ಯುವತಿ ಮೇಲೆ ಮೊಸಳೆ ಭೀಕರ ದಾಳಿ, ಪ್ರೇಯಸಿಯನ್ನು ಬಚಾವ್ ಮಾಡಲು ಹೋರಾಡಿದ ಪ್ರಿಯಕರ, ಆದ್ರೂ ಉಳೀಲಿಲ್ಲ ಜೀವ

ಫ್ಲೋರಿಡಾದಲ್ಲಿ ಬ್ರಿಟಾನಿ ಕ್ಲಾರ್ಕ್ ಮೊಸಳೆ ದಾಳಿಗೆ ಬಲಿಯಾದ ದುರಂತ ಘಟನೆ. ಆಕೆಯ ಪ್ರಿಯಕರ ಜೀವದ ಹಂಗು ತೊರೆದು ರಕ್ಷಿಸಲು ಹೋರಾಡಿದರೂ, ತೀವ್ರ ರಕ್ತಸ್ರಾವದಿಂದ ಯುವತಿ ಮೃತಪಟ್ಟಿದ್ದಾರೆ. ದಾಳಿ ನಡೆಸಿದ ಎರಡು ಬೃಹತ್ ಮೊಸಳೆಗಳನ್ನು ಸೆರೆಹಿಡಿಯಲಾಗಿದೆ. ಮೊಸಳೆಗಳ ಸಂತಾನೋತ್ಪತ್ತಿ ಅವಧಿಯಲ್ಲಿ ನದಿ, ಸರೋವರಗಳ ಬಳಿ ಜನರು ಜಾಗರೂಕರಾಗಿರಬೇಕು ಎಂದು ವನ್ಯಜೀವಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಯುವತಿ ಮೇಲೆ ಮೊಸಳೆ ಭೀಕರ ದಾಳಿ, ಪ್ರೇಯಸಿಯನ್ನು ಬಚಾವ್ ಮಾಡಲು ಹೋರಾಡಿದ ಪ್ರಿಯಕರ, ಆದ್ರೂ ಉಳೀಲಿಲ್ಲ ಜೀವ
ಬ್ರಿಟಾನಿ

Updated on: Jul 02, 2026 | 12:26 PM

ಒರ್ಲ್ಯಾಂಡೊ, ಜುಲೈ 02: ಅಮೆರಿಕದ ಫ್ಲೋರಿಡಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಈಜಲು ಹೋದ 31 ವರ್ಷದ ಯುವತಿಯೊಬ್ಬರು ಬೃಹತ್ ಮೊಸಳೆಯ (ಅಲಿಗೇಟರ್) ಭೀಕರ ದಾಳಿಗೆ ಬಲಿಯಾಗಿದ್ದಾರೆ. ಪ್ರೇಯಸಿಯನ್ನು ಮೊಸಳೆಯ ಬಾಯಿಂದ ಬಿಡಿಸಲು ಆಕೆಯ ಪ್ರಿಯಕರ ಪ್ರಾಣದ ಹಂಗು ತೊರೆದು ಹೋರಾಡಿದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.

ಬ್ರಿಟಾನಿ ಕ್ಲಾರ್ಕ್ ಎಂಬ ಯುವತಿ ಜೂನ್ 28 ರ ಭಾನುವಾರ ತನ್ನ ಗೆಳೆಯ ಚಾನ್ಸ್ ಆಲಿಸನ್ ಮತ್ತು ಮತ್ತೊಬ್ಬ ಆತ್ಮೀಯ ಸ್ನೇಹಿತನೊಂದಿಗೆ ಒರ್ಲ್ಯಾಂಡೊ ನಗರದ ಸಮೀಪವಿರುವ ‘ಲಿಟಲ್ ಬಿಗ್ ಎಕಾನ್ ಸ್ಟೇಟ್ ಫಾರೆಸ್ಟ್’ ಕಾಡಿಗೆ ಪಾದಯಾತ್ರೆ ಹೋಗಿದ್ದರು. ಅಲ್ಲಿನ ಎಕಾನ್ಲಾಕ್‌ಹ್ಯಾಚೀ ನದಿಯ ಕೇವಲ ಮೂರು ಅಡಿ ಆಳದ ನೀರಿನಲ್ಲಿ ಇವರು ಈಜುತ್ತಿದ್ದಾಗ, ದೈತ್ಯ ಮೊಸಳೆಯೊಂದು ಇದ್ದಕ್ಕಿದ್ದಂತೆ ಬ್ರಿಟಾನಿ ಮೇಲೆ ದಾಳಿ ಮಾಡಿದೆ.

