ಸ್ವಿಮ್ಮಿಂಗ್ ಪೂಲ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣ ಉಳಿಸಿದ ಕಸ್ಟಮ್ಸ್​ ಜಾರಿ ಅಧಿಕಾರಿ

ಫ್ಲೋರಿಡಾದ ಈಜುಕೊಳದಲ್ಲಿ ಪ್ರಜ್ಞಾಹೀನನಾಗಿದ್ದ ಆರು ವರ್ಷದ ಬಾಲಕನನ್ನು ಅಮೆರಿಕದ ICE ಅಧಿಕಾರಿ ಗ್ರೆಗೊರಿ ಸಿಮಂಡ್ಸ್ ಧೈರ್ಯದಿಂದ ರಕ್ಷಿಸಿದರು. ತಕ್ಷಣವೇ ನೀರಿಗೆ ಜಿಗಿದು, ಬಾಲಕನಿಗೆ CPR ನೀಡಿ ಜೀವ ಉಳಿಸಿದರು. ಈ ಸಾಹಸಮಯ ಕಾರ್ಯದಿಂದ ಬಾಲಕ ಗುಣಮುಖನಾಗಿದ್ದು, ಅಧಿಕಾರಿಯ ನಿಸ್ವಾರ್ಥ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸ್ವಿಮ್ಮಿಂಗ್ ಪೂಲ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣ ಉಳಿಸಿದ ಕಸ್ಟಮ್ಸ್​ ಜಾರಿ ಅಧಿಕಾರಿ
ಸ್ವಿಮ್ಮಿಂಗ್ ಪೂಲ್ -ಸಾಂದರ್ಭಿಕ ಚಿತ್ರ
Image Credit source: Districts

Updated on: Jun 18, 2026 | 12:52 PM

ಫ್ಲೋರಿಡಾ, ಜೂನ್ 18: ಸ್ವಿಮ್ಮಿಂಗ್​ ಪೂಲ್​(Swimming Pool)ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ಆರು ವರ್ಷದ ಬಾಲಕನನ್ನು ಅಮೆರಿಕದ ಕಸ್ಟಮ್ಸ್​ ಜಾರಿ ಅಧಿಕಾರಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ಪಾಸ್ಕೊ ಕೌಂಟಿಯ ಈಜುಕೊಳದಲ್ಲಿ ಮುಳುಗಿದ್ದ ಬಾಲಕ ಪ್ರಜ್ಞಾಹೀನನಾಗಿ ತೇಲುತ್ತಿದ್ದ. ಅದೇ ಪೂಲ್ ಬಳಿ ಇದ್ದ ಐಸಿಇ ಅಧಿಕಾರಿ ಗ್ರೆಗೊರಿ ಸಿಮಂಡ್ಸ್ ಇದನ್ನು ಗಮನಿಸಿದ್ದಾರೆ, ಬಾಲಕ ಸಂಕಷ್ಟದಲ್ಲಿರುವುದನ್ನು ಕಂಡ ತಕ್ಷಣ ಅವರು ಸೆಕೆಂಡ್ ಕೂಡ ಯೋಚಿಸದೆ, ಧರಿಸಿದ್ದ ಬಟ್ಟೆ ಹಾಗೂ ಶೂಗಳೊಂದಿಗೇ ನೇರವಾಗಿ ನೀರಿಗೆ ಜಿಗಿದಿದ್ದಾರೆ.

ಬಾಲಕನನ್ನು ನೀರಿನಿಂದ ಹೊರತೆಗೆದ ಸಿಮಂಡ್ಸ್, ಅದಕ್ಕೆ ಪ್ರಜ್ಞೆ ಬರುವವರೆಗೂ ನಿರಂತರವಾಗಿ ಸಿಪಿಆರ್ (ಕೃತಕ ಉಸಿರಾಟ) ನೀಡಿದ್ದಾರೆ. ತಕ್ಷಣದ ಈ ಚಿಕಿತ್ಸೆಯಿಂದಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈಗ ಸಂಪೂರ್ಣ ಗುಣಮುಖವಾಗಿದ್ದಾನೆ.

ಈ ಧೈರ್ಯದ ಕೆಲಸಕ್ಕೆ ಫೆಡರಲ್ ಮತ್ತು ಸ್ಥಳೀಯ ಅಧಿಕಾರಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಧಿಕಾರಿ ಸಿಮಂಡ್ಸ್ ಅವರ ನಿಸ್ವಾರ್ಥತೆ ಮತ್ತು ಧೈರ್ಯದ ನಿರ್ಧಾರವೇ ಮಗುವಿನ ಜೀವ ಉಳಿಸಿದೆ.

ವಿಡಿಯೋ

ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಲಸೆ ಬಂಧನ ನೀತಿಗಳಿಗಾಗಿ ಐಸಿಇ ಸಂಸ್ಥೆಯು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಗೃಹ ಭದ್ರತಾ ಇಲಾಖೆಯ ಹಂಗಾಮಿ ಸಹಾಯಕ ಕಾರ್ಯದರ್ಶಿ ಲಾರೆನ್ ಬಿಸ್ ಮಾತನಾಡಿ, ನಮ್ಮ ಅಧಿಕಾರಿಗಳು ಕೆಟ್ಟ ಅಪರಾಧಿಗಳನ್ನು ಹಿಡಿಯಲು ಪ್ರಾಣ ಪಣಕ್ಕಿಡುತ್ತಾರೆ.

ರಾಜಕಾರಣಿಗಳು ಇಂತಹ ಸಂಸ್ಥೆಯನ್ನು ಕೆಟ್ಟದಾಗಿ ನೋಡುವ ಬದಲು, ಇವರ ಸೇವೆಯನ್ನು ಗುರುತಿಸಿ ಧನ್ಯವಾದ ಹೇಳಬೇಕು ಎಂದಿದ್ದಾರೆ. ಅಮೆರಿಕದಲ್ಲಿ ಚಿಕ್ಕ ಮಕ್ಕಳ ಸಾವಿನ ಪ್ರಕರಣಗಳಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಪ್ರಾಣ ಬಿಟ್ಟಿರುವ ಪ್ರಕರಣಗಳೇ ಹೆಚ್ಚಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:47 pm, Thu, 18 June 26

Follow Us