ಇಸ್ಲಾಮಾಬಾದ್: ತಮ್ಮ ಹಿಂದಿನ ಹೇಳಿಕೆಯಿಂದ ಯೂಟರ್ನ್ ಮಾಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನನ್ನು ‘ಇಮ್ರಾನ್ ಖಾನ್’ (Imran Khan)ಎನ್ನುವುದಕ್ಕಿಂತ ‘ಇಮ್ರಾನ್ ನಿಯಾಜಿ’ (Imran Niazi) ಎಂದು ಕರೆಯಬೇಕು ಎಂದು ಭಾನುವಾರ ಹೇಳಿದ್ದಾರೆ. ಮಿಯಾನ್ವಾಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಮುಖ್ಯಸ್ಥರು ಡಕಾಯಿತರಿಂದ ನಾನು ಇಮ್ರಾನ್ ನಿಯಾಜಿ ಎಂದು ಕರೆಯಲು ಇಷ್ಟಪಡುತ್ತೇನೆ ಎಂದು ಹೇಳಿರುವುದಾಗಿ ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ. 2018 ರ ಆಗಸ್ಟ್‌ನಲ್ಲಿ ಪ್ರಧಾನಿ ಸ್ಥಾನವನ್ನು ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕ್ಯಾಬಿನೆಟ್ ವಿಭಾಗವು ಅಧಿಸೂಚನೆಯನ್ನು ಹೊರಡಿಸಿ ಪ್ರಧಾನಿಯು ಎಲ್ಲಾ ಅಧಿಕೃತ ಸಂವಹನಗಳಲ್ಲಿ ಅವರ ಹೆಸರನ್ನು ಇಮ್ರಾನ್ ಅಹ್ಮದ್ ಖಾನ್ ನಿಯಾಜಿ ಎಂಬುದರ ಬದಲು ಇಮ್ರಾನ್ ಖಾನ್ ಎಂದು ಬರೆಯಬೇಕೆಂದು ನಿರ್ದೇಶಿಸಿತ್ತು. ಪಾಕಿಸ್ತಾನಿ ಪ್ರಕಟಣೆಯ ಪ್ರಕಾರ ಕ್ಯಾಬಿನೆಟ್ ವಿಭಾಗದ ಕಾರ್ಯದರ್ಶಿ ಫಜಲ್ ಅಬ್ಬಾಸ್ ಮೈಕಾನ್ ಅವರ ಸಹಿಯೊಂದಿಗೆ ಕಚೇರಿ ಜ್ಞಾಪಕ ಪತ್ರವನ್ನು ನೀಡಲಾಗಿದೆ. ಆದಾಗ್ಯೂ ಇಮ್ರಾನ್ ಖಾನ್ ತಮ್ಮ ಮಾತುಗಳನ್ನು ವಾಪಸ್ ಪಡೆಯುವುದು ಅಥವಾ ವಿರೋಧವಾದ ಹೇಳಿಕೆಗಳನ್ನು ನೀಡುವುದು ಅನೇಕ ಬಾರಿ ಕಂಡುಬಂದಿದೆ.
ಈ ಹಿಂದೆ, ಅವರು ತಮ್ಮ “ವಿದೇಶಿ ಪಿತೂರಿ” ಪತ್ರದ ಬಗ್ಗೆ ಯು-ಟರ್ನ್ ಮಾಡಿದ್ದರು, ಇದರಲ್ಲಿ ಅವರು ಅಮೆರಿಕ ಮತ್ತು ದೇಶದ ವಿರೋಧ ಪಕ್ಷಗಳು ತಮ್ಮನ್ನು ಅಧಿಕಾರದಿಂದ ತೆಗೆದುಹಾಕಲು ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.
69ರ ಖಾನ್ ಕಳೆದ ತಿಂಗಳು ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಕೆಳಗಿಳಿದಿದ್ದು, ಅವಿಶ್ವಾಸ ಮತದ ಮೂಲಕ ಪದಚ್ಯುತರಾದ ಮೊದಲ ಪ್ರಧಾನಿಯಾಗಿದ್ದಾರೆ.