ಮೊಸಳೆಯು ಯುವತಿಯ ಒಂದು ತೋಳನ್ನು ಕಚ್ಚಿ ಹಿಡಿದು, ನೀರೊಳಗೆ ಬೇಟೆಯನ್ನು ಮಲಗಿಸುವ ತನ್ನ ಪ್ರಸಿದ್ಧ ‘ಡೆತ್ ರೋಲ್’ (ಸುತ್ತು ಹೊಡೆಯುವ ತಂತ್ರ) ಆರಂಭಿಸಿದೆ. ಈ ವೇಳೆ ಬ್ರಿಟಾನಿ ಮತ್ತು ಆಕೆಯನ್ನು ರಕ್ಷಿಸಲು ಹೋದ ಗೆಳೆಯ ಆಲಿಸನ್ ಇಬ್ಬರೂ ನೀರೊಳಗೆ ಎಳೆಯಲ್ಪಟ್ಟಿದ್ದಾರೆ.

ಗೆಳೆಯ ಆಲಿಸನ್ ಧೈರ್ಯ ಮಾಡಿ ಮೊಸಳೆಯ ಬಾಯಿಂದ ಬ್ರಿಟಾನಿಯ ಒಂದು ಕೈಯನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಆದರೆ, ಕ್ರೂರ ಮೊಸಳೆ ತಕ್ಷಣವೇ ಆಕೆಯ ಇನ್ನೊಂದು ತೋಳನ್ನು ಕಚ್ಚಿ ಹಿಡಿಯಿತು. ಘಟನೆಯ ನಂತರ ರಕ್ಷಣಾ ಪಡೆಗೆ (911) ಮಾಡಿದ ಫೋನ್ ಕರೆಯಲ್ಲಿ ಅಲ್ಲಿನ ಭೀಕರತೆ ಸೆರೆಯಾಗಿದೆ.

ಮತ್ತಷ್ಟು ಓದಿ: Video: ಕೊಳದಿಂದ ಮೊಸಳೆಯನ್ನು ಎತ್ತಿ ಬಿಸಾಕಿದ ಆನೆ; ವಿಡಿಯೋ ನೋಡಿ

ಕೊನೆಗೂ ಮೊಸಳೆ ಹಿಡಿತ ಸಡಿಲಗೊಳಿಸಿದಾಗ ಆಲಿಸನ್ ಬ್ರಿಟಾನಿಳನ್ನು ನದಿಯ ದಡಕ್ಕೆ ಎಳೆದುಕೊಂಡು ಬಂದು ಉಸಿರಾಟ (CPR) ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲೇ ಆಕೆಯ ಎರಡೂ ತೋಳುಗಳು ಭೀಕರವಾಗಿ ಹಾನಿಗೊಳಗಾಗಿದ್ದವು.

ಘಟನೆಯ ನಂತರ ಫ್ಲೋರಿಡಾ ವನ್ಯಜೀವಿ ಸಂರಕ್ಷಣಾ ಆಯೋಗ (FWC) ತಕ್ಷಣವೇ ಕಾರ್ಯಪ್ರವೃತ್ತರಾಗಿ ಆ ನದಿಯ ವಲಯದಿಂದ 12 ಅಡಿ ಮತ್ತು 13 ಅಡಿ ಉದ್ದದ ಎರಡು ಬೃಹತ್ ಮೊಸಳೆಗಳನ್ನು ಸೆರೆಹಿಡಿದಿದೆ. ಯುವತಿಯ ಮೇಲೆ ದಾಳಿ ಮಾಡಿದ್ದು ಇದೇ ಪ್ರಾಣಿಯೇ ಎಂದು ಪತ್ತೆಹಚ್ಚಲು ಅವುಗಳ ಡಿಎನ್‌ಎ (DNA) ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿಯಾಗಲಿ ಅಥವಾ ಆಕೆಯ ಸ್ನೇಹಿತರಾಗಲಿ ಮೊಸಳೆಯನ್ನು ಕೆರಳಿಸಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ ತಿಂಗಳಿನಿಂದ ಮೊಸಳೆಗಳ ಸಂತಾನೋತ್ಪತ್ತಿಯ ಅವಧಿ ಆರಂಭವಾಗುವುದರಿಂದ, ಈ ದಿನಗಳಲ್ಲಿ ಅವು ಅತ್ಯಂತ ಕ್ರಿಯಾಶೀಲ ಹಾಗೂ ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದೇ ಸಮಯದಲ್ಲಿ ನದಿಯಲ್ಲಿ ನೀರಿನ ಮಟ್ಟ ತುಂಬಾ ಕಡಿಮೆಯಿದ್ದಿದ್ದರಿಂದ ಮತ್ತು ಪ್ರಾಣಿಗಳ ಪ್ರಾದೇಶಿಕ ನಡವಳಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಫ್ಲೋರಿಡಾದ ಸರೋವರ ಮತ್ತು ನದಿಗಳ ಸುತ್ತ ಇಂತಹ ಹಲವು ಘಟನೆಗಳು ವರದಿಯಾಗುತ್ತಿದ್ದು, ಸಿಹಿನೀರಿನ ಜಲಮೂಲಗಳ ಬಳಿ ಜನರು ತೀವ್ರ ಜಾಗರೂಕರಾಗಿರಬೇಕು ಎಂದು ವನ್ಯಜೀವಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us