ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಫೇಸ್‌ಬುಕ್ ಮಾತೃಸಂಸ್ಥೆ ಮೆಟಾವನ್ನೂ ಸೇರಿಸಿದ ರಷ್ಯಾ!
ಕಳೆದ ಮಾರ್ಚ್‌ನಲ್ಲಿ ರಷ್ಯಾ ಸರ್ಕಾರವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿರ್ಬಂಧ ಹೇರಿತ್ತು.
ಮಾಸ್ಕೋ: ಪ್ರಮುಖ ಸಾಮಾಜಿಕ ಜಾಲತಾಣದ ಸಂಸ್ಥೆಯಾದ ಫೇಸ್ಬುಕ್ನ (Facebook) ಮಾತೃಸಂಸ್ಥೆಯಾದ ಮೆಟಾ (Meta) ಸಂಸ್ಥೆಯನ್ನು ಭಯೋತ್ಪಾದಕ ಮತ್ತು ತೀವ್ರಗಾಮಿ ಸಂಘಟನೆ ಎಂದು ಘೋಷಿಸಿದೆ. ಉಕ್ರೇನ್ (Ukraine) ಮೇಲೆ ರಷ್ಯಾ (Russia) ಯುದ್ಧ ಸಾರಿದ್ದು, ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ನೆಟ್ಟಿಗರು ಉಕ್ರೇನ್ಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ರಷ್ಯಾ ಮೆಟಾಗೆ ಭಯೋತ್ಪಾದಕ ಸಂಸ್ಥೆಯೆಂಬ ಪಟ್ಟ ಕಟ್ಟಿದೆ.
ಕಳೆದ ಮಾರ್ಚ್‌ನಲ್ಲಿ ರಷ್ಯಾ ಸರ್ಕಾರವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿರ್ಬಂಧ ಹೇರಿತ್ತು. ಮಾಸ್ಕೋ ನ್ಯಾಯಾಲಯವು ಮಾರ್ಕ್ ಜುಕರ್‌ಬರ್ಗ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಉಗ್ರಗಾಮಿ ಚಟುವಟಿಕೆಯೆಂದು ಆರೋಪಿಸಿತ್ತು. ಇದು ಉಕ್ರೇನ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ರಷ್ಯನ್ನರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುವ ವಿಷಯವನ್ನು ಪೋಸ್ಟ್ ಮಾಡಲು ಅವಕಾಶ ನೀಡುತ್ತಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ: ಕೈವ್ನಲ್ಲಿ ರಷ್ಯಾದಿಂದ ವೈಮಾನಿಕ ದಾಳಿ; ಉಕ್ರೇನ್ನ ಭಾರತೀಯ ನಿವಾಸಿಗಳಿಗೆ ಎಚ್ಚರದಿಂದಿರಲು ರಾಯಭಾರ ಕಚೇರಿ ಸೂಚನೆ
ನಂತರ ಮೆಟಾ ಪರ ವಕೀಲರು ಆ ಆರೋಪಗಳನ್ನು ತಿರಸ್ಕರಿಸಿದ್ದರು. ಹಾಗೇ, ಮೆಟಾ ಸಂಸ್ಥೆ ಎಂದಿಗೂ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ. ಏಪ್ರಿಲ್ನಲ್ಲಿ ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರನ್ನು ರಷ್ಯಾಕ್ಕೆ ಪ್ರವೇಶ ಮಾಡದಂತೆ ರಷ್ಯಾದ ವಿದೇಶಾಂಗ ಇಲಾಖೆ ನಿರ್ಬಂಧ ವಿಧಿಸಿತ್ತು. ಮಾರ್ಕ್ ಝುಕರ್ ಬರ್ಗ್ ಮಾತ್ರವಲ್ಲದೆ ಅವರಂತೆಯೇ ಅತಿ ಗಣ್ಯರೆನಿಸಿಕೊಂಡ ಒಟ್ಟು 7 ಮಂದಿಗೆ ರಷ್ಯಾ ಪ್ರವೇಶಿಸದಿರುವಂತೆ ನಿರ್ಬಂಧ ಹೇರಲಾಗಿತ್ತು.
#BREAKING Russia adds Meta to list of ‘terrorist and extremist’ organisations pic.twitter.com/sWCF0x6sFL
— AFP News Agency (@AFP) October 11, 2022
ಫೆಬ್ರವರಿ 24ರಂದು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಸಂಪೂರ್ಣ ಆಕ್ರಮಣವನ್ನು ಪ್ರಾರಂಭಿಸಿತ್ತು. ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವಿನ ಹೋರಾಟವು ಶಾಂತಿಯ ಯಾವುದೇ ಲಕ್ಷಣಗಳಿಲ್ಲದೆ 9ನೇ ತಿಂಗಳಿಗೆ ಪ್ರವೇಶಿಸಿದೆ. ದ್ನಿಪ್ರೊಪೆಟ್ರೋವ್ಸ್ಕ್‌ನ ಮಧ್ಯ ಉಕ್ರೇನ್ ಪ್ರದೇಶದ ಮೇಲೆ ಮಂಗಳವಾರ ರಷ್ಯಾದ ಮುಷ್ಕರಗಳು ಇಂಧನ ಸೌಲಭ್ಯಗಳಿಗೆ ಗಂಭೀರ ಹಾನಿಯನ್ನುಂಟುಮಾಡಿದೆ. ಇತ್ತ ಉಕ್ರೇನ್ ಕೂಡ ರಷ್ಯಾದ ಮೇಲೆ ಪ್ರತಿದಾಳಿಯನ್ನು ಮುಂದುವರೆಸಿದೆ.
ಇದನ್ನೂ ಓದಿ: Russia-Ukraine War: ಕ್ಷಿಪಣಿ ದಾಳಿ ನಡೆಸಿದ ರಷ್ಯಾ ಭಯೋತ್ಪಾದಕ ದೇಶ; ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಖಂಡನೆ
ಇದೀಗ ರಷ್ಯಾ ತನ್ನ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಮೆಟಾವನ್ನು ಸೇರಿಸಿದೆ. ಉಕ್ರೇನ್ ವಿರುದ್ಧ ರಷ್ಯಾ ತನ್ನ ಮಿಲಿಟರಿ ದಾಳಿಯನ್ನು ಹೆಚ್ಚಿಸಿದ ನಂತರ ಈ ಘೋಷಣೆ ಮಾಡಲಾಗಿದೆ. ಸೋಮವಾ ರಷ್ಯಾ ಹಲವಾರು ಉಕ್ರೇನಿಯನ್ ನಗರಗಳ ಮೇಲೆ ಬಾಂಬ್ ಸ್ಫೋಟಿಸಿ, ನಾಗರಿಕರನ್ನು ಕೊಂದಿತ್ತು.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ Facebook, Instagram, WhatsApp ಮತ್ತು Facebook Messenger ಎಲ್ಲವೂ ಮೆಟಾ ಸಂಸ್ಥೆಯ ಒಡೆತನದಲ್ಲಿದೆ. ಮೆಟಾದ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಎರಡು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಈಗಾಗಲೇ ರಷ್ಯಾದಲ್ಲಿ ನಿಷೇಧಿಸಲಾಗಿತ್ತು. ಕೊನೆಗೆ ವಾಟ್ಸಾಪ್ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗಿತ್ತು.