
ಅಥೆನ್ಸ್, ಸೆಪ್ಟೆಂಬರ್ 06: ಗ್ರೀಸ್ ರಾಜಧಾನಿ ಅಥೆನ್ಸ್‌ನ ಉತ್ತರ ಭಾಗದಲ್ಲಿ ನಡೆಯುತ್ತಿದ್ದ ‘ಅಥೆನ್ಸ್ ಫ್ಲೈಯಿಂಗ್ ವೀಕ್’ ವಾರ್ಷಿಕ ಏರ್ ಶೋ ವೇಳೆ ಗ್ರೀಕ್ ವಾಯುಪಡೆಯ ಎಫ್-4 ಫ್ಯಾಂಟಮ್ ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಟನಾಗ್ರಾ ಏರ್‌ಬೇಸ್‌ನಲ್ಲಿ ಸಾವಿರಾರು ಪ್ರೇಕ್ಷಕರು ವೀಕ್ಷಿಸುತ್ತಿದ್ದಂತೆಯೇ ಕಡಿಮೆ ಎತ್ತರದಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದ ವಿಮಾನ ದಿಢೀರನೆ ನೆಲಕ್ಕುರುಳಿ ಬೆಂಕಿಯುಂಡೆಯಾಗಿ ಸ್ಫೋಟಗೊಂಡಿದೆ. ಈ ದುರಂತದಲ್ಲಿ ವೀಕ್ಷಕರಿಗೆ ಯಾವುದೇ ಅಪಾಯವಾಗಿಲ್ಲವಾದರೂ, ವಾಯುನೆಲೆ ಆವರಣದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾರಾಂತ್ಯದ ಎಲ್ಲಾ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ.
ಕಡಿಮೆ ಎತ್ತರದ ಸಾಹಸ: ಅಥೆನ್ಸ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಟನಾಗ್ರಾ ವಾಯುನೆಲೆಯಲ್ಲಿ ನಡೆದ ಪ್ರದರ್ಶನದಲ್ಲಿ, ಎರಡು ಆಸನಗಳ ಎಫ್-4 ಫ್ಯಾಂಟಮ್ ಜೆಟ್ ನೆಲಮಟ್ಟಕ್ಕೆ ಹತ್ತಿರವಾಗಿ ಬಲಕ್ಕೆ ತಿರುವು ಪಡೆಯುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಅಪ್ಪಳಿಸಿದೆ.
ಸರಣಿ ಸ್ಫೋಟ ಹಾಗೂ ದಟ್ಟ ಹೊಗೆ: ವಿಮಾನ ನೆಲಕ್ಕೆ ಬಡಿದ ಕೆಲವೇ ಕ್ಷಣಗಳಲ್ಲಿ ಮೊದಲ ಸ್ಫೋಟ ಸಂಭವಿಸಿ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿತು. ನಂತರ ವಿಮಾನದ ಭಾಗಗಳು ಛಿದ್ರಗೊಂಡಾಗ ಸಮೀಪದಲ್ಲೇ ಮತ್ತೊಂದು ಬೃಹತ್ ಸ್ಫೋಟ ಸಂಭವಿಸಿತು.
ವಿಮಾನವು ಅತ್ಯಂತ ವೇಗವಾಗಿ ಭೂಮಿಗೆ ಅಪ್ಪಳಿಸಿದ್ದರಿಂದ ಪೈಲಟ್‌ಗಳಿಗೆ ಪ್ಯಾರಾಚೂಟ್ ಮೂಲಕ ಹೊರಜಿಗಿಯಲು ಸಮಯವೇ ಸಿಗಲಿಲ್ಲ ಎನ್ನಲಾಗಿದೆ. ಶೋಧ ಕಾರ್ಯಾಚರಣೆಯ ನಂತರ ಇಬ್ಬರೂ ಪೈಲಟ್‌ಗಳ ಮೃತದೇಹಗಳನ್ನು ಹೊರತೆಗೆಯಲಾಯಿತು.
