಪಾರಾಗಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