ಪಾಕಿಸ್ತಾನಕ್ಕೆ ನೆರವು ಬೇಡ: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಅಬ್ದುಲ್ ಎಲ್-ಸಯೀದ್ ಆಗ್ರಹ

ಅಮೆರಿಕದ ಸೆನೆಟರ್ ಅಬ್ದುಲ್ ಎಲ್-ಸಯೀದ್ ಅವರು ಪಾಕಿಸ್ತಾನಕ್ಕೆ ಅಮೆರಿಕ ನೀಡುವ ಆರ್ಥಿಕ ಮತ್ತು ಮಿಲಿಟರಿ ನೆರವಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಅಮೆರಿಕದ ತೆರಿಗೆದಾರರ ಹಣವನ್ನು ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಸ್ರೇಲ್ ದೇಶಕ್ಕೆ ಮಿಲಿಟರಿ ನೆರವು ಸ್ಥಗಿತಗೊಳಿಸುವ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಸ್ವಾಗತಿಸುತ್ತಾ ಅವರು ಪಾಕಿಸ್ತಾನ ವಿರುದ್ಧವೂ ಟೀಕೆ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ನೆರವು ಬೇಡ: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಅಬ್ದುಲ್ ಎಲ್-ಸಯೀದ್ ಆಗ್ರಹ
ಅಮೆರಿಕದ ಸೆನೆಟರ್ ಅಬ್ದುಲ್ ಎಲ್ ಸಯೀದ್
Image Credit source: Screenshot of ABC news video

Updated on: Nov 08, 2026 | 7:33 PM

ಮಿಷಿಗನ್, ನವೆಂಬರ್ 8: ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಎನಿಸಿರುವ ಅಬ್ದುಲ್ ಎಲ್-ಸಯೀದ್ (Abdul El-Sayed) ಅವರು ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿರುವ ವಿದೇಶಿ ನೆರವಿನ (US aid to Pakistan) ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಅಮೆರಿಕದ ನಾಗರಿಕರು ಪಾವತಿಸುವ ತೆರಿಗೆ ಹಣವನ್ನು ಬಳಸಿ ಪಾಕಿಸ್ತಾನಕ್ಕೆ ನೀಡಲಾಗುವ ನೆರವು ದುರುಪಯೋಗವಾಗುತ್ತಿದೆ. ಈ ಹಣ ಬಳಸಿ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Loading...

ಇಸ್ರೇಲ್ ದೇಶಕ್ಕೆ ವಾರ್ಷಿಕವಾಗಿ ನೀಡಲಾಗುತ್ತಿರುವ 4 ಬಿಲಿಯನ್ ಡಾಲರ್ ಮಿಲಿಟರಿ ನೆರವನ್ನು ಈ ವರ್ಷಕ್ಕೇ ಅಂತ್ಯಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಎಲ್-ಸಯೀದ್ ಅವರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ‘ಎಲ್ಲಾ ಡಾಟ್ ಹೆಡ್​ಗಳನ್ನು ದೇಶಬಿಟ್ಟು ಕಳುಹಿಸಿ’: ಅಮೆರಿಕದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ವಿರುದ್ಧ ಘೋಷಣೆ

‘ಈ ವಿಚಾರದಲ್ಲಿ ಟ್ರಂಪ್ ನೀತಿ ಸರಿ ಇದೆ. ಇದು ಇಸ್ರೇಲ್​ನದ್ದೊಂದೇ ವಿಷಯ ಅಲ್ಲ. ನನ್ನ ಕುಟುಂಬದ ಮೂಲವಾದ ಈಜಿಪ್ಟ್ ಬಗ್ಗೆಯೂ ನನ್ನದು ಇದೇ ಭಾವನೆ. ಪಾಕಿಸ್ತಾನ, ಜೋರ್ಡನ್ ದೇಶಗಳ ವಿಚಾರದಲ್ಲೂ ನನ್ನ ನಿಲುವು ಇದೆಯೇ ಆಗಿರುತ್ತದೆ. ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸುವ ದೇಶಗಳನ್ನು ಬೆಂಬಲಿಸಲು ಅಮೆರಿಕದ ತೆರಿಗೆಪಾವತಿದಾರರ ಹಣವು ಬಳಕೆಯಾಗಬಾರದು’ ಎಂದು ಅಬ್ದುಲ್ ಎಲ್ ಸಯೆದ್ ಹೇಳಿದ್ಧಾರೆ.

ವಿದೇಶಾಂಗ ನೀತಿಯಲ್ಲಿ ಕಠಿಣ ನಿಲುವು

ಅಮೆರಿಕದ ವಿದೇಶಾಂಗ ನೆರವು ನೀತಿಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಇದು ಗ್ರಾಸವಾಗಿದ್ದು, ಭವಿಷ್ಯದಲ್ಲಿ ಅಮೆರಿಕದ ಶಾಸಕಾಂಗದಲ್ಲಿ ಈ ಬಗ್ಗೆ ಕಠಿಣ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಹಾಭಾರತದಿಂದ ಅರ್ಥಶಾಸ್ತ್ರದವರೆಗೆ: ಯುನೆಸ್ಕೋ ಪಟ್ಟಿಗೆ ಸೇರಿದ ಭಾರತದ ಮೂರು ಪ್ರಾಚೀನ ಗ್ರಂಥಗಳು

ಈಜಿಪ್ಟ್ ಮೂಲದ ಅಬ್ದುಲ್ ಎಲ್-ಸಯೆದ್ ಅವರು ಮಿಷಿಗನ್​ನಿಂದ ಸೆನೇಟ್​ಗೆ ಚುನಾಯಿತರಾಗಿದ್ದಾರೆ. ನಮ್ಮಲ್ಲಿ ರಾಜ್ಯಸಭೆಯಂತೆ ಅಮೆರಿಕದಲ್ಲಿ ಸೆನೇಟ್ ಮೇಲ್ಮನೆಯಾಗಿದೆ. ಎಲ್-ಸಯೀದ್ ಅವರ ಪತ್ನಿಯು ಭಾರತ ಮೂಲದವರಾಗಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us