ಮತ್ತಷ್ಟು ಓದಿ: ಆಕಾಶದಲ್ಲಿ ಅಪಾಯದಿಂದ ಪಾರಾದ ಟ್ರಂಪ್: ಮರೀನ್ ಒನ್ ಹೆಲಿಕಾಪ್ಟರ್ ಬಳಿ ಬಂದ ವಿಮಾನ, ಎಫ್‌ಎಎ ತನಿಖೆ
ಬೃಹತ್ ಬೆಂಕಿ ನಂದಿಸುವ ಕಸರತ್ತು: ವಿಮಾನ ಪತನದಿಂದಾಗಿ ವಾಯುನೆಲೆ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿತು. ಬೆಂಕಿಯನ್ನು ಹತೋಟಿಗೆ ತರಲು 85 ಅಗ್ನಿಶಾಮಕ ಸಿಬ್ಬಂದಿ, 11 ನೀರು ಚಿಮುಕಿಸುವ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಯಿತು.
ಸ್ಥಳಾಂತರ ಆದೇಶ: ಪ್ರೇಕ್ಷಕರ ಗ್ಯಾಲರಿಯಿಂದ ಬೆಂಕಿ ತುಸು ದೂರದಲ್ಲಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ವಾಯುನೆಲೆಯ ಸಮೀಪದ ನಿವಾಸಿಗಳನ್ನು ಸ್ಥಳಾಂತರಿಸಲು ಸೂಚಿಸಲಾಯಿತು.
ವಿಡಿಯೋ
BREAKING: A Greek Air Force F-4 Phantom crashed at Tanagra Air Base during Athens Flying Week.
There is no official update yet on the crew’s condition or the cause of the crash.pic.twitter.com/N9GOumMn2K
— Clash Report (@clashreport) September 5, 2026
ಏರ್ ಶೋ ರದ್ದು : ಘಟನೆಯ ಬೆನ್ನಲ್ಲೇ ಉಳಿದೆಲ್ಲಾ ವೈಮಾನಿಕ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಹಾಗೂ ಸೈಪ್ರಸ್ ರಕ್ಷಣಾ ಸಚಿವ ವಾಸಿಲಿಸ್ ಪಾಲ್ಮಾಸ್ ಮೃತ ಪೈಲಟ್‌ಗಳ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಜೆಟ್‌ನ ಕೊನೆಯ ಹಾರಾಟಗಳಲ್ಲಿ ಒಂದಾಗಿತ್ತು: ಗ್ರೀಕ್ ವಾಯುಪಡೆಯಲ್ಲಿ ಎಫ್-4 ಫ್ಯಾಂಟಮ್ ಯುದ್ಧ ವಿಮಾನಗಳು 1974 ರಿಂದ ಸೇವೆಯಲ್ಲಿವೆ. ಶೀಘ್ರದಲ್ಲೇ ಈ ವಿಮಾನಗಳನ್ನು ನಿವೃತ್ತಿಗೊಳಿಸಲು ಗ್ರೀಸ್ ಯೋಜಿಸಿದ್ದು, ಈ ಬಾರಿಯ ‘ಅಥೆನ್ಸ್ ಫ್ಲೈಯಿಂಗ್ ವೀಕ್’ ಈ ವಿಮಾನದ ಅಂತಿಮ ಸಾರ್ವಜನಿಕ ಪ್ರದರ್ಶನಗಳಲ್ಲಿ ಒಂದಾಗಿತ್ತು.
3 ದಿನಗಳ ಅಧಿಕೃತ ಶೋಕಾಚರಣೆ: ದುರಂತದಲ್ಲಿ ಕರ್ತವ್ಯನಿರತ ಇಬ್ಬರು ಹೆಲೆನಿಕ್ ವಾಯುಪಡೆ ಅಧಿಕಾರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರೀಕ್ ವಾಯುಪಡೆಯು 3 ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ.
2023 ರ ದುರಂತದ ನೆನಪು: ಜನವರಿ2023 ರಲ್ಲೂ ಗ್ರೀಸ್‌ನ ಇದೇ ಮಾದರಿಯ ಎಫ್-4 ಜೆಟ್ ಕಡಿಮೆ ಎತ್ತರದ ತರಬೇತಿ ಕಾರ್ಯಾಚರಣೆ ವೇಳೆ ಅಯೋನಿಯನ್ ಸಮುದ್ರಕ್ಕೆ ಬಿದ್ದು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